ಕೊಲೆ ಯತ್ನ ಪ್ರಕರಣದ ಆರೋಪಿ ದಾರಿ ಮಧ್ಯೆಯೇ ಎಸ್ಕೇಪ್ | ಬೈಕ್ ನಿಲ್ಲಿಸಿ ಕೀ ಅಲ್ಲೇ ಬಿಟ್ಟು ಇನ್ನೊಬ್ಬನನ್ನು ಹಿಡಿಯಲು ಹೋದ ಪೊಲೀಸರಿಗೆ ಕಿಸಾನ್ ಜಾಮ್ ತಿನ್ನಿಸಿದ ಖಿಲಾಡಿ

ಉಳ್ಳಾಲ, ಜೂನ್ 3 : ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದವನು ಕೆಲ ತಿಂಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿದ ಬೆನ್ನಲ್ಲೇ ಸಿನಿಮೀಯ ಮಾದರಿಯಲ್ಲಿ ಪರಾರಿಯಾಗಿದ್ದಾನೆ.

ಈತ ವಿಚಾರಣೆ ವೇಳೆ ಈತನೊಂದಿಗಿದ್ದ ಮತ್ತೊಬ್ಬನ ಮಾಹಿತಿ ನೀಡುವುದಾಗಿ ತಿಳಿಸಿ ಪೊಲೀಸರನ್ನು ಆತನೊಂದಿಗೆ ಕರೆದುಕೊಂಡು ಹೋಗಿದ್ದ. ಮಧ್ಯೆ ಅವರಿಗೆ ಚಳ್ಳೆಹಣ್ಣು ಜಾಮೂನು ಮಿಕ್ಸ್ ಮಾಡಿ ತಿನ್ನಿಸಿ ಅವರ ಬೈಕಿನಲ್ಲೇ ಪರಾರಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಉಳ್ಳಾಲದಲ್ಲಿ ಆರೋಪಿ ಕೊಲೆ ಯತ್ನದ ಬಳಿಕ ತನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ. ರಂಜಾನ್ ಹಬ್ಬಕ್ಕಾಗಿ ಈತ ಮತ್ತೆ ಊರಿಗೆ ಬಂದಿದ್ದು, ವಿಷಯ ತಿಳಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ತನ್ನೊಂದಿಗಿದ್ದ ಮತ್ತೊಬ್ಬನ ಮಾಹಿತಿ ನೀಡುವುದಾಗಿ ಈತ ತಿಳಿಸಿದ್ದಾನೆ.

ಈತನ ಮಾತನ್ನು ನಂಬಿದ ಪೊಲೀಸರು ಒಂದು ಬೈಕಿನಲ್ಲಿ ಆರೋಪಿಯನ್ನು ಮಧ್ಯ ಕೂರಿಸಿಕೊಂಡು ಹಿಂದೆ ಮುಂದೆ ಒಬ್ಬೊಬ್ಬರು ಕೂತಿದ್ದಾರೆ. ಹೀಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ವ್ಯಕ್ತಿಯೊಬ್ಬನನ್ನು ತೋರಿಸಿ ಈತನೇ ನನ್ನೊಂದಿಗಿದ್ದವನು ಎಂದು ಹೇಳಿದ್ದಾನೆ. ಆಗ ಬೈಕಿನಲ್ಲಿದ್ದ ಇಬ್ಬರು ಪೊಲೀಸರು ಬೈಕು ನಿಲ್ಲಿಸಿ ಕೀ ಅಲ್ಲೇ ಬಿಟ್ಟು ಧಬ ಧಬ ಅಂತ ಈತ ತೋರಿಸಿದವನನ್ನು ಹಿಡಿಯಲು ಓಡಿದ್ದಾರೆ.

ಇದೇ ಸಂದರ್ಭ ಸಾಧಿಸಿದ ಆರೋಪಿ ಪೊಲೀಸರ ಬೈಕ್ ಸ್ಟಾರ್ಟ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಅವನು ತೋರಿಸಿದ ವ್ಯಕ್ತಿಯನ್ನು ಹಿಡಿದ ಪೊಲೀಸರಿಗೆ ಆತ ಆರೋಪಿಯಲ್ಲ ಎಂದು ತಿಳಿದುಬಂದಿದೆ. ಆ ನಂತರ ಆರೋಪಿ ಅಬ್ಬಕ್ಕ ವೃತ್ತದ ಬಳಿ ಬೈಕ್ ಬಿಟ್ಟುಹೋಗಿದ್ದಾನೆ. ಕೈಗೆ ಸಿಕ್ಕ ಒಬ್ಬ ಆರೋಪಿಯನ್ನು ಪರಾರಿಯಾಗಲು ಬಿಟ್ಟ ಪೊಲೀಸರ ತಪ್ಪಿಗೆ ಹಿರಿಯ ಅಧಿಕಾರಿಗಳು ಗರಂ ಆಗಿದ್ದಾರೆ.

Leave A Reply

Your email address will not be published.