ಕಡಬದ ಪಂಜ । ರೋಗಿಯ ಗೆಟಪ್ಪಿನಲ್ಲಿ ತನ್ನ ಹುಟ್ಟೂರಿಗೆ ಆಂಬುಲೆನ್ಸ್ ನಲ್ಲಿ ಬಂದಿಳಿದ ಯುವಕ । ದೂರು ನೀಡಿದ ಊರವರು

ಕಡಬ, ಪಂಜ : ಊರಿಗೆ ಅಂಬುಲೆನ್ಸ್ ಬಂದು ನಿಂತಾಗ ಪಂಜದ ಗ್ರಾಮಸ್ಥರಿಗೆ ಒಮ್ಮಿಂದೊಮ್ಮೆಗೆ ಗಾಬರಿ. ಬಂದು ನೋಡಿದರೆ ಅದರಲ್ಲಿ ಐವತೊಕ್ಲು ಗ್ರಾಮದ ಅಳ್ಪೆ ವಿಜಯಕುಮಾರ್ ಅವರು ನಗುತ್ತಾ ಇಳಿಯುತ್ತಿದ್ದಾರೆ. ಆದರೆ ಆ ತಕ್ಷಣ ಊರವರ ನಗು ಮಾಯವಾಗಿದೆ.

ವಿಜಯಕುಮಾರ್ ಅವರು ರಾಯಚೂರಿನಲ್ಲಿ ಕೆಲಸದಲ್ಲಿದ್ದು ಊರಿಗೆ ಬರುವ ಉದ್ದೇಶದಿಂದ ಕುಂದಾಪುರದ ಮಿತ್ರನ ಮನೆಗೆ ಅದು ಹೇಗೋ ಬಂದು ಸೇರಿಕೊಂಡಿದ್ದರು. ಆನಂತರ ತನ್ನ ಹುಟ್ಟೂರು ಕಡಬ ತಾಲೂಕಿನ ಪಂಜಕ್ಕೆ ಬರಲು ದಕ್ಷಿಣಕನ್ನಡ ಲಾಕ್ಡೌನ್ ಆದ ಕಾರಣ ಬರಲು ಆಗಿರಲಿಲ್ಲ.

ಅದಕ್ಕೆ ಸ್ವಲ್ಪ ಮಂಡೆ ಖರ್ಚು ಮಾಡಿದ ವಿಜಯಕುಮಾರ್ ಅವರು ಕುಂದಾಪುರದಲ್ಲಿ ಒಂದು ಅಂಬುಲೆನ್ಸ್ ಅನ್ನು ಗೊತ್ತು ಮಾಡಿಕೊಂಡು ಅದರಲ್ಲಿ, ರೋಗಿಯಂತೆ ಮಲಗಿದ್ದಾರೆ. ಅದೇ ಆಂಬುಲೆನ್ಸ್ ಮೂಲಕ ತನ್ನ ಹುಟ್ಟೂರು ಪಂಜಕ್ಕೆ ಬಂದಿಳಿದಿದು ಸ್ಮೈಲ್ ಕೊಟ್ಟದ್ದು.

ಆದರೆ ಪಂಜದ ಪ್ರಜ್ಞಾವಂತ ಜನರು ಭಾರತದಲ್ಲಿ ಲಾಕ್ಡೌನ್ ಯಾವ ಕಾರಣಕ್ಕಾಗಿ ಮಾಡಲಾಗಿದೆ ಎಂಬ ಬಗ್ಗೆ ಖಚಿತ ಮಾಹಿತಿ ಉಳ್ಳವರು. ಒಂದೂರಿನಿಂದ ಮತ್ತೊಂದೂರಿಗೆ ರೋಗವಾಹಕ ಆಗದಿರಲೆಂದು ಈ ಲಾಕ್ಡೌನ್ ಎನ್ನುವುದರಲ್ಲಿ ಊರವರಿಗೆ ಸಂಶಯವಿಲ್ಲ. ಆದುದರಿಂದ ಊರವರು ಈ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿ ಪಂಜ ಗ್ರಾ.ಪಂ. ಪಿಡಿಒ ಅವರಿಗೆ ದೂರು ಸಲ್ಲಿಸಿದ್ದರು. ಇದನ್ನಾಧರಿಸಿ ಪಿಡಿಒ ಅವರು ಸುಬ್ರಹ್ಮಣ್ಯ ಠಾಣೆಗೆ ಯುವಕನ ವಿರುದ್ದ ದೂರು ಸಲ್ಲಿಸಿದ್ದರು.

ದೂರದ ಊರಿನಿಂದ ಬಂದುದಕ್ಕಾಗಿ ಊರವರ ಆತಂಕ, ಸಾಮಾಜಿಕ ಪ್ರಜ್ಞೆ ಮತ್ತು ದೂರನ್ನಾಧರಿಸಿ ವಿಜಯಕುಮಾರ್ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಪರೀಕ್ಷಿಸಲಾಗಿದ್ದು, ಕೊರೋನಾಕ್ಕೆ ಸಂಬಂಧಿಸಿ ಯಾವುದೇ ರೋಗ ಲಕ್ಷಣ ಕಂಡು ಬರದ ಹಿನ್ನೆಲೆಯಲ್ಲಿ ಅವರನ್ನು ಮನೆಗೆ ವಾಪಾಸು ಕಳುಹಿಸಿರುವುದಾಗಿ ಮತ್ತು ಸ್ವಲ್ಪ ದಿನ ಹೋಂ ಕ್ವಾರಂಟೈನ್ ನಲ್ಲಿ ಇರಬೇಕೆಂದು ತಿಳಿಸಿ ಮನೆಗೆ ಕಳುಹಿಸಿಕೊಡಲಾಗಿದೆ.

Leave A Reply

Your email address will not be published.