ಅಕಾಲಿಕ ಗಾಳಿ ಮಳೆಗೆ ಕೋಡಿಂಬಾಡಿ ಆಶಾ ಕಾರ್ಯಕರ್ತೆಯ ಮನೆ ಧ್ವಂಸ | ಮನೆ ದುರಸ್ತಿಗೆ ಹರಿದು ಬರಬೇಕಿದೆ ಸಹಾಯ

ಬರಹ : ಆದರ್ಶ್ ಶೆಟ್ಟಿ ಉಪ್ಪಿನಂಗಡಿ ಕಜೆಕ್ಕಾರ್

ಇಡೀ ದೇಶವೇ ಕೋವೈಡ್-19 ಮಹಾಮಾರಿ ಕೊರೊನಾ ರೋಗದಿಂದ ತತ್ತರಿಸಿ ಹೋಗಿದ್ದರೆ, ಇತ್ತ ಸೈನಿಕರ ಮಾದರಿ ಗ್ರಾಮ ಗ್ರಾಮಗಳಲ್ಲಿ ಮಹಿಳೆಯರ ಒಂದೊಂದು ತಂಡಗಳು ಕಾರ್ಯನಿರ್ವಹಿಸುತ್ತಿವೆ. ತಮಗೆ ಮಾಸಿಕ ವೇತನ ಬರದಿದ್ದರೂ ತಮ್ಮ ಮನೆಯಲ್ಲಿ ನೂರಾರು ಸಂಕಟ, ಸಂಕಷ್ಟಗಳಿದ್ದರೂ ಮತ್ತೊಬ್ಬರ ಸುಭೀಕ್ಷೆಯಲ್ಲಿ, ಸಮಾಜದ ನೆಮ್ಮದಿಯಲ್ಲಿ ತಮ್ಮ ಜೀವನದ ಸಾರ್ಥಕ್ಯ ಎಂದು ತಿಳಿದು ಕಾರ್ಯ ನಿರ್ವಹಿಸುವ ಪ್ರಸ್ತುತ ಒಂದು ತಂಡವೆಂದರೆ ಅದು ಆಶಾ ಕಾರ್ಯಕರ್ತೆಯರು.

ಇಂತಹ ಸಾವಿರಾರು ಆಶಾ ಕಾರ್ಯಕರ್ತೆಯರ ಪೈಕಿ ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಬರೆಮೇಲು ನಿವಾಸಿ ಸುರೇಶ್ ಶೆಟ್ಟಿಯವರ ಪತ್ನಿ ಪವಿತ್ರಾ ಸುರೇಶ್ ರವರು ಕೂಡ ಒಬ್ಬರು. ಕಳೆದ ನಾಲ್ಕುವರೆ ವರ್ಷಗಳಿಂದ ಕೋಡಿಂಬಾಡಿ ಪರಿಸರದಲ್ಲಿ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಪವಿತ್ರಾರವರ ಪತಿ ಸುರೇಶ್ ರವರು ತಕ್ಕಮಟ್ಟಿನ ಕೃಷಿ ಜೊತೆಗೆ ಅಕ್ಕಪಕ್ಕದ ಮನೆಗಳಲ್ಲಿ ಕೆಲಸ ನಿರ್ವಹಿಸುವವರು.
ಇಬ್ಬರು ಮಕ್ಕಳನ್ನು ಹೊಂದಿರುವ ಪವಿತ್ರಾರವರ ಕುಟುಂಬದಲ್ಲಿ ಎರಡನೇ ಮಗು ಈಗ ಎಂಟು ತಿಂಗಳ ಹಸುಗೂಸು. ಅಲ್ಲದೇ ಸಾಕಷ್ಟು ಕಷ್ಟ ಪಟ್ಟು ಸಾಲಸೋಲ ಮಾಡಿ ಇತ್ತೀಚೆಗೆ ಹೊಸ ಮನೆಯೊಂದು ನಿರ್ಮಿಸಿ ಅದರಲ್ಲಿ ವಾಸವಾಗಿತ್ತು ಪವಿತ್ರಾರವರ ಕುಟುಂಬ.

ಇಂತಹ ಸಂದರ್ಭದಲ್ಲಿ ತನ್ನ ಪುಟ್ಟ ಹಸುಗೂಸನ್ನು ಗಂಡ ಸುರೇಶ್ ರವರು ನೋಡಿಕೊಳ್ಳುತ್ತಿದ್ದು, ಪ್ರಸ್ತುತ ತಲೆದೋರಿರುವ ಕೊರೊನಾ ಮಹಾಮಾರಿ ರೋಗದ ಹಿನ್ನೆಲೆಯಲ್ಲಿ ನಿರಂತರವಾಗಿ ಪವಿತ್ರಾರವರು ಜನರ ಸೇವೆಯಲ್ಲಿ ತೊಡಗಿದ್ದು, ನಿನ್ನೆ ಅಕಾಲಿಕವಾಗಿ ಸುರಿದ ಬಾರಿ ಮಳೆ ಗಾಳಿಗೆ ಪವಿತ್ರಾ ಸುರೇಶ್ ರವರ ಮನೆಯ ಮೇಲ್ಛಾವಣಿ ಹಾರಿ ಹೋಗಿ ಸಂಪೂರ್ಣ ಹಾನಿಯಾಗಿದ್ದು, ಎಂದಿನಂತೆ ತನ್ನ ಕರ್ತವ್ಯ ಮುಗಿಸಿ ಮನೆಗೆ ಹಿಂತಿರುಗಿದಾಗ ತನ್ನ ಮನೆಯ ಸ್ಥಿತಿಯನ್ನು ಕಂಡಾಗ ಬರಸಿಡಿಲು ಅಪ್ಪಳಿಸಿದ ಆಘಾತವೇ ಕಾದಿತ್ತು ಪವಿತ್ರಾರವರಿಗೆ.

ತಾವು ಕಷ್ಟಪಟ್ಟು ಇದ್ದ ಬದ್ದ ಹಣವನ್ನು ಕೂಡಿ ಕಟ್ಟಿದ ಮನೆಯ ಹಾನಿ ಒಂದೆಡೆಯಾದರೆ ತನ್ನ ಮನೆಯ ಹಂಗು ತೊರೆದು ಸಮಾಜದ ಜನರ ಸೇವೆಯಲ್ಲಿ ತೊಡಗಿ ನಿತ್ಯ ನಿರಂತರ ಸೇವೆ ನೀಡುತ್ತಿರುವ ಆಶಾ ಕಾರ್ಯಕರ್ತೆ ಪವಿತ್ರಾರವರ ಕುಟುಂಬಕ್ಕೆ ಮಲಗಲು ತನ್ನ ಸಹೋದರನ ಮನೆಯನ್ನು ಅವಲಂಬಿಸಬೇಕಾದ ಅನಿವಾರ್ಯತೆ. ಆಶಾ ಕಾರ್ಯಕರ್ತೆಯರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಕಂಡು ಸಾಕಷ್ಟು ಮರುಕಪಡುವ ನಾವುಗಳು ಇಂದು ಕೊರೊನಾ ಸಂದರ್ಭದಲ್ಲಿ ಸೈನಿಕರಂತೆ ಕಾರ್ಯನಿರ್ವಹಿಸುವ ಪವಿತ್ರಾರವರ ಮನೆಯ ದುರಸ್ತಿಗೆ ಸಹೃದಯ ದಾನಿಗಳಾದ ತಾವುಗಳು ನೆರವಿನ ಹಸ್ತ ಚಾಚಬೇಕಾದ ಅವಶ್ಯಕತೆ ಖಂಡಿತವಾಗಿಯೂ ಇದೆ. ಮಣ್ಣಿನ ಇಟ್ಟಿಗೆಯಲ್ಲಿ ನಿರ್ಮಿಸಲಾದ ಈ ಮನೆಯ ದುರಸ್ತಿಗೆ ಅಂದಾಜು ಲಕ್ಷಕ್ಕೂ ಮಿಕ್ಕಿ ಹಣದ ನೆರವಿನ ಅವಶ್ಯಕತೆಯಿದ್ದು, ದೇಶವೇ ಇಂದು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಜಾತಿ ಮತ ಧರ್ಮ, ಪಕ್ಷದ ಬೇಧ ಭಾವ ಮರೆತು ಪರಸ್ಪರ ಒಬ್ಬರಿಗೊಬ್ಬರು ನೆರವಾಗಿ ನಿಜವಾದ ಮನುಷ್ಯ ಧರ್ಮವನ್ನು ಮೆರೆಯುವ ಸಾವಿರಾರು ನಿದರ್ಶನಗಳು ನಮ್ಮ ಕಣ್ಣ ಮುಂದೆ ಕಂಡು ಬರುತ್ತಿದೆ. ಇವು ಉತ್ತಮ ಮತ್ತು ಮಾದರಿ ನಡೆಯು ಕೂಡ ಹೌದು. ಈ‌ ನಿಟ್ಟಿನಲ್ಲಿ ಪ್ರಾಮಾಣಿಕ ಆಶಾ ಕಾರ್ಯಕರ್ತೆ ಪವಿತ್ರಾರವರ ಕುಟುಂಬಕ್ಕೆ ನೆರವು ನೀಡಲಿಚ್ಚಿಸುವವರು

ದೂರವಾಣಿ ಸಂಖ್ಯೆ: 9900315466-ಸುರೇಶ್
ಪವಿತ್ರ: 8277866267,9071870282.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಹೆಸರು : ಪವಿತ್ರ ಎಂ.

ಬ್ಯಾಂಕ್ ಖಾತೆ ಸಂಖ್ಯೆ: 20355701865
ಐಎಫ್ ಎಸ್ ಸಿ ಕೋಡ್ :SBIN0004270
ಬ್ರಾಂಚ್ ಕೋಡ್: 4270(Puttur near court maidan) ಸಂಪರ್ಕಿಸಬಹುದಾಗಿದೆ

Leave A Reply

Your email address will not be published.