ಕರ್ನಾಟಕ ಸರಕಾರದ ಕೇರಳ ಗಡಿ ಬಂದ್ ನಿರ್ಧಾರ ತೆರವಿಗೆ ಸುಪ್ರೀಂಕೋರ್ಟ್ ತಿರಸ್ಕಾರ | ಕೇರಳ ಸರ್ಕಾರಕ್ಕೆ ಮುಖಭಂಗ
ದೆಹಲಿ, ಏಪ್ರಿಲ್ 03: ಕರ್ನಾಟಕ ಮತ್ತು ಕೇರಳ ಸರಕಾರದ ಕಾಸರಗೋಡು-ಮಂಗಳೂರು ಗಡಿ ಬಂದ್ ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂ ನಿರಾಕರಿಸಿದ್ದು, ಗಡಿ ಗಲಾಟೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಿ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಈ ಮೂಲಕ ಕೇರಳ ಸರ್ಕಾರಕ್ಕೆ ಮುಖಭಂಗವಾಗಿದೆ.
ವ್ಯಾಜ್ಯದ ಹಿನ್ನೆಲೆ
ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೋರೋನಾ ಸೋಂಕು ಪ್ರಕರಣ ಹೆಚ್ಚಾಗುತ್ತಿದ್ದಂತೆ ಕರ್ನಾಟಕ ರಾಜ್ಯ ಸರಕಾರ ಎಚ್ಚೆತ್ತುಕೊಂಡು ಕೇರಳ ಸಂಪರ್ಕಿಸುವ ಎಲ್ಲಾ ಗಡಿಗಳನ್ನು ಬಂದ್ ಮಾಡಿತ್ತು.ಆ ಮೂಲಕ ಕರ್ನಾಟಕವು ತನ್ನ ಜನರ ಹಿತ ಕಾಯುವ ನಿಟ್ಟಿನಲ್ಲಿ ಕಾರ್ಯವಾಗಿತ್ತು. ಈ ಹಿನ್ನಲೆ ಕೇರಳದ ರೋಗಿಗಳಿಗೆ ಕರ್ನಾಟಕದ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಕೊಡಿಸುವ ನಿಟ್ಟಿನಲ್ಲಿ ಕರ್ನಾಟಕ ವಿಧಿಸಿರುವ ಗಡಿ ದಿಗ್ಬಂಧನವನ್ನು ತೆಗೆದು ಹಾಕುವಂತೆ ಕೇರಳ ಹೈಕೋರ್ಟ್ ಅಸೋಸಿಯೇಷನ್ ನವರು ಕೇರಳ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೇರಳ ಹೈಕೋರ್ಟ್ ಗಡಿ ತೆರೆಯುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಮಧ್ಯಂತರ ಆದೇಶ ಪ್ರಕಟಿಸಿತ್ತು. ಅದನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ನ ಆದೇಶವನ್ನು ಕರ್ನಾಟಕ ರಾಜ್ಯ ಸರಕಾರ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿತ್ತು.
ಈ ಅರ್ಜಿಯನ್ನು ಕೂಡಾ ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ್ ರಾವ್ ಮತ್ತು ದೀಪಕ್ ಗುಪ್ತಾ ಅವರನ್ನ ಒಳಗೊಂಡ ನ್ಯಾಯಪೀಠವು ಎರಡು ರಾಜ್ಯಗಳ ವಿವಾದವನ್ನು ಸೌಹಾರ್ದಯುತ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿತು. ಅಷ್ಟೇ ಅಲ್ಲದೆ ಕೇರಳ ಗಡಿಯನ್ನು ಮಣ್ಣು ಹಾಕಿ, ಕಲ್ಲು ಮಣ್ಣಿನ ಚೀಲ ಇಟ್ಟು ಗಡಿ ಮುಚ್ಚಿರುವ ಕರ್ನಾಟಕದ ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಮಂಗಳವಾರದವೆರೆಗೆ ಮುಚ್ಚಿರುವ ಕೇರಳ ಗಡಿಯನ್ನು ತೆರೆಯದಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆ ಮೂಲಕ ಕೇರಳ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ.
ಸಮಸ್ಯೆಯನ್ನು ಕರ್ನಾಟಕ ಮತ್ತು ಕೇರಳದ ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತುಕತೆ ನಡೆಸಿ ರಾಜೇ ಪಂಚಾಯಿತಿಯಲ್ಲಿ ನಡೆಸುವಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿಗೆ ಸೂಚನೆ ನೀಡಿದೆ. ಮತ್ತು ಮುಂದಿನ ವಿಚಾರಣೆಯನ್ನು ಏಪ್ರಿಲ್ 7 ಕ್ಕೆ ಮುಂದೂಡಿದೆ.