ಸರಕಾರದ ಆದೇಶ ಪಾಲನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ಸೇವೆ ಸ್ಥಗಿತ | ದೂರದ ಊರಿಂದ ಸೇವೆಗಾಗಿ ಬಂದ ಭಕ್ತರ ಆಕ್ರೋಶ
ಸುಬ್ರಹ್ಮಣ್ಯ: ರಾಜ್ಯ ಸರ್ಕಾರದ ಆದೇಶ ಪಾಲನೆ ಮಾಡುವ ಹಿನ್ನೆಲೆಯಲ್ಲಿ ಪ್ರಸಿದ್ದ ನಾಗಕ್ಷೇತ್ರ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಬುಧವಾರ ಸರ್ಪ ಸಂಸ್ಕಾರ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಇದು ದೂರದ ಊರಿನಿಂದ ಬಂದ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.ಪೂಜೆಗಾಗಿ ಮುಂಗಡವಾಗಿ ಬುಕಿಂಗ್ ಮಾಡಿ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಆಡಳಿತ ಮಂಡಳಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಬಗ್ಗೆ ವರದಿಯಾಗಿದೆ.
2 ತಿಂಗಳುಗಳ ಹಿಂದೆ ಸರ್ಪ ಸಂಸ್ಕಾರ ಸೇವೆಯನ್ನು ಬುಕಿಂಗ್ ಮಾಡಲಾಗಿತ್ತು. ನಮಗೆ ನೀಡಿದ್ದ ದಿನಾಂಕಕ್ಕೆ ಅನುಗುಣವಾಗಿ ಎ.21ಕ್ಕೆ ದೇವಾಲಯಕ್ಕೆ ಬಂದಿದ್ದೇವೆ.ಈಗ ಸೇವೆ ಲಭ್ಯ ಇಲ್ಲ ಎಂಬ ಮಾಹಿತಿಯನ್ನು ನೀಡುತ್ತಿದ್ದಾರೆ ಇದು ಸರಿಯಲ್ಲ ಎಂದು ಭಕ್ತರು ತಿಳಿಸಿದ್ದಾರೆ.
ಸರ್ಪ ಸಂಸ್ಕಾರ ಸೇವೆ ವಾರದಲ್ಲಿ ಎರಡು ದಿನ ನಡೆಯುತ್ತದೆ. ಗುರುವಾರಕ್ಕೆ ಸೇವೆಗೆ ಅವಕಾಶ ಇಲ್ಲದ ಕಾರಣ ಈ ಸೇವೆಯನ್ನು ಬುಧವಾರ ಬಂದ್ ಮಾಡಲಾಗಿದೆ.ಸರಕಾರದ ಆದೇಶ ಪಾಲನೆ ನಮ್ಮ ಕರ್ತವ್ಯ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಮ್ ಸುಳ್ಳಿ ಅವರು,ಸ್ಥಳಕ್ಕಾಗಮಿಸಿ ಸರ್ಕಾರ ಮಂಗಳವಾರ ಹೊರಡಿಸಿದ ಹೊಸ ಆದೇಶದ ಕುರಿತಂತೆ ಭಕ್ತರಿಗೆ ಮನವರಿಕೆ ಮಾಡಿದರು.ಮುಂಗಡವಾಗಿ ಬುಕ್ ಮಾಡಿ ಹಣ ಕಟ್ಟಿದ್ದ ಭಕ್ತರಿಗೆ ದೇಗುಲದ ಆಡಳಿತ ಮಂಡಳಿ ಹಣ ಹಿಂತಿರುಗಿಸಿದ್ದು ಮುಂದಿನ ದಿನವನ್ನು ಆಯ್ಕೆ ಮಾಡುವಂತೆ ಸಲಹೆ ನೀಡಿದೆ.