

ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಮೆಟ್ರೋ ನಿಲ್ದಾಣಗಳಲ್ಲಿ ಆದಷ್ಟು ಶೀಘ್ರವೇ ಪ್ಯಾಕಿಂಗ್ ಮಾಡಿದ ಆಹಾರ ಪಟ್ಟಣ, ಟೀ, ಕಾಫಿ ತಿಂಡಿ ಒದಗಿಸುವ ಕಿಯೋಸ್ಕ್ ಮಳಿಗೆ ತೆರೆಯುವ ಯೋಜನೆಯಲ್ಲಿದೆ.
ಹಾಗಾಗಿ, ಆದಷ್ಟು ಶೀಘ್ರದಲ್ಲಿ ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಆಹಾರದ ಪೊಟ್ಟಣಗಳು, ತಂಪು ಪಾನೀಯಗಳ ಜೊತೆಗೆ ಟೀ, ಕಾಫಿ ಸೌಲಭ್ಯ ದೊರೆಯುವ ಸಾಧ್ಯತೆ ದಟ್ಟವಾಗಿದೆ.
‘ನಮ್ಮ ಮೆಟ್ರೋ’ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಈ ಯೋಜನೆಯಿಂದ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಖರ್ಚಿಲ್ಲದೇ ಬರುವ ಆದಾಯ ಮೂಲವಾಗಲಿದೆ. ಅದಕ್ಕಾಗಿ ಕಿಯೋಸ್ಕ್ ಗಳಿಗೆ ತುಸು ಜಾಗವನ್ನು ಬಾಡಿಗೆಗೆ ನೀಡಬೇಕಾದ ಅವಶ್ಯಕತೆ ಎದುರಾಗಲಿದೆ.
ಈ ಕಿಯೋಸ್ಕ್ ಅಥವಾ ಇನ್ನಿತರ ಮಳಿಗೆಗಳಿಗೆ ನಿಲ್ದಾಣದ ಅತ್ಯಂತ ಕಡಿಮೆ ಸ್ಥಳಾವಕಾಶದ ಅಗತ್ಯವಿರುವುದರಿಂದ, ಧಾವಂತದಲ್ಲಿ ಮೆಟ್ರೋ ರೈಲು ಹತ್ತುವ ಅಥವಾ ಮೆಟ್ರೋ ನಿಲ್ದಾಣದಿಂದ ದೂರದ ಪ್ರದೇಶಗಳಿಗೆ ತೆರಳುವವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಪ್ಯಾಕೆಟ್ ಮಾಡಿದ ತಿಂಡಿ, ಜ್ಯೂಸ್, ಪಾನೀಯ, ಟೀ, ಕಾಫಿ, ಚಾಕೋಲೆಟ್ ಮತ್ತು ಆಹಾರ ಪೊಟ್ಟಣಗಳು ಪ್ರಯಾಣಿಕರಿಗೆ ಕಡಿಮೆ ಹಾಗೂ ಕೈಗೆಟಕುವ ದರದಲ್ಲಿ ದೊರೆಯಲಿದ್ದು, ಇದಲ್ಲದೇ ತಕ್ಕ ಟಿಕೆಟ್ ಪಡೆಯುವ ಹಲವರಿಗೆ ತಕ್ಕ ಮಟ್ಟಿನ ಚಿಲ್ಲರೆ ಸಮಸ್ಯೆ ಕೂಡ ನಿವಾರಣೆಯಾಗಲಿದೆ. ಇದರ ಜೊತೆಗೆ ನಮ್ಮ ಮೆಟ್ರೋಗೂ ಇದೊಂದು ಆದಾಯ ಮೂಲವಾಗಲಿದೆ .
ಈ ನಿರ್ಧಾರದಿಂದ ಪ್ರಯಾಣಿಕರಲ್ಲಿ ವಿಭಿನ್ನ ಹಾಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಆಹಾರಕ್ಕಾಗಿ ಯಾವುದೇ ರೆಸ್ಟೊರೆಂಟ್‌ಗಳಾಗಲಿ ಅಥವಾ ಕಿಯೋಸ್ಕ್‌ಗಳಾಗಲಿ ಇರದೆ ಇರುವುದರಿಂದ ಈ ಹೊಸ ಯೋಜನೆಯಿಂದ ಅನೇಕ ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ ಎಂದು ಅಂದಾಜಿಸಲಾಗಿದೆ.
ಪ್ಯಾಕ್ ಮಾಡದ ಆಹಾರ ಪದಾರ್ಥಗಳು ರೈಲಿನೊಳಗೆ ಸಾಗಿಸಲು ಅನುಮತಿ ಇಲ್ಲದೆ ಇರುವುದರಿಂದ ಕೇವಲ ಆಹಾರ ಪೊಟ್ಟಣ ಮಾತ್ರವಲ್ಲದೇ ಭವಿಷ್ಯದಲ್ಲಿ ಬೇಕರಿ, ಟೇಕ್‌ಅವೇಗಳು, ಎಲೆಕ್ಟ್ರಾನಿಕ್ ಉಪಕರಣ, ಪುಸ್ತಕಗಳು, ಜನರಲ್ ಸ್ಟೋರ್ , ಸೌಂದರ್ಯವರ್ಧಕ ಮಳಿಗೆಗಳು ನಿಲ್ದಾಣಕ್ಕೆ ಅವಕಾಶ ಮಾಡಿಕೊಡುವತ್ತ ಬಿಎಂಆರ್‌ಸಿಎಲ್ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ.












