Breaking News | ನಾಳೆಯಿಂದ ರಾಜ್ಯಾದ್ಯಂತ 9000 ಗೃಹರಕ್ಷಕ ದಳದವರು ಮನೆಗೆ ! | ಕಷ್ಟಕಾಲದಲ್ಲಿ ದುಡಿಸಿಕೊಂಡು ಕೃತಘ್ನತೆ ಮೆರೆಯಿತಾ ಸರಕಾರ ?!
ಪುತ್ತೂರು: ಜೂನ್ 1. ರಾಜ್ಯದಾದ್ಯಂತ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೆಬಲ್ಗಳಿಗೆ ಪರ್ಯಾಯವಾಗಿ ಕರ್ತವ್ಯ ನಿರ್ವಹಿಸುತ್ತಿರುವ 9,000 ಕ್ಕೂ ಹೆಚ್ಚು ಗೃಹರಕ್ಷಕರನ್ನು ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಕಾನ್ಸ್ಟೆಬಲ್ ಹುದ್ದೆಗಳ ಸ್ಥಾನಕ್ಕೆ ಅನುಗುಣವಾಗಿ ಸೋಮವಾರದಿಂದ ಜೂನ್ 1 ರಿಂದ ಅನ್ವಯವಾಗುವಂತೆ ಗೃಹರಕ್ಷಕ ಸಿಬ್ಬಂದಿಯನ್ನು ಮರು ಹಂಚಿಕೆ ಮಾಡಿ ಎಡಿಜಿಪಿ ಎಂ.ಎ. ಸಲೀಂ ರಾಜ್ಯದ ಎಲ್ಲಾ ಘಟಕಾಧಿಕಾರಿಗಳಿಗೆ ಸುತ್ತೋಲೆಯನ್ನು ಹೊರಡಿಸಿದ್ದಾರೆ.
ಅದರಂತೆ ಪುತ್ತೂರು ತಾಲೂಕಿನ ಪೋಲಿಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 13 ಮಂದಿ ಗೃಹರಕ್ಷಕದಳದವರನ್ನು ಕೈ ಬಿಡಲಾಗಿದೆ.
ರಾಜ್ಯದಲ್ಲಿ ಸುಮಾರು 25 ಸಾವಿರ ಗೃಹರಕ್ಷಕರಿದ್ದು ಈ ಪೈಕಿ, ಪೊಲೀಸ್ ಇಲಾಖೆಯೊಂದರಲ್ಲೇ 12 ಸಾವಿರಕ್ಕೂ ಹೆಚ್ಚು ಗೃಹರಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಸೋಂಕು ತಡೆಯುವ ವಾರಿಯರ್ಸ್ಗಳಾಗಿ ಕಾನ್ಸ್ಟೆಬಲ್ಗಳಂತೆ ಈ ಗೃಹರಕ್ಷಕರೂ ಹಗಲಿರುಲೆನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪುತ್ತೂರು ನಗರ, ಸಂಚಾರ, ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಒಟ್ಟು 28 ಮಂದಿ ಗೃಹರಕ್ಷಕಗಳಿದ್ದು, ಈ ಪೈಕಿ 13 ಗೃಹರಕ್ಷಕದಳ ಸಿಬ್ಬಂದಿಗಳನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ಇದೀಗ ತಿಳಿದು ಬಂದಿದೆ.
ಪುತ್ತೂರು ತಾಲೂಕು ಮಾತ್ರವಲ್ಲದೆ ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಕಡಬ ತಾಲೂಕಿನ ಪೋಲಿಸ್ ಠಾಣೆಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಗೃಹರಕ್ಷಕರನ್ನು ಇಂದು ಪುನರ್ ಹಂಚಿಕೆ ಮಾಡಲಾಗಿದೆ.
ಈ ಪೈಕಿ ಬಂಟ್ವಾಳ ನಗರ ಪೋಲಿಸ್ ಠಾಣೆ ಯಲ್ಲಿ 5, ಬಂಟ್ವಾಳ ಗ್ರಾಮಾಂತರ 8, ವಿಟ್ಲ ಪೋಲಿಸ್ ಠಾಣೆ 7, ಬಂಟ್ವಾಳ ಸಂಚಾರ ಪೋಲಿಸ್ ಠಾಣೆ 4, ಬೆಳ್ತಂಗಡಿ ಪೋಲಿಸ್ ಠಾಣೆ 5, ಬೆಳ್ತಂಗಡಿ ಸಂಚಾರ ಪೋಲಿಸ್ ಠಾಣೆ 4, ವೇಣೂರು ಪೋಲಿಸ್ ಠಾಣೆ 3, ಧರ್ಮಸ್ಥಳ ಪೋಲಿಸ್ ಠಾಣೆ 5, ಪುತ್ತೂರು ನಗರ ಪೋಲಿಸ್ ಠಾಣೆ 3, ಪುತ್ತೂರು ಸಂಚಾರ ಪೋಲಿಸ್ ಠಾಣೆ 6, ಉಪ್ಪಿನಂಗಡಿ ಪೋಲಿಸ್ ಠಾಣೆ 6, ಪುತ್ತೂರು ಗ್ರಾಮಾಂತರ (ಸಂಪ್ಯ) ಪೋಲಿಸ್ ಠಾಣೆ 6, ಕಡಬ ಪೋಲಿಸ್ ಠಾಣೆ 4, ಸುಳ್ಯ ಪೋಲಿಸ್ ಠಾಣೆ 5, ಬೆಳ್ಳಾರೆ ಪೋಲಿಸ್ ಠಾಣೆ 4, ಸುಬ್ರಹ್ಮಣ್ಯ ಪೋಲಿಸ್ ಠಾಣೆ 4, ಸಿಇಎನ್ ಪೋಲಿಸ್ ಠಾಣೆ 1 ಗೃಹರಕ್ಷಕ ಸಿಬ್ಬಂದಿಗಳನ್ನು ಮಾತ್ರ ಉಪಯೋಗಿಸಿಕೊಳ್ಳುವಂತೆ ಸೂಚಿಸಲಾಗಿದೆ.
ದಕ್ಷಿಣ ಕನ್ನಡ ಪೋಲಿಸ್ ಘಟಕದ ರಿಕ್ತಸ್ಥಾನಕ್ಕೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಈ ಸಂಖ್ಯೆಯಲ್ಲಿ ವ್ಯತ್ತಾಸ ಮಾಡಲಾಗುತ್ತದೆ. ಇದರ ಹೊರತಾಗಿ ಯಾವುದೇ ಠಾಣೆಗಳಿಂದ ಹೆಚ್ಚುವರಿಯಾಗಿ ಯಾವುದೇ ಗೃಹರಕ್ಷಕ ಸಿಬ್ಬಂದಿಗಳನ್ನು ನೇಮಿಸುವಂತೆ ಮನವಿಗಳನ್ನು ಸಲ್ಲಿಸಲು ಅವಕಾಶ ಇರುವುದಿಲ್ಲವೆಂದು ಸೂಚಿಸಲಾಗಿದೆ.