ಕೇರಳ : ಗರ್ಭಿಣಿ ಆನೆಯ ಹತ್ಯೆ| ಅಮಾನವೀಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ

ತಿರುವನಂತಪುರ: ಗರ್ಭ ಧರಿಸಿದ್ದ ಆನೆಯೊಂದರ ಬಾಯೊಳಗೆ ಸ್ಫೋಟಕ ಸಿಡಿಸಿ ಈ ಪ್ರಾಣಿಯ ಮೇಲೆ ಕೆಲ ದುಷ್ಕರ್ಮಿಗಳು ವಿನಾ ಕಾರಣದ ಕ್ರೌರ್ಯ ಮೆರೆದಿದ್ದಾರೆ.

ಸ್ಫೋಟಕ ಅಡಗಿಸಿಟ್ಟ ಅನಾನಸ್‌ ಹಣ್ಣು ಸೇವಿಸಿದಾಗ ಅದು ಆನೆಯ ಬಾಯಿಯಲ್ಲಿ ಸ್ಫೋಟಿಸಿದೆ. ತತ್ಪರಿಣಾಮ ಗಬ್ಬದ ಆನೆ ತನ್ನೊಡಲ ಕಂದನ ಸಮೇತ ದುರಂತ ಸಾವು ಕಂಡಿದೆ.

ಕಳೆದ ಬುಧವಾರ ನಡೆದಿರುವ ಈ ಘಟನೆಯ ವಿವರಗಳನ್ನು ಮಲಪ್ಪುರಂ ಜಿಲ್ಲೆಯ ಅರಣ್ಯಾಧಿಕಾರಿ ಮೋಹನ್‌ ಕೃಷ್ಣನ್‌ ಅವರು ಫೇಸ್‌ಬುಕ್‌ ಮೂಲಕ ಬಹಿರಂಗಪಡಿಸಿದ ಬಳಿಕವೇ ಹೊರ ಜಗತ್ತಿಗೆ ಗೊತ್ತಾಗಿದೆ. ಅರಣ್ಯ ತೊರೆದಿದ್ದ ಈ ಆನೆ ಹಸಿವಿನಿಂದ ಸಮೀಪದ ಗ್ರಾಮಕ್ಕೆ ತೆರಳಿತ್ತು. ಹಾಗೆ ಊರಿಗೆ ಬಂದು ಬೀದಿಯಲ್ಲಿ ತೆರಳುತ್ತಿದ್ದಾಗ ಅನಾನಸ್‌ ಹಣ್ಣಿನಲ್ಲಿ ಸ್ಫೋಟಕಗಳನ್ನಿಟ್ಟು ನೀಡಲಾಗಿದೆ.

ಅನಾನಸ್‌ ಸೇವಿಸಿದಾಗ ಏಕಾಏಕಿ ಪಟಾಕಿಗಳು ಸ್ಫೋಟಗೊಂಡಿವೆ. ಇದರಿಂದ, ಆನೆ ಆಘಾತಕ್ಕೆ ಒಳಗಾಗಿದೆ. ಸ್ಫೋಟದ ತೀವ್ರತೆಗೆ ಬಾಯಿ ಮತ್ತು ನಾಲಿಗೆಯಲ್ಲಿ ದೊಡ್ಡ ದೊಗರು ಉಂಟಾಗಿದೆ. ಆನೆಯು ನೋವು ಮತ್ತು ಹಸಿವಿನಿಂದಲೇ ಗ್ರಾಮದಲ್ಲಿ ಓಡಾಡುತ್ತ ಸುತ್ತಾಡಿದೆ. ಬಾಯಿಗೆ ಆದ ಗಾಯದಿಂದಾಗಿ ಏನನ್ನೂ ತಿನ್ನಲು ಸಾಧ್ಯವಾಗಿಲ್ಲ. ನೋವಿನಿಂದ ಬಳಲಿದರೂ ಗ್ರಾಮದ ಯಾರೊಬ್ಬರಿಗೂ ತೊಂದರೆ ನೀಡಿಲ್ಲ. ಈ
‘ ಆನೆಯು ದೇವಿ ಸ್ವರೂಪಿ’ ಎಂದು ಕೃಷ್ಣನ್‌ ಬರೆದಿದ್ದಾರೆ.

‘ನೋವು ಸಹಿಸಿಕೊಳ್ಳದ ಆನೆಯು ವೆಲ್ಲಿಯಾರ್‌ ನದಿಗೆ ತೆರಳಿ ಅಲ್ಲಿಯೇ ಬಹುಹೊತ್ತಿನವರೆಗೆ ನಿಂತುಕೊಂಡಿತ್ತು. ಆನೆಯನ್ನು ನೀರಿನಿಂದ ಹೊರಗೆ ತರಲು ಮತ್ತೆ ಎರಡು ಆನೆಗಳನ್ನು ತರಲಾಯಿತು. ಆದರೆ, ಅದು ಬರಲಿಲ್ಲ. ಆನೆಯನ್ನು ರಕ್ಷಿಸುವ ನಮ್ಮ ಎಲ್ಲ ಪ್ರಯತ್ನಗಳು ವಿಫಲವಾದವು. ಕೊನೆಗೆ ಮೇ 27 ರಂದು ಮಧ್ಯಾಹ್ನ 4 ಗಂಟೆ ನೀರಲ್ಲೇ ನಿಂತು ಸಾವಿಗೀಡಾಯಿತು’ ಎಂದವರು ವಿವರಿಸಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯರು, ನೀರಲ್ಲೇ ಬಹುಹೊತ್ತು ನಿಂತಿದ್ದ ಆನೆ ಉಸಿರಾಟದ ತೊಂದರೆಯಿಂದ ಸಾವಿಗೀಡಾಗಿದೆ ಎಂದು ಹೇಳಿದ್ದಾರೆ.

ಆನೆಯ ಬರ್ಬರ ಹತ್ಯೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪ್ರಾಣಿ ಪ್ರಿಯರು , ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಇದನ್ನು ಒಕ್ಕೊರಲಿನಿಂದ ಖಂಡಿಸಿದ್ದಾರೆ.

ಟ್ವಿಟರ್ ನಲ್ಲಿ ಗರ್ಭಿಣಿ ಆನೆಯ ಬರ್ಬರ ಹತ್ಯೆಗೆ ಮಾಜಿ ಪೊಲೀಸ್ ಅಧಿಕಾರಿ ಅಣ್ಣಾ ಮಲೈ ಕಂಬನಿ ಮಿಡಿದಿದ್ದಾರೆ. ಆನೆ ತನ್ನದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಂಡಿದೆ. ಕಾಡಿನಲ್ಲಿ ಆನೆ ಒಳ್ಳೆಯದನ್ನು ಮಾತ್ರ ಪಸರಿಸುತ್ತಾ ವಿಹರಿಸುತ್ತಿತ್ತು. ಆದರೆ ದುಷ್ಟ ಮಾನವ ಇದನ್ನು ಹತ್ಯೆ ಮಾಡಿದ್ದಾನೆ. ಕ್ರೂರಿಗಳು ಕೇವಲ ಮನುಷ್ಯರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಅಣ್ಣಾ ಮಲೈ ಟ್ವಿಟರ್ ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸತ್ ಸದಸ್ಯೆ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕೂಡ ಇದರ ವಿರುದ್ಧ ಧ್ವನಿ ಎತ್ತಿದ್ದಾರೆ.

Leave A Reply

Your email address will not be published.