ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಅಪರಾಧಿಗಳನ್ನು ಬಿಡುಗಡೆಗೊಳಿಸುವಂತೆ ಕಾಂಗ್ರೆಸ್ ಮಿತ್ರ ಪಕ್ಷ, ಡಿಎಂಕೆ ನಾಯಕ ಸ್ಟಾಲಿನ್ ಆಗ್ರಹ !!
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಏಳು ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರಬರೆದಿದ್ದಾರೆ.
ಈ ಹಿಂದೆ ಕೂಡಾ ಡಿಎಂಕೆ ರಾಜೀವ್ ಹತ್ಯಾ ಆರೋಪಿಗಳ ಬಿಡುಗಡೆಗೆ ಒತ್ತಾಯಿಸಿತ್ತು.
ಈಗ ಏಳು ಅಪರಾಧಿಗಳು ಬಹಳ ಕಾಲದಿಂದ ಜೈಲು ವಾಸ ಅನುಭವಿಸುತ್ತಿದ್ದಾರೆ. ಅವರ ಮಾನಸಿಕ ಸ್ಥಿತಿ ತೀರಾ ಹದಗೆಟ್ಟಿದೆ. ಅವರನ್ನು ಮಾನವೀಯ ದೃಷ್ಟಿಯಿಂದ ಬಿಡುಗಡೆ ಮಾಡಬೇಕು ಎಂದು ಡಿಎಂಕೆ ನಾಯಕ ಮತ್ತು ಮುಖ್ಯಮಂತ್ರಿ ಸ್ಟಾಲಿನ್ ಅವರು ಮನವಿ ಮಾಡಿದ್ದಾರೆ.
ನಳಿನಿ, ಮುರುಗನ್, ಸಂತನ್, ಪೆರಾರಿವಾಲನ್, ರಾಬರ್ಟ್ ಪಯಾಸ್, ರವಿಚಂದ್ರನ್ ಮತ್ತು ಜಯಕುಮಾರ್ ಸೇರಿದಂತೆ ಏಳು ಅಪರಾಧಿಗಳು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಅವರ ಬಿಡುಗಡೆಗೆ ಡಿಎಂಕೆ ನಾಯಕ ಮತ್ತು ಮುಖ್ಯಮಂತ್ರಿ ಇದೀಗ ಒತ್ತಾಯಿಸುತ್ತಿರುವುದು.
ಆತಂಕದ ಮತ್ತು ವಿಚಿತ್ರ ವಿಷಯ ಏನೆಂದರೆ, ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇದೇ ಡಿಎಂಕೆ ಪಕ್ಷದೊಂದಿಗೆ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಹೊಂದಾಣಿಕೆ ಮಾಡಿಕೊಂಡು ಚುನಾವಣೆಯನ್ನು ಎದುರಿಸಿತ್ತು. ಅದೇ ಪಕ್ಷದ ಅಧಿನಾಯಕಿಯ ಗಂಡ ಅಂದರೆ ಸೋನಿಯಾ ಗಾಂಧಿ ಅವರ ಪತಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಕೊಂದ ಅಪರಾಧಿಗಳನ್ನು ಬಿಡುಗಡೆ ಮಾಡಲು ಡಿಎಂಕೆ ರಾಷ್ಟ್ರಪತಿಗಳಿಗೆ ಬೇಡಿಕೆಯಿಟ್ಟಿದೆ. ಈ ಹಿಂದೆ ಕೂಡ ಡಿಎಂಕೆ ಪಕ್ಷವು ರಾಜೀವ್ ಗಾಂಧಿ ಹತ್ಯೆಗೈದ ಅಪರಾಧಿಗಳಿಗೆ ತನ್ನ ಸಾಫ್ಟ್ ಕಾರ್ನರ್ ಅನ್ನು ತೋರಿಸುತ್ತಲೆ ಬಂದಿತ್ತು.
ಇಂದು ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪುಣ್ಯತಿಥಿ. 30 ವರ್ಷಗಳ ಹಿಂದೆ ಮೇ.21, 1991ರಲ್ಲಿ ತಮಿಳು ನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ರ್ಯಾಲಿಯಲ್ಲಿ ರಾಜೀವ್ ಗಾಂಧಿಯವರು ಭಾಗವಹಿಸಿದ್ದ ಸಂದರ್ಭದಲ್ಲಿ ಎಲ್ ಟಿಟಿಇ ಕಾರ್ಯಕರ್ತರ ಆತ್ಮಹತ್ಯಾ ದಾಳಿಗೆ ಬರ್ಬರವಾಗಿ ಹತ್ಯೆಗೀಡಾಗಿದ್ದರು.