ಪೆರ್ನೆ ಗ್ಯಾಸ್ ಟ್ಯಾಂಕರ್ ದುರಂತಕ್ಕೆ ಏಳು ವರ್ಷ ! 9 ಮಂದಿಯ ಜೀವವೇ ಸುಟ್ಟು ಕರಕಲಾಯಿತು.
ಪುತ್ತೂರು : ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಒಂಬತ್ತು ಮಂದಿ ಸಜೀವ ದಹನವಾದ ದುರಂತ ನಡೆದು ಇಂದಿಗ ಏಳು ವರ್ಷಗಳೇ ಸಂದಿದೆ. ಆದರೂ ಘಟನೆಯ ತೀವ್ರತೆಯ ಕಾರಣದಿಂದ ಇವತ್ತಿಗೂ ಅದು ನಮ್ಮ ಕಣ್ಣಮುಂದೆ ಹಸಿಹಸಿಯಾಗಿ ನಿಂತಿದೆ.
2013 ರ ಎಪ್ರಿಲ್ 09 ಮಂಗಳವಾರದಂದು ಬೆಳಗ್ಗೆ ಅನಿಲ ತುಂಬಿದ ಟ್ಯಾಂಕರ್ ಆಡಿಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಪೆರ್ನೆಯ ಮೊದಲ ತಿರುವಿನಲ್ಲಿ ಮುಗುಚಿ ಬಿದ್ದಿತ್ತು.
ಟ್ಯಾಂಕರ್ ನಲ್ಲಿದ್ದ ಗ್ಯಾಸ್ ಸೋರಿಕೆಯಾಗಿ ಕ್ಷಣಾರ್ಧದಲ್ಲಿ ದಟ್ಟ ಕಪ್ಪು ಹೊಗೆ ಪರಿಸರವಿಡೀ ವ್ಯಾಪಿಸಿ, ಬಳಿಕ ಬೆಂಕಿಯ ಕೆನ್ನಾಲಿಗೆಗಳು ಪಸರಿಸಿದ ಕಾರಣ ಘಟನೆಯ ಸ್ಥಳದ ಸಮೀಪವೇ ಇದ್ದ ಹಲವು ಮನೆಗಳು, ಹಲವು ಅಂಗಡಿ ಕಟ್ಟಡಗಳಿಗೆ ಬೆಂಕಿ ತಗುಲಿತ್ತು. ಮನೆಯಲ್ಲಿದ್ದ ಮಹಿಳೆಯರು, ಮಕ್ಕಳು ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಧಗಧಗ ಉರಿಯುವ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾಗಿದ್ದರು.
ಸ್ಥಳದಲ್ಲೇ ಮೃತಪಟ್ಟ ಯಾರನ್ನೂ ಗುರುತಿಸಲು ಅಸಾಧ್ಯವೆನ್ನುವಷ್ಟರ ಮಟ್ಟಿಗೆ ಸುಟ್ಟು ಕರಕಲಾಗಿದ್ದರು. ಟ್ಯಾಂಕರ್ ಹಾಗೂ ವಾಹನಗಳು, ಮನೆಗಳಿಗೆ ತಗುಲಿದ್ದ ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟ ನಂದಿಸಲು ಯಶಸ್ವಿಯಾಗಿದ್ದರು.
ಘಟನೆಯಲ್ಲಿ ಸ್ಥಳೀಯ ನಿವಾಸಿಗಳಾದ ವನಿತಾ(38) ಆಕೆಯ ಪುತ್ರ ಚಿತೇಶ್(5) ನೆರೆಮನೆಯ ನಿವಾಸಿ ಸುನಿಲ್ (5). ಸ್ಥಳೀಯ ನಿವಾಸಿ ಗುರುವಪ್ಪ (30), ಖತೀಜಮ್ಮ(40), ಶೋಭಾ(45), ವಸಂತ(30) ಮತ್ತು ಟ್ಯಾಂಕರ್ ಚಾಲಕ ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟು, ಹಲವರು ಚಿಂತಾಜನಕ ಸ್ಥಿತಿಯಲ್ಲಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದರು.
ಘಟನೆಯ ತೀವ್ರತೆಗೆ ಎರಡು ತಿಂಡಿ ಸಾಗಾಟದ ವಾಹನಗಳು ಹಾನಿಗೀಡಾಗಿದ್ದವಾದರೂ, ಓಮ್ನಿ ಕಾರು ಚಾಲಕ ತಿಂಡಿಗಳ ಪ್ಯಾಕೆಟನ್ನು ಸ್ಥಳಿಯ ಅಂಗಡಿಗೆ ನೀಡುತ್ತಿದ್ದರು.
ಈ ಸಂದರ್ಭದಲ್ಲಿ ಬೆಂಕಿಗಾಹುತಿಯಾಗುವುದು ತಪ್ಪಿಸಲು ಚಾಲಕ ವಸಂತ ರಣವೇಗದಲ್ಲಿ ಕಾರನ್ನು ತಿರುಗಿಸಲು ಮುಂದಾದಾಗ ಕಾರು ಮಗುಚಿ ಬಿದ್ದು ಚಾಲಕನು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು.
ಇದೇ ಸಮಯದಲ್ಲಿ ಗೂಡ್ಸ್ ಟೆಂಪೋದಲ್ಲಿ ತಿಂಡಿ ಸಾಗಿಸುತ್ತಿದ್ದ ಚಾಲಕ ಬೆಂಕಿಯ ಜ್ವಾಲೆ ವ್ಯಾಪಿಸುತ್ತಿರುವುದನ್ನು ಕಂಡು, ವಾಹನವನ್ನು ಹೆದ್ದಾರಿ ಬದಿಯಲ್ಲಿ ನಿಲ್ಲಿಸಿ ಓಡಿ ಪರಾರಿಯಾಗಿದ್ದನಾದರೂ, ವ್ಯಾಪಿಸಿದ ಬೆಂಕಿಗೆ ತಿಂಡಿಗಳ ಸಹಿತ ಟೆಂಪೋ ಬೆಂಕಿಗಾಹುತಿಯಾಗಿತ್ತು. ಚಾಲಕ ಓಡಿ ಹೋಗಿದ್ದರಿಂದಾಗಿ ಜೀವ ಸಹಿತ ಬದುಕುಳಿದಿದ್ದ.
ಈ ದುರಂತ ಏಳು ವರ್ಷಗಳ ಹಿಂದೆ ನಡೆದಿದೆಯಾದರೂ ದುರಂತದ ನೆನಪು ಮಾತ್ರ ಮರುಕಳಿಸುತ್ತಲೇ ಇದೆ.
ಮದ್ಯ ಜೀವನಾವಶ್ಯಕ ವಸ್ತು ಹೌದೋ ಅಲ್ಲವೋ? | ಸಂಪಾದಕೀಯhttps://hosakannada.com/2020/0329/drinks-jeevanaavashyaka-vastu-howdo-allava/