ಪುತ್ತೂರಿನಲ್ಲಿ ನಿಶ್ಚಿತಾರ್ಥಕ್ಕೆ ಬಂದವರು 41 ದಿನ ಲಾಕ್ | ಪರವೂರಿನಿಂದ ಬಂದವರನ್ನು ಗುರುತಿಸಲು 41 ದಿನ ಬೇಕಾಯ್ತು !
ಪುತ್ತೂರು : ಇದು ಒಂದು ಕಡೆ, ತನ್ನ ಮಗಳ ನಿಶ್ಚಿತಾರ್ಥಕ್ಕೆ ಬಂದ ನೆಂಟರು ಲಾಕ್ ಡೌನ್ ಕಾರಣದಿಂದ ತನ್ನ ಮನೆಯಲ್ಲಿ 41 ದಿನಗಳ ಕಾಲ ಉಳಿದುಕೊಳ್ಳುವ ಸಂದರ್ಭದಲ್ಲಿ ಅವರನ್ನು ಸಾಕಿದ ತಾಯಿಯೊಬ್ಬಳ ಕಥೆ. ಮತ್ತೊಂದು ಕಡೆ ಇಷ್ಟು ದೀರ್ಘ ಕಾಲದವರೆಗೆ ಪರ ಊರಿನವರು ನಮ್ಮಲ್ಲಿದ್ದರೂ ಅದನ್ನು ಗುರುತಿಸಲು ಆಗದ ನಮ್ಮ ವ್ಯವಸ್ಥೆಯ ವ್ಯಥೆ !!
ಸಾಲ್ಮರದ ಗುಂಪಕಲ್ಲು ಎಂಬಲ್ಲಿರುವ ತುಕ್ರು ಅವರು ತಮ್ಮ ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಆಕೆಯ ಮಗಳ ಮದುವೆ ನಿಶ್ಚಯವಾಗಿತ್ತು. ಮಗಳು ಶಾರದಾಳಿಗೆ ಶೃಂಗೇರಿಯ ಯುವಕ ಜಯರಾಮ್ನೊಂದಿಗೆ ಮಾರ್ಚ್ 21 ರಂದು ನಿಶ್ಚಿತಾರ್ಥ ನಡೆದಿತ್ತು. ನಿಶ್ಚಿತಾರ್ಥಕ್ಕೆ ಮಂಗಳೂರು, ಮಡಿಕೇರಿ, ಸುಬ್ರಹ್ಮಣ್ಯ ಹೀಗೆ ಹಲವು ಊರುಗಳಿಂದ ಸಂಬಂಧಿಕರು ಆಗಮಿಸಿದ್ದರು. ಮರುದಿನ, ಮಾರ್ಚ್ 22 ರಂದು ತಮ್ಮ ಊರುಗಳಿಗೆ ಹೊರಡಬೇಕಿತ್ತು. ಆದರೆ ದೇಶದ ಪ್ರಧಾನಿ ಜನತಾ ಕರ್ಫ್ಯೂ ಆಚರಿಸುವಂತೆ ಕೇಳಿಕೊಂಡಿದ್ದರು. ಆದ್ದರಿಂದ ಅವರ ಪ್ರಯಾಣ ಮುಂದಕ್ಕೆ ಹೋಗಿತ್ತು.
ಆನಂತರ ದೇಶಾದ್ಯಂತ ಲಾಕ್ಡೌನ್ ಘೋಷಣೆಯಾಗಿ ವಾಹನಗಳ ಸಂಚಾರ ನಿರ್ಬಂಧಿಸಲಾಯಿತು. ಈ ಹಿನ್ನೆಲೆಯಲ್ಲಿ ಮನೆಗೆ ಬಂದು ಉಳಿದುಕೊಂಡ 11 ಜನ ಅತಿಥಿಗಳನ್ನು ಸಾಕುವ ದೊಡ್ಡ ಜವಾಬ್ದಾರಿ ದಿನದ ದುಡಿಮೆಯ ಮೇಲೆ ಅವಲಂಬಿತವಾದ ತುಕ್ರು ಅವರ ಮೇಲೆ ಬಿದ್ದಿತ್ತು. ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಕ್ಕೆ ಅಷ್ಟೂ ಜನರನ್ನು ಸಾಕುವುದು ದೊಡ್ಡ ಹೊರೆಯಾಗಿತ್ತು ಆದರೂ ತುಕ್ರು ಧೃತಿಗೆಡಲಿಲ್ಲ. ತಮ್ಮಲ್ಲಿರುವಷ್ಟರಲ್ಲೇ ಹಂಚಿ ತಿಂದು ಬರೋಬ್ಬರಿ 42 ದಿನ ಕಳೆದಿದ್ದಾರೆ !
ಬರೀ ಗಂಜಿ ಮತ್ತು ಗುಜ್ಜೆ ಕಜಿಪು ತಿಂದು ಬದುಕಿದರು !
ಪಡಿತರ ಕಾರ್ಡ್ನಲ್ಲಿ ಸಿಕ್ಕ ಅಕ್ಕಿ ಹಾಗೂ ಮನೆ ಸುತ್ತ ಬೆಳೆದಿದ್ದ ಎಳೆಯ ಗುಜ್ಜೆಯ ಸಾರು ಮಾಡಿ ತುಕ್ರು ಒಟ್ಟು 11 ಮಂದಿಯನ್ನು ಕಳೆದ 41 ದಿನಗಳ ಕಾಲ ಮನೆಯಲ್ಲಿಟ್ಟುಕೊಂಡು ಸಾಕಿದ್ದಾಳೆ. ಕೊನೆ ಕೊನೆಗೆ ಆಕೆಗೆ ಎಲ್ಲರನ್ನೂ ಸಲಹುವುದು ಕಷ್ಟವಾಗಿದೆ. ಮನೆಯಲ್ಲಿದ್ದ ಅಕ್ಕಿ ಬೇಳೆ ಪುಳಿ ಮುಂಚಿ ಖಾಲಿಯಾಗಿ ಕುಟುಂಬ ಕಂಗಾಲಾಗಿದೆ.
ಆಗ ಪುತ್ತೂರು ಪತ್ರಕರ್ತರ ಸಂಘಕ್ಕೆ ಮಾಹಿತಿ ತಲುಪಿ, ಆ ಸುದ್ದಿಯಿಂದ ಎಚ್ಚೆತ್ತ ಅಧಿಕಾರಿ ವರ್ಗ ಈ ಕುಟುಂಬಕ್ಕೆ ಆಹಾರದ ಕಿಟ್ ನೀಡಿದರು.
ಶಾಸಕರ ವಾರ್ರೂಂ ಸಹಾಯದಿಂದ ಅಲ್ಲಿದ್ದ 11 ಜನರನ್ನು ಅವರ ಊರುಗಳಿಗೆ ವಾಹನದ ವ್ಯವಸ್ಥೆ ಮಾಡಿ ನಿನ್ನೆ ಹಲವು ಮುಖಂಡರುಗಳ ಉಪಸ್ಥಿತಿಯಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು!! ಆದರೆ ಥರ್ಮಲ್ ಟೆಸ್ಟ್ ಬಾಕಿ ಇರುವ ಕಾರಣ ಅವರನ್ನು ಇನ್ನೂ ಕಳಿಸಿಲ್ಲ ಎಂದು ಪಿಜಿ ಜಗನ್ನಿವಾಸ ರಾವ್ ಅವರು ಹೇಳಿದ್ದಾರೆ.