ಆತ್ಮಹತ್ಯೆಗೆ ಶರಣಾದ ಪತಿ-ಪತ್ನಿ | ನಾಲ್ಕೇ ತಿಂಗಳಲ್ಲಿ ಅಂತ್ಯ ಕಂಡ ಈ ಪ್ರೇಮ ವಿವಾಹ

ಬೆಂಗಳೂರು: ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾದ ಪ್ರೇಮಿಗಳ ವೈವಾಹಿಕ ಜೀವನ ದುರಂತ ಅಂತ್ಯ ಕಂಡಿದೆ. ಆತ್ಮಹತ್ಯೆಯಿಂದ ಪತ್ನಿ ಸಾವಿಗೀಡಾದ ಬೆನ್ನಿಗೇ ಪತಿಯೂ ನೇಣು ಬಿಗಿದು ಸಾವನ್ನಪ್ಪಿದ ಘಟನೆ ನಡೆದಿದೆ.

 

ಪತಿ ಪುನೀತ್ (21) ಹಾಗೂ ಹರ್ಷಿತಾ (19) ಮೃತಪಟ್ಟ ದಂಪತಿ. ಆತ್ಮಹತ್ಯೆ ಮಾಡಿಕೊಂಡಿರುವ ಸತಿ-ಪತಿ ಇಬ್ಬರೂ ಮಾಗಡಿ ಚೆನ್ನೇನಹಳ್ಳಿ ನಿವಾಸಿಗಳಾಗಿದ್ದು, ಮದುವೆ ಬಳಿಕ ಹೇರೋಹಳ್ಳಿಯಲ್ಲಿ ವಾಸವಾಗಿದ್ದರು. ಇಂದು ಸಂಜೆ ನಾಲ್ಕು ಗಂಟೆಗೆ ಪತಿ ಪುನೀತ್ ಮನೆಗೆ ಮರಳಿದಾಗ ಪತ್ನಿ ನೇಣು ಹಾಕಿಕೊಂಡಿದ್ದ ಸ್ಥಿತಿಯಲ್ಲಿ ಇರುವುದು ಕಂಡು ಬಂದಿತ್ತು. ಪುನೀತ್ ಕೂಡಲೇ ಸ್ಥಳೀಯರ ಸಹಾಯದಿಂದ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದ. ಆದರೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.

ಪತ್ನಿಯ ಸಾವಿನಿಂದ ತೀವ್ರ ಆಘಾತಕ್ಕೆ ಒಳಗಾದ ಪುನೀತ್, ನಂತರ ಮನೆಗೆ ಬಂದು ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿ ಹರ್ಷಿತಾ ಬರೆದಿರುವ ಡೆತ್ ನೋಟ್ ಸಿಕ್ಕಿದೆ.ನಾವು ಆರು ವರ್ಷಗಳಿಂದ ಪ್ರೀತಿಸುತ್ತಿದ್ದು, ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿದ್ದೆವು. ಆದರೆ ಮನೆಯವರ ಕಿರುಕುಳ ಹೆಚ್ಚಾಗಿದೆ ಎಂದು ಅದರಲ್ಲಿ ಬರೆಯಲಾಗಿದೆ. ಪುನೀತ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಪ್ರೀತಿಯಿಂದ ಸುಖವಾಗಿ ಬಾಳಬೇಕಾದ ದಾಂಪತ್ಯ ಬಹುಬೇಗನೆ ಅಂತ್ಯ ಕಂಡಿದೆ.

Leave A Reply

Your email address will not be published.