ಉಪ್ಪಿನಂಗಡಿ| ಬೆಳ್ಳಂಬೆಳಗ್ಗೆ ಬೈಕ್ ಚೈನ್ ತುಂಡಾಗಿ ಅಸಹಾಯಕರಾದ ಯುವಕರು |ಪೊಲೀಸರಿಂದ ಸಕಾಲಿಕ ಸ್ಪಂದನೆ | ಯುವಕರಿಂದ ಕಣ್ಣೀರಿನ ಕೃತಜ್ಞತೆ

Share the Article

ಕೊರೋನಾ ಕಾರಣಕ್ಕೆ ದೇಶ ವ್ಯಾಪಿ ಲಾಕ್ ಡೌನ್ ನಿಯಮ ಜಾರಿಯಲ್ಲಿರುವುದರಿಂದ ಬೆಂಗಳೂರಿನಲ್ಲಿ ಕೆಲಸಕ್ಕಿದ್ದ ಉಡುಪಿ ಹಾಗೂ ಬೈಂದೂರಿನ ಯುವಕರಿಬ್ಬರು ತಾವು ಉಳಿದುಕೊಂಡಿದ್ದ ಪಿಜಿಯಲ್ಲಿ ಊಟೋಪಚಾರವಿಲ್ಲದೆ ಹಸಿವಿನಿಂದ ಕಂಗೆಟ್ಟು ಬೈಕೊಂದರಲ್ಲಿ ಊರಿಗೆ ಹೊರಟಾಗ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ಬೈಕ್ ಚೈನ್ ತುಂಡರಿಸಲ್ಪಟ್ಟು ಸಂಕಷ್ಠಕ್ಕೀಡಾಗಿದ್ದರು.

ಬೈಕ್ ಸಹಸವಾರ ಒಂದು ಕಾಲನ್ನು ಕಳಕೊಂಡ ಅಂಗವಿಕಲರಾಗಿದ್ದು, ನರಮನುಷ್ಯ ಬೀದಿಗಿಳಿಯದಂತೆ ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿದ್ದಾಗ ಬೈಕ್ ಕೈಕೊಟ್ಟು ಅತಂತ್ರರಾದವರಿಗೆ ಉಪ್ಪಿನಂಗಡಿ ಎಸೈ ಈರಯ್ಯ ಮತ್ತು ಭರತ್ ರವರ ತಂಡ ನೆರವಿಗೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ.

ಯುವಕರಿಗೆ ಮುಂಜಾನೆಯ ಉಪಹಾರದ ಹಾಗೂ ಮಧ್ಯಾಹ್ನ ದ ಭೋಜನದ ವ್ಯವಸ್ಥೆಯನ್ನು ಕಲ್ಪಿಸಿದ ಪೊಲೀಸರು ಗ್ಯಾರೇಜ್ ಮಾಲಕರನ್ನು ಕರೆಯಿಸಿ ಬೈಕ್ ಗೆ ಬದಲಿ ಚೈನ್ ಜೋಡಿಸಿ ಅಸಹಾಯಕತೆಯಲ್ಲಿದ್ದ ಅಂಗವಿಕಲ ಯುವಕ ಮತ್ತು ಅವರನ್ನು ಕರೆತಂದ ಬೈಕ್ ಸವಾರ ಸೇರಿದಂತೆ ಯುವಕರಿಬ್ಬರಿಗೆ ಪ್ರಯಾಣ ಮುಂದುವರೆಸಲು ಸಹಕರಿಸಿದರು.

ಎಲ್ಲೆಡೆ ಯಾವುದೂ ಲಭಿಸದ ಸಂಧರ್ಭದಲ್ಲಿ ಕಾಡಿದ ಹಸಿವು, ಬಾಯಾರಿಕೆ, ಬೈಕ್ ಕೈಕೊಟ್ಟು ಪ್ರಯಾಣಿಸಲಾಗದ ದುಸ್ಥಿತಿಯ ನಡುವೆ ಉಪ್ಪಿನಂಗಡಿ ಪೊಲೀಸ್ ಅಧಿಕಾರಿಗಳ ಮಾನವೀಯ ಸ್ಪಂದನಕ್ಕೆ ಯುವಕರಿಬ್ಬರಿಂದ ಕಣ್ಣೀರಿನ ಕೃತಜ್ಞತೆ ವ್ಯಕ್ತವಾಯಿತು.

Leave A Reply

Your email address will not be published.