ಅಂಗಡಿಯಿಂದ ಹಾಗೂ ಮಸೀದಿಯಿಂದ ಕಳವು

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಎಂಬಲ್ಲಿನ ರಝಾಕ್ ಸ್ಟೋರ್ ಎಂಬ ಅಂಗಡಿಯಿಂದ 12 ಸಾವಿರ ರೂ. ನಗದು ಕಳವಾದ ಬಗ್ಗೆ ಅಂಗಡಿಯ ಮಾಲಕ ಮುಹಮ್ಮದ್ ನವಾಝ್ ಪೊಲೀಸರಿಗೆ ದೂರು ನೀಡಿದ್ದಾರೆ.

 

ಮೇ 23ರಂದು ಬೆಳಗ್ಗೆ 9:30ಕ್ಕೆ ತನ್ನ ಅಂಗಡಿಯ ಬಾಗಿಲು ಹಾಕಿ ಹೋಗಿದ್ದ ನವಾಝ್ ಮೇ 24ರಂದು ಬೆಳಗ್ಗೆ 7ಕ್ಕೆ ಆಗಮಿಸಿದಾಗ ಯಾರೋ ಕಳ್ಳರು ಕಿಟಕಿಯ ಮೂಲಕ ಡ್ರಾಯರ್‌ನಲ್ಲಿರಿಸಿದ್ದ ನಗದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇನ್ನೊಂದೆಡೆ ಚೊಕ್ಕಬೆಟ್ಟುವಿನ ತಣ್ಣೀರುಬಾವಿ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಎದುರುಗಡೆ ಇದ್ದ ಕಾಣಿಕೆ ಡಬ್ಬವನ್ನು ಒಡೆದ ಕಳ್ಳರು ಸುಮಾರು 16 ಸಾವಿರ ರೂ. ನಗದು ಮತ್ತು ಮಸೀದಿಯ ಕಚೇರಿಗೆ ನುಗ್ಗಿ ಡ್ರಾಯರ್‌ನಲ್ಲಿರಿಸಿದ್ದ 1,700 ರೂ.ವನ್ನು ಕಳವು ಮಾಡಿದ ಬಗ್ಗೆ ಸುರತ್ಕಲ್ ಠಾಣೆಗೆ ದೂರು ನೀಡಲಾಗಿದೆ.

ಅಂದಾಜು 17,700 ರೂ.ನಗದು ಕಳವಾಗಿದ್ದು, ಜಮಾಅತ್ ಕಮಿಟಿಯವರೊಂದಿಗೆ ಚರ್ಚಿಸಿದ ಬಳಿಕ ತಡವಾಗಿ ದೂರು ನೀಡಲಾಗಿದೆ ಎಂದು ಮಸೀದಿಯ ಅಧ್ಯಕ್ಷ ಅಮೀರ್ ಹುಸೈನ್ ಪೊಲೀಸರಲ್ಲಿ ತಿಳಿಸಿದ್ದಾರೆ.

ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Leave A Reply

Your email address will not be published.