ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ವಾಹನಗಳ ಸಂಚಾರ ಶನಿವಾರವೂ ಸಂಪೂರ್ಣ ಬಂದ್, ಆದರೆ ಎಂದಿನಂತೆ 7 ರಿಂದ 12 ವರೆಗೆ ದಿನಸಿ ಖರೀದಿ | ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು : ಕೊರೋನ ತಡೆಗಟ್ಟುವ ನಿಟ್ಟಿನಲ್ಲಿ ದ.ಕ.ಜಿಲ್ಲಾಡಳಿತವು ಈವರೆಗೆ ಎ.14 ರವರೆಗೆ ವಿಧಿಸಿರುವ ಸೆ.144 (3) ಕ್ಕೆ ಪೂರಕವಾಗಿ ಕೆಲವು ಹೆಚ್ಚುವರಿ ಕಟ್ಟುಪಾಡುಗಳನ್ನು ವಿಧಿಸಿ ಗುರುವಾರ ಹೊರಡಿಸಿದ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ವಾಹನಗಳ ಸಂಚಾರವನ್ನು ಶನಿವಾರವೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಮತ್ತು ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ.

ಅವರು ಶುಕ್ರವಾರ ಮಂಗಳೂರಿನಲ್ಲಿ ವೀಡಿಯೋ ಸಂದೇಶ ನೀಡಿ, ಶುಕ್ರವಾರದಿಂದ ಖಾಸಗಿ ವಾಹನಗಳ ಸಂಚಾರವನ್ನು ಜಿಲ್ಲಾದ್ಯಂತ ಸಂಪೂರ್ಣ ನಿಷೇಧಿಸಲಾಗಿದೆ. ಅನುಮತಿ ಇಲ್ಲದಿರುವ ಎಲ್ಲಾ ವಾಹನಗಳ ತಿರುಗಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.

ದಿನಸಿ ಖರೀದಿಯನ್ನು ಮೀಸಲಿಟ್ಟಿರುವ ಬೆಳಗ್ಗೆ 7 ರಿಂದ 12 ರವರೆಗಿನ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ. ತಮ್ಮ ಮನೆ ಸಮೀಪದ ಅಂಗಡಿಗಳಿಂದ ದಿನಸಿ ಖರೀದಿ ಮಾಡಬಹುದು ಎಂದರು. ಆದರೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅತಿ ಅಗತ್ಯ ಎಂದವರು ಹೇಳಿದರು.

Leave A Reply

Your email address will not be published.