ಪುತ್ತೂರು | ಆರ್ಯಾಪಿನ ಯುವಕನಿಗೆ ಕೊರೋನಾ ಪಾಸಿಟಿವ್
ಪುತ್ತೂರು : ಆರ್ಯಾಪು ಗ್ರಾಮದ ಸಂಪ್ಯದ ಮೂಲೆಯ ಯುವಕನೋರ್ವನಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿರುವುದಾಗಿ ವರದಿಯಾಗಿದೆ. ಕೊರೋನಾ ಈಗ ನಮ್ಮ ಮನೆ ಬಾಗಿಲಿಗೆ ಬಂದು ಹೆದರಿಸುತ್ತಿದೆ. ಯಾವುದಕ್ಕೂ ಡೋಂಟ್ ಕೇರ್ ಅನ್ನುತ್ತಿದ್ದ ಜನರ ಎದೆಯಲ್ಲಿ ಢವ ಢವ !
ಇದು ಪುತ್ತೂರು ತಾಲೂಕಿನ ದೃಡಪಟ್ಟಿರುವ ಮೊದಲ ಪ್ರಕರಣವಾಗಿದೆ. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬೆಳ್ತಂಗಡಿ ತಾಲೂಕಿನ ಕರಾಯ-ಕಲ್ಲೇರಿಯ ಯುವಕನೋರ್ವನಿಗೆ ಈಗಾಗಲೇ ಕೊರೋನಾ ಸೋಂಕು ದೃಢಪಟ್ಟಿದ್ದು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಇಂದು ಬೆಳಿಗ್ಗೆ ದೆಹಲಿಯ ಮರ್ಕಜ್ ನಿಜಾಮುದ್ದೀನ್ ಮಸೀದಿಗೆ ಹೋಗಿ ಬಂದ ವ್ಯಕ್ತಿಯ ಬಗ್ಗೆ ಸುದ್ದಿ ಬಂದಿತ್ತು. ಆ ವ್ಯಕ್ತಿಯನ್ನು ಮಂಗಳೂರಿನ ವೆನ್ ಲಾಕ್ ಗೆ ಸೇರಿಸಲಾಗಿದೆ. ಆತನಲ್ಲಿ ಸೋಂಕು ಇದೆಯ ಇಲ್ಲವಾ ಎಂದು ಇನ್ನು ಕೂಡಾ ಖಚಿತವಿಲ್ಲ.ಆದರೆ ಅವರು ಮರ್ಕಜ್ ಗೆ ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ತಾಲೂಕಿನಲ್ಲಿ ಎರಡೆರಡು ಕೋರೋನಾ ಸಂಬಂಧಿತ ಸುದ್ದಿ ಬಂದು, ಈಗ ಆರ್ಯಾಪು ಗ್ರಾಮದ ಸಂಪ್ಯದ ಮೂಲೆಯ ಯುವಕನೋರ್ವನಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿರುವುದು ನಾಗರಿಕರಲ್ಲಿ ಆತಂಕ ಹೆಚ್ಚಿಸಿದೆ.
ಮೊದಮೊದಲು ಚೀನಾದಲ್ಲಿ ರೋಗ ಬಂತಂತೆ ಅಂತ ನಾವು ಉಡಾಫೆಯಲ್ಲಿದ್ದೆವು. ಆಮೇಲೆ ಇಟಲಿ, ಅಮೇರಿಕ, ಸ್ಪೇನ್- ಹೀಗೆ ದೇಶವ್ಯಾಪಿಯಾಗಿ ಕೊರೋನಾ ಸಾವಿನ ಪ್ರವಾಸ ಹೊರಟಿತು. ಆಮೇಲೆ ಎಲ್ಲೋ ಕೇರಳ ಅಂತ ಬಂತು. ನಾವು ಸುಮ್ಮನಿದ್ದೆವು. ನಂತರ ಕರ್ನಾಟಕದ ಉತ್ತರಭಾಗವಾದ ಕಲಬುರ್ಗಿಗೆ ಬಂತು. ಘಟ್ಟದವರಿಗೆ ಬಂತು ಅಂತ ನಮ್ಮವರು ಮಾತಾಡಿಕೊಂಡರು. ನಂತರ ಮಂಗಳೂರು ಅಂದಾಗಲೂ ಅಷ್ಟೇ! ಯಾರೋ ಫಾರೀನ್ ಗೆ, ದುಬಾಯಿಗೆ ಹೋದವರಿಗೆ ಅಂತ ನೆಗ್ಲೆಕ್ಟ್. ಈಗ ರೋಗ ಹಾರಿ ಬಂದು ಬೆಳ್ತಂಗಡಿಗೆ, ಪುತ್ತೂರಿಗೆ ಬಂದು ಕೂತಿದೆ. ಜನರ ಎದೆಯಲ್ಲಿ ಈಗ ನಡುಕ. ಮುಂದೇನಾಗುತ್ತದೋ ಎಂಬ ಅನಿಶ್ಚಿತತೆ.