ಹಸಿವೆಯಿಂದ ಬಾವಲಿ ತಿಂದು ಬಿದ್ದಿದ್ದ ಹಣ್ಣು ತಿನ್ನುತ್ತಾ ಮಡಿಕೇರಿಯತ್ತ ಸಾಗುತ್ತಿದ್ದ ದಾರಿಹೋಕ | ಪುತ್ತೂರು ಸಂಪ್ಯ ಪೊಲೀಸರ ಸ್ಪಂದನೆ ಹೇಗಿತ್ತು ಗೊತ್ತಾ ?!
ಉಣ್ಣಲು ಆಹಾರವಿಲ್ಲದೆ ಬಾವಲಿ ತಿಂದು ಬಿದ್ದಿದ್ದ ಹಣ್ಣುಗಳನ್ನು ಸೇವಿಸುತ್ತಿದ್ದ ಘಟನೆ ಕೆಲ ದಿನಗಳ ಹಿಂದೆ ಇಲ್ಲೇ ಪಕ್ಕದಲ್ಲೇ ನಡೆದಿದೆ.
ಈ ವಿಚಾರ ಗೊತ್ತಾಗುತ್ತಿದ್ದಂತೆ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಪೊಲೀಸ್ ರು ಮನೆಯಿಂದ ತಂದಿದ್ದ ಆಹಾರವನ್ನು ನೀಡಿ ಹಸಿವು ನೀಗಿಸುವ ಮೂಲಕ ತಕ್ಷಣ ಸ್ಪಂದಿಸಿದ್ದಾರೆ.
ಮಡಿಕೇರಿ ರಾಣಿಪೇಟೆ ನಿವಾಸಿ ಕೆಲ ದಿನಗಳ ಹಿಂದೆ ಕೆಲಸಕ್ಕೆಂದು ಮಂಗಳೂರಿಗೆ ಬಂದಿದ್ದರು. ಆದರೆ ಲಾಕ್ ಡೌನ್ ಪರಿಣಾಮ ಕೆಲಸ ಇಲ್ಲದೆ, ಊರಿಗೆ ತೆರಳಲು ಬಸ್ ಇಲ್ಲದೆ ಮಂಗಳೂರಿನಿಂದ ಮಡಿಕೇರಿಗೆ ನಡೆದುಕೊಂಡು ಹೊರಟಿದ್ದರು. ಎರಡು ದಿನಗಳಿಂದ ಆಹಾರ ಸಿಗದೆ ಉಪವಾಸದಿಂದಲೇ ಪಯಣ ಮುಂದುವರಿಸಿದ್ದರು. ಮಾಣಿ- ಮೈಸೂರು ಹೆದ್ದಾರಿಯ ಪುತ್ತೂರು ತಾಲೂಕಿನ ಸಂಟ್ಯಾರು ಬಳಿ ತಲುಪಿದ್ದು ಹಸಿವು ತಡೆದುಕೊಳ್ಳಲಾಗದೆ ಅಲ್ಲಿ ಬಾವಲಿ ಅರ್ಧ ತಿಂದು ಹಾಕಿದ ಮಾವಿನ ಹಣ್ಣು ತಿನ್ನಲು ತೊಡಗಿದ್ದರು.
ಈ ವಿಚಾರ ಸಂಟ್ಯಾರು ಚೆಕ್ ಪಾಯಿಂಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಪ್ಯ ಠಾಣಾ ಪೊಲೀಸ್ ಸಿಬ್ಬಂದಿಗಳಾದ ದಯಾನಂದ ಹಾಗೂ ಕಿರಣ್ ಅವರ ಗಮನಕ್ಕೆ ಬಂತು. ತತ್ಕ್ಷಣ ಪೋಲಿಸರು ತಾವು ಮಧ್ಯಾಹ್ನದ ಊಟಕ್ಕೆಂದು ಮನೆಯಿಂದ ತಂದಿದ್ದ ಊಟವನ್ನು ಆ ವ್ಯಕ್ತಿಗೆ ನೀಡಿ ಹಸಿವು ನೀಗಿಸಿ ಅನಂತರ ವಾಹನವೊಂದರಲ್ಲಿ ಮಡಿಕೇರಿಗೆ ಹತ್ತಿಸಿ ಕಳುಹಿಸಿದ್ದಾರೆ.
ಲಾಕ್ ಡೌನ್ ಸಂಕಷ್ಟದ ಬಿಡುವಿಲ್ಲದ ಕರ್ತವ್ಯದ ನಡುವೆ ಪೊಲೀಸರಿಬ್ಬರ ಸ್ಪಂದನೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದ್ದು, ಸಿಬಂದಿಗಳ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹೃಷಿಕೇಶ್ ಸೋನಾವಣೆ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.