ಸ್ವಾವಲಂಬಿ ಭಾರತ ನಿರ್ಮಿಸಲು ಒಂದು ಹೆಜ್ಜೆ ಮುಂದಿಡೋಣವೇ..?

ಮಿತ್ರರೇ.., ಕೊರೋನಾ ಭಾರತೀಯರನ್ನು ಬದಲಾಯಿಸುತ್ತಿದೆ. ನೈಜ ಭಾರತದ ಶಕ್ತಿ ನಮಗೇ ತಿಳಿಯುತ್ತಿದೆ. ತಿಳಿಯುತ್ತಿಲ್ಲ‌ವೆಂದರೆ ವಾಸ್ತವತೆಯೊಡನೆ ನಾವು ಬದುಕುತ್ತಿಲ್ಲವೆಂದರ್ಥ..!!

ನಮ್ಮ ಪ್ರಧಾನಿ‌ಯವರು ಭಾರತ ಆತ್ಮನಿರ್ಭರವಾಗಬೇಕೆಂಬ ಆಶಯವನ್ನು ಹೊರಹಾಕಿದ್ದಾರೆ. ಭಾರತ‌ವು ಸ್ವಾವಲಂಬಿಯಾಗಬೇಕಿದ್ದರೆ ನಾವು, ನೀವು ಎಲ್ಲರೂ ಕೈ ಜೋಡಿಸಬೇಕಿದೆ. ತಾಯಿಯ ಉನ್ನತಿಗೆ ನಾವೆಲ್ಲರೂ ಕಾರಣರಾಗಬೇಕಿದೆ. ಮಗುವಾಗಿ‌ದ್ದಾಗ ನಾವಿಟ್ಟ ಪುಟ್ಟ ಪುಟ್ಟ ಹೆಜ್ಜೆಗಳು ನಾವೀಗ ಸರಿಯಾಗಿ ನಡೆದಾಡಲು ಕಾರಣವಾಗಿದೆ. ಕಣ್ಣಿಗೆ ಸುಂದರವಾಗಿ ಕಂಡು ನಮ್ಮನ್ನು ಮುಳುಗಿಸುವ ಪಾಶ್ಚಾತ್ಯ‌ರ ಮಾಂತ್ರಿಕ ಗಾಳಗಳಿಂದ ನಾವು ತಪ್ಪಿಸಿಕೊಳ್ಳಬೇಕಿದೆ. ಈ ತಂತ್ರಜ್ಞಾನ‌ ಯುಗದಲ್ಲಿ ನಾವು ಒಂದಷ್ಟು ಹಿಂದೆ ಇದ್ದೇವೆ. ಒಪ್ಪಿಕೊಳ್ಳಲೇ ಬೇಕಾದ ಸತ್ಯವಿದು..! ಪರರನ್ನು ಅಗತ್ಯಕ್ಕಿಂತ ಹೆಚ್ಚಾಗಿ ಅವಲಂಬಿಸಿ‌ದ್ದೇವೆ ಎಂದರೆ ತಪ್ಪಾಗಲಾರದು. ಭಾರತ ಬದಲಾಗಬೇಕಿರುವುದಲ್ಲ ನಾವು ಬದಲಾಗಬೇಕಿದೆ..!!

ಪ್ರಮುಖ‌ವಾಗಿ ಚೀನಾ ಗಡಿಯಲ್ಲಿ ಕಾಲು ಕೆರೆಯತ್ತಾ ಒಳಗೆ ತಂತ್ರಜ್ಞಾನದ ಮೂಲಕ ನಮ್ಮನ್ನು ಬಂಧಿಸಿ ಬಿಟ್ಟಿದೆ. ನಮ್ಮ ಕೈಯಲ್ಲಿ‌ರುವ ಮೊಬೈಲುಗಳು ಬಹುಪಾಲು ಚೈನಾದ್ದೇ..! ಹಾಗೇ ಅದರಲ್ಲಿರುವ ಆ್ಯಪ್‌ಗಳು ಬಹುತೇಕ ಚೈನಾದ್ದೇ..!! ಅದರಲ್ಲೂ ಮನರಂಜನಾ ಆ್ಯಪ್‌‌ಗಳು ನಮಗೆ ಗೊತ್ತಿಲ್ಲದಂತೆ ನಮ್ಮನ್ನು ಅದಕ್ಕೆ ಅಡಿಕ್ಟ್ ಆಗಿರುವಂತೆ ಮಾಡುತ್ತವೆ. ವಿಪರೀತ‌ವಾಗಿ ಹಚ್ಚಿಕೊಂಡು ಅವುಗಳ ಬಲೆಯಲ್ಲಿ ಸಿಲುಕಿ ಬಲಿಯಾದ ಜೀವಗಳ ಉದಾಹರಣೆ ಅದೆಷ್ಟೋ ನಮ್ಮ ಮುಂದಿವೆ. ಬಲಿಯಾದ ಜೀವಗಳ ಮೇಲೆ ಕನಸು ಕಟ್ಟಿಕೊಂಡಿದ್ದ ಅವಲಂಬಿತರನ್ನು ನೆನೆಸಿಕೊಂಡಾಗ ಒಮ್ಮೆಲೇ ಎದೆ ಝಲ್ ಎನ್ನುವುದಿಲ್ಲವೇ..?

ಮೊನ್ನೆಯಷ್ಟೇ ಸಾಮಾಜಿಕ ಮಾಧ್ಯಮ‌ಗಳಲ್ಲಿ ‘ಜನಪ್ರಿಯ ಚೈನಾ ಆ್ಯಪ್’ ಟಿಕ್‌ಟಾಕ್ ವಿರುದ್ಧ ಅಭಿಯಾನ ನಡೆದು ಅದರ ರೇಟಿಈ 1.4* ಕ್ಕೆ ಕುಸಿದು ಗೂಗಲ್ ಪ್ಲೇ ಸ್ಟೋರ್ ನಿಂದ ಹೊರ ದಬ್ಬಿಸಿಕೊಳ್ಳುವ ಎಚ್ಚರಿಕೆ‌ಯನ್ನು ಪಡೆದಿತ್ತು. ಆದರೆ ಈಗ ಅದು 4.4* ರೇಟಿಂಗ್ ನೊಂದಿಗೆ ವಿರಾಜಮಾನವಾಗಿ ಕುಳಿತಿದೆ. ನಾವು ಭಾರತೀಯರೇ ಹಾಗೇ ಬೇಗ ಎಲ್ಲವನ್ನು ಮರೆತು ಬಿಡುತ್ತೇವೆ. ಈ ತರಹದ ನಮ್ಮನ್ನು ದಾಸರನ್ನಾಗಿ ಮಾಡುವ ಆ್ಯಪ್‌ಗಳು ಮಾಡುವ ಘನಂದಾರಿ ಕೆಲಸಗಳು ಒಂದೇ ಎರಡೇ..!?

ಹೀಗೇ ಇನ್ನೆಷ್ಟೋ ಇದೆ. ಈಗ ಚೀನಾದೇ ಕೂಸಾಗಿರುವ ಕೊರೋನಾ ನಮ್ಮನ್ನು ಬದಲಾವಣೆ‌ಯತ್ತ ಸೆಳೆಯುತ್ತಿದೆ. ನಮ್ಮದೇ ದೇಶದ ಒನ್ ಟಚ್ ಆ್ಯಪ್‌ ಲ್ಯಾಬ್ಸ್ ಹೊರತಂದಿರುವ ರಿಮೂವ್ ಚೈನಾ ಆ್ಯಪ್ಸ್ (Remove Chaina Apps) ಒಂದು ವಿಶಿಷ್ಟ ಆ್ಯಪ್. ಚೈನಾ ಆ್ಯಪ್‌ಗಳನ್ನು ಹುಡುಕಿ ಅನ್ಇನ್ಸ್ಟಾಲ್ ಮಾಡಲು. ಇದು ನಮ್ಮ ದೇಶದ ಉತ್ಪನ್ನ. ಒಂಥರಾ ಮದ್ಯವರ್ಜನಾ ಶಿಬಿರ ಇದ್ದಂತೆ. ನಮ್ಮ ಮೊಬೈಲ್‌ನಲ್ಲಿದ್ದು ನಮ್ಮನ್ನೇ ಬಳಸಿಕೊಂಡು ಚೀನಾದ ಬೊಕ್ಕಸಕ್ಕೆ ಹಣವನ್ನು ಸುರಿಯುತ್ತಾ, ನಮ್ಮ ವೈಯಕ್ತಿಕ ‌ವಿವರಗಳಿಗೆ ಕೈ ಹಾಕಿ ನಮ್ಮನ್ನು ಹೆಣವಾಗಿಸಲು ಯೋಚಿಸುತ್ತಿರುವ ಚೈನಾ ಆ್ಯಪ್‌ಗಳನ್ನು ಆದಷ್ಟು ದೂರವಿಟ್ಟು ಅಂದರೆ ಅನ್‌ಇನ್ಸ್ಟಾಲ್ ಮಾಡುವ ಮೂಲಕ ನಮ್ಮ ಸುತ್ತ ಹೆಣೆದಿರುವ ಸಂಕೋಲೆಯಿಂದ ಸಾಧ್ಯವಾದಷ್ಟು ಕಳಚಿಕೊಳ್ಳೋಣ. ಅವುಗಳ ನಿಯಂತ್ರಣ‌ದಿಂದ ಒಮ್ಮೆಲೇ ಹೊರ ಬರುವುದು ಕಷ್ಟವಾದರೂ ಹೊರಬರಲೇ ಬೇಕು ಸ್ವಾವಲಂಬಿ ಭಾರತಕ್ಕಾಗಿ. ಗಡಿಯಲ್ಲಿ ಕಾಲು ಕೆರೆಯುತ್ತಿರುವ ಚೈನಾಕ್ಕೆ ಮನೆಯಲ್ಲಿ ಕುಳಿತು ಈ ರೀತಿ ಮಾಡುವುದರ ಮೂಲಕ ನಾವೂ ಉತ್ತರಿಸೋಣ. ಆಗಬಹುದೇ..!?

ನಾನೊಬ್ಬ ಈ ರೀತಿ ಮಾಡುವುದರಿಂದ ಏನಾಗುವುದು ಎಂಬ ಯೋಚನೆ ಬೇಡ. ಹನಿ ಹನಿ ಕೂಡಿದಾಗ ಹಳ್ಳವೆಂಬುದು ತಿಳಿದಿದೆಯಲ್ಲಾ..?? ನಾವು ಸ್ವಾವಲಂಬಿಯಾದರೆ ನಮ್ಮ ಭಾರತ ಸ್ವಾವಲಂಬಿಯಾಗುವುದು..!! ನೆನಪಿರಲಿ…

  • @ಕಿಶೋರ್ ಬಳ್ಳಡ್ಕ
Leave A Reply

Your email address will not be published.