ಸುಳ್ಯ |ಬಡ ಕುಟುಂಬದ ಮನೆಯ ಬೆಳಕಾದ ಗುತ್ತಿಗಾರು ಗ್ರಾ.ಪಂ.ನ ಕೋವಿಡ್ ಕಾರ್ಯಪಡೆ
ಸುಳ್ಯ:ಲಾಕ್ಡೌನ್ ಸಮಯದಲ್ಲಿ ಗ್ರಾಮ ಪಂಚಾಯತ್ ಕಚೇರಿಯಿಂದ ಹೊರಬಂದು ಬಡ ವ್ಯಕ್ತಿಯ ಮನೆ ಛಾವಣಿ ಏರಿ, ಮನೆ ರಿಪೇರಿ ಮಾಡಿ ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷ ಅಚ್ಯುತ ಗುತ್ತಿಗಾರು ನೇತೃತ್ವದ ಕೋವಿಡ್ ಕಾರ್ಯಪಡೆ ಮಾನವೀಯತೆಯ ಕೆಲಸ ಮಾಡಿ ಸಮಾಜಕ್ಕೆ ಮಾದರಿಯಾಗಿದೆ.
ವಾಸಯೋಗ್ಯ ಮನೆ ಇಲ್ಲದೆ, ವಿದ್ಯುತ್, ಕುಡಿಯುವ ನೀರಿನ ಸಮಸ್ಯೆಯ ನಡುವ ಮಳೆಗಾಲದ ಸಮಸ್ಯೆಯ ಭಯದಲ್ಲಿದ್ದ ವೃದ್ಧ ದಂಪತಿಯ ಕಷ್ಟ ಕಂಡ ಅಧ್ಯಕ್ಷರ ನೇತೃತ್ವದ ತಂಡ ತಡ ಮಾಡದೇ ಈ ಕುಟುಂಬದ ಮನೆ ದುರಸ್ತಿಗೆ ಮುಂದಾಗಿದೆ.
ಸ್ವತಃ ಗ್ರಾಮ ಪಂಚಾಯತಿ ಅಧ್ಯಕ್ಷರೇ ಮನೆಯ ಛಾವಣಿ ಏರಿ ಮನೆ ಕೆಲಸ ಆರಂಭಿಸಿದರು. ಇವರ ಜೊತೆಗೆ ಕಾರ್ಯಪಡೆ ಸದಸ್ಯರು, ಸ್ಥಳೀಯರು ಸೇರಿದಂತೆ ಒಟ್ಟು 25 ಜನರ ತಂಡವು ಬೆಂಬಲಕ್ಕೆ ಬಂದಿದ್ದು, ಮೂರು ದಿನದ ಶ್ರಮದ ಫಲವಾಗಿ ಮನೆ ಕೆಲಸ ಪೂರ್ಣಗೊಳಿಸಲಾಯಿತು.
ಇನ್ನು ಮೆಸ್ಕಾಂ ಸಹಕಾರದೊಂದಿಗೆ ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇಷ್ಟು, ಮಾತ್ರವಲ್ಲದೇ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಬರುವಂತಹ ಸವಲತ್ತುಗಳನ್ನು ಒದಗಿಸುವ ಭರವಸೆಯನ್ನು ನೀಡಿದರು.