ಪುತ್ತೂರು | ಕೊರೋನಾ ಹರಡುವಿಕೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪೆರ್ಲಂಪಾಡಿಯ ದಿನಸಿ ವ್ಯಾಪಾರಿಯೊಬ್ಬರ ಪರಿಣಾಮಕಾರಿ ವಿಧಾನ

ಪುತ್ತೂರು : ಕೊರೊನಾ ವೈರಸ್ ಸೋಂಕು ಹರಡದಂತೆ ದೇಶಾದ್ಯಂತ ಲಾಕ್‌ಡೌನ್ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಮಾ.24 ರಂದು ರಾತ್ರಿ ಮಾಡಿದ ಘೋಷಣೆಯನ್ನು ಸರಿಯಾಗಿ ಪಾಲಿಸುವ ನಿಟ್ಟಿನಲ್ಲಿ ಜನರು ದಿನ ನಿತ್ಯದ ಅಗತ್ಯ ವಸ್ತುಗಳಿಗೆ ಅಂಗಡಿಗಳಿಗೆ ಮುಗಿ ಬೀಳದಂತೆ ತಡೆಯಲು ಹಲವಾರು ಜನರು ವಿವಿಧ ರೀತಿಯ ಕಂಟ್ರೋಲ್ ವಿಧಾನಗಳನ್ನು ಮಾಡುತ್ತಿದ್ದಾರೆ. ಕೆಲವರು ಸರಕಾರ ಹೇಳಿದಂತೆ, ತಮ್ಮ ಅಂಗಡಿಯ ಮುಂದೆ ಒಂದು ಮೀಟರಿನ ಅಂತರದಲ್ಲಿ ಸರ್ಕಲ್ ಹಾಕಿದ್ದಾರೆ. ಅದರೊಳಗೆ ನಿಂತು, ಕನಿಷ್ಠ ಒಂದು ಮೀಟರ್ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅದರ ಹಿಂದಿನ ಉದ್ದೇಶ.

ಇದಕ್ಕಿಂತಲೂ ವಿಭಿನ್ನವಾಗಿ ಮತ್ತು ಪರಿಣಾಮಕಾರಿಯಾಗಿ ಜನಸಂದಣಿ ನಿಯಂತ್ರಿಸುವ ಹೊಸ ವಿಧಾನವನ್ನು ನಮ್ಮ ಪುತ್ತೂರು ತಾಲೂಕಿನ ಪೆರ್ಲಂಪಾಡಿಯ ಕುಂಟಿಕಾನದ ದಿನಸಿ ವ್ಯಾಪಾರಸ್ಥರೊಬ್ಬರು ಕಾರ್ಯಗತ ಮಾಡಿದ್ದಾರೆ. ಗ್ರಾಹಕರು ಫೋನ್ ಕರೆ ಮಾಡಿ ಅವರ ವಸ್ತುಗಳ ಪ್ಯಾಕ್ ಸಿದ್ಧಗೊಂಡ ಬಳಿಕ ಗ್ರಾಹಕರು ಅಂಗಡಿಗೆ ಬಂದು ಕೊಂಡೊಯ್ಯುವಂತೆ ಮಾಡುವ ಮೂಲಕ ಕೊರೊನಾ ವೈರಸ್ ಹರಡದಂತೆ ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದರ ಮೂಲಕ ಅಂಗಡಿಯ ಮಾಲೀಕ ಅವರು ಇತರರಿಗೆ ಮಾದರಿಯಾಗಿದ್ದಾರೆ.

ಇತ್ತೀಚೆಗೆ ಪ್ಲಾಸ್ಟಿಕ್ ಮುಕ್ತಗೊಳಿಸುವ ಆಂದೋಲನದಲ್ಲಿ ಎಲ್ಲರಿಗೂ ಮಾದರಿಯಾದ ಪೆರ್ಲಂಪಾಡಿಯ ಪ್ರಸಾದ್ ಕುಂಟಿಕಾನ ಎಂಬವರು ತನ್ನ ದಿನಸಿ ವ್ಯಾಪಾರದ ಮಳಿಗೆಗೆ ಜನರು ಬಂದು ಮುಗಿ ಬೀಳದಂತೆ ಈ ಕ್ರಮ ಕೈಗೊಂಡಿದ್ದಾರೆ.

ಲಾಕ್‌ಡೌನ್ ಘೋಷಣೆ ಸರಿಯಾಗಿ ಪಾಲಿಸಬೇಕಾದರೆ ಜನರು ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು. ಆದರೆ ಬೆಳಿಗ್ಗೆ ಗಂಟೆ 6 ರಿಂದ ಮಧ್ಯಾಹ್ನ ಗಂಟೆ 12 ರ ತನಕ ದಿನಸಿ ಅಗತ್ಯ ವಸ್ತುಗಳ ಖರೀದಿಗೆ ಸಮಯವಕಾಶ ನೀಡಿದಾಗ ಜನರು ಒಮ್ಮೆಲೆ ದಿನ ನಿತ್ಯದ ಸಾಮಾಗ್ರಿಗಳಿಗೆ ಅಂಗಡಿಗಳ ಮೊರೆ ಹೋಗಿ ದಿನಸಿ ಅಂಗಡಿಗಳಿಗೆ ಮುಗಿ ಬೀಳುವ ಪರಿಸ್ಥಿತಿಯಿಂದ ಕೊರೊನಾ ನಿಯಂತ್ರಿಸಲು ಅಸಾಧ್ಯ ಎಂದು ಮನಗಂಡ ದಿನಸಿ ವ್ಯಾಪಾರಸ್ಥ ಪ್ರಸಾದ್ ಕುಂಟಿಕಾನ ಅವರು ತನ್ನ ದಿನಸಿ ಅಂಗಡಿಗೆ ಗ್ರಾಹಕರು ಮುಗಿ ಬೀಳದಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗ್ರಾಹಕರು ಅವರಿಗೆ ಫೋನ್ ಮಾಡಿ ಅವಶ್ಯಕ ವಸ್ತುಗಳ ಪಟ್ಟಿ ತಿಳಿಸಿದರೆ ತಕ್ಷಣ ಅದನ್ನು ಸಿದ್ದಪಡಿಸಿ ಪ್ಯಾಕ್ ಮಾಡಿ ಇಟ್ಟು ಗ್ರಾಹಕರಿಗೆ ಫೋನ್ ಮಾಡಲಾಗುತ್ತದೆ. ಗ್ರಾಹಕರ ಅಂಗಡಿಗೆ ಬಂದು ಕಾಯುವ ಪರಿಸ್ಥಿತಿ ಇಲ್ಲದೆ ತನ್ನ ಸಾಮಾಗ್ರಿಗಳನ್ನು ಕೊಂಡೊಯ್ಯುತ್ತಾರೆ. ಈ ಮೂಲಕ ಅಂಗಡಿಯ ಮುಂದೆ ಹೆಚ್ಚು ಕಮ್ಮಿ ಜನರ ಗುಂಪು ಇಲ್ಲದಂತೆ ಮಾಡುತ್ತಿದ್ದಾರೆ. ಈ ರೀತಿ ಸಾಮಾಜಿಕ ಅಂತರವನ್ನು ಪರಿಣಾಮಕಾರಿಯಾಗಿ ಕಾಯ್ದು ಕೊಳ್ಳುವ ಕೆಲಸ ಮಾಡುತ್ತಿರುವುದರ ಮೂಲಕ ಅವರು ಇತರರಿಗೆ ಮಾದರಿಯಾಗಿದ್ದಾರೆ.

ನಮ್ಮ ಅಂಗಡಿಗೆ ನಿತ್ಯ ಬರುವ ಗ್ರಾಹಕರೇ ಬರುವುದು. ಹಾಗಾಗಿ ಅವರು ನನಗೆ ಪೋನ್ ಮಾಡಿ ವಸ್ತುಗಳ ಪಟ್ಟಿ ತಿಳಿಸಿದರೆ ಸಾಕು. ನಾನು ಎಲ್ಲವನ್ನು ಪ್ಯಾಕ್ ಮಾಡಿ ಇಟ್ಟು ಅವರಿಗೆ ಫೋನ್ ಮಾಡಿ ತಿಳಿಸುತ್ತೇನೆ. ಅವರು ತಕ್ಷಣ ಬಂದು ಸಾಮಾಗ್ರಿಗಳನ್ನು ಕೊಂಡೊಯ್ಯುತ್ತಾರೆ. ಅದೂ ಅಲ್ಲದೆ ಯಾರಲ್ಲೂ ಹಣವನ್ನು ಪಡೆದಿಲ್ಲ. ಎಲ್ಲವೂ ಕ್ರೆಡಿಟ್ ಮೂಲಕ ಕೊಡಲಾಗುತ್ತಿದೆ. ಜೊತೆಗೆ ಅಂಗಡಿಗೆ ಬರುವವರು ತಮ್ಮ ಸ್ವಚ್ಛತೆ ಕಾಪಾಡಿಕೊಳ್ಳಲು ಅಂಗಡಿಯ ಮುಂದೆ ಸಾಬೂನು ಮತ್ತು ನೀರು ಇಡಲಾಗಿದೆ.

– ಹರಿಪ್ರಸಾದ್ ಕುಂಟಿಕಾನ

ಚಾರಣಕ್ಕೆ ತೆರಳಿದವರ ಕುಂಡೆಗೆ ಬಿಸಿ ಬಿಸಿ ಪೊಕ್ಕುಲ್ ಬರುವಂತೆ ಛಡಿ ಏಟು !

Leave A Reply

Your email address will not be published.