ಶವ ಸಾಗಿಸಲು ಅಂಬುಲೆನ್ಸ್ ಸಿಗದೆ ಜೆಸಿಬಿಯಲ್ಲೇ ಹೆಣ ಸಾಗಿಸಿದರು !!

ಚಿಕ್ಕಬಳ್ಳಾಪುರ : ತಾಯಿಯೊಬ್ಬಳು ತನ್ನ ಜೀವನದ ಕೊನೆಯ ಕ್ಷಣದಲ್ಲಿ, ಅಸಹಾಯಕಳಾಗಿ ತಾನು ಹೆತ್ತ ಮಗಳ ಮಡಿಲಲ್ಲಿ ಮಲಗಿ ಜೀವ ಹೋದಂತಹ ದುಃಖಕರ ಘಟನೆ ಚಿಕ್ಕಬಳ್ಳಾಪುರದ ಚಿಂತಾಮ ಕೋಲಾರ ರಸ್ತೆಯ ಕುರುಟುಹಳ್ಳಿ ಗ್ರಾಮದಲ್ಲಿ ನಡೆದಿದೆ.

 

ನಂತರ ಆ ಶವವನ್ನು ಜೆಸಿಬಿಯಲ್ಲಿ ಹೊತ್ತೊಯ್ದು ಮರಣೋತ್ತರ ಪರೀಕ್ಷೆ ಮಾಡಿಸಿ, ನಂತರ ಅದೇ ಜೆಸಿಬಿಯಲ್ಲಿ ವಾಪಾಸು ತಂದು ಶವಸಂಸ್ಕಾರ ಮಾಡಿರುವುದಾಗಿ ತಿಳಿದುಬಂದಿದೆ.

ಘಟನೆಯ ವಿವರ :

ಚಂದ್ರಕಲಾ ಕೊತ್ತೂರು ಗ್ರಾಮದವಳು. ಆಕೆಗೆ ಕುರುಟುಹಳ್ಳಿಯ ಶ್ರೀನಿವಾಸ ಜತೆ ಮದುವೆಯಾಗಿದ್ದು, ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳಿದ್ದಾರೆ. ಆದರೆ ವಿಧಿಯಾಟದಿಂದ ಶ್ರೀನಿವಾಸ ಹತ್ತು ವರ್ಷಗಳ ಹಿಂದೆಯೇ ನಿಧನರಾಗಿದ್ದಾರೆ. ಅದಾದ ನಂತರ ಆಕೆ ಕುರುಟುಹಳ್ಳಿ ಗ್ರಾಮ ಬಿಟ್ಟು ಮಕ್ಕಳೊಂದಿಗೆ ಚಿಂತಾಮಣಿಗೆ ಬಂದು ಅಲ್ಲಿಯೇ ಜೀವನ ಆರಂಭಿಸಿದ್ದಳು. ಮಗನನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು, ತನ್ನ 8 ವರ್ಷದ ಮಗಳು ಲಾವಣ್ಯ ಜತೆ ಜೀವನ ನಡೆಸಲಾರಂಭಿಸಿದ್ದಳು. ಇತ್ತ ಕೂಲಿ ನಾಲಿ ಮಾಡಿಕೊಂಡು ಬದುಕುತ್ತಿದ್ದ ಚಂದ್ರಕಲಾಗೆ ಕಳೆದ ಒಂದು ವಾರದಿಂದ ಆರೋಗ್ಯದಲ್ಲಿ ವ್ಯತ್ಯಯ ಆಗಿತ್ತು. ಅದೇ ಕಾರಣಕ್ಕೆ ಕಳೆದ ಬುಧವಾರ ಮಧ್ಯರಾತ್ರಿ ಮಗಳೊಂದಿಗೆ ದಾರಿಯಲ್ಲಿ ಸಿಕ್ಕ ಯಾವುದೋ ವಾಹನದಲ್ಲಿ ಬಂದು ಕುರುಟುಹಳ್ಳಿ ಹೋಟೆಲ್ ಮುಂದೆ ಇಳಿದಿದ್ದಳು.

ಆವಾಗಲೇ ಚಂದ್ರಕಲಾ ಗೆ ತೀವ್ರ ಅಸೌಖ್ಯ ಬಾಧಿಸುತ್ತಿದ್ದು ರಸ್ತೆ ಬದಿಯೇ ಕುಳಿತುಕೊಂಡು, ನಸುಸ್ತಾಗಿ ಅಲ್ಲಿಯೇ ಮಗಳ ತೊಡೆ ಮೇಲೆ ಮಲಗಿದ್ದಳು. ಅದನ್ನು ಕಂಡ ಕೆಲ ಸ್ಥಳೀಯರು, ನೀವ್ಯಾರು? ಏನೆಂದು ವಿಚಾರಿಸಿದ್ದಾರೆ. ತಾಯಿಯನ್ನು ಎದ್ದು ಕೂರಿಸುವಂತೆ ಮಗಳಿಗೆ ಹೇಳಿಆದರೆ ತಾಯಿಗೆ ಕೂರಲು ಸಾಧ್ಯವಾಗಿಲ್ಲ. ಅವರ ಸ್ಥಿತಿಯನ್ನು ಮನಗಂಡ ಗ್ರಾಮಸ್ಥರು ಊಟ, ನೀರಿನ ವ್ಯವಸ್ಥೆಯನ್ನು ಮಾಡಿಕೊಟ್ಟು ಅಲ್ಲಿಂದ ತೆರಳಿದ್ದರು. ಲಾವಣ್ಯ ಕೂಡ ತಾಯಿಯನ್ನು ತೊಡೆ ಮೇಲೆ ಮಲಗಿಸಿಕೊಂಡು ಹಾಗೇ ನಿದ್ರೆಗೆ ಜಾರಿದ್ದಳು.

ಗುರುವಾರ ಬೆಳಗ್ಗೆ ಎದ್ದ ಲಾವಣ್ಯ ತಾಯಿಯನ್ನು ಎಬ್ಬಿಸಲು ಪ್ರಯತ್ನಿಸಿದ್ದಳು. ಆದರೆ ಆಕೆ ಸುಮ್ಮನಿದ್ದಳು. ಮಗಳು ಲಾವಣ್ಯಾಳಿಗೆ ಒಂದು ಕ್ಷಣ ಏನು ಮಾಡಬೇಕೆಂಬುದೇ ತಲೆಗೆ ಹೊಳಿಯಲಿಲ್ಲ. ಅಮ್ಮ ಏಳುತ್ತಿಲ್ಲ ಎಂದು ಲಾವಣ್ಯ ಅಳುತ್ತಿದ್ದಳು. ಈ ಮನಮಿಡಿಯುವ ದೃಶ್ಯವನ್ನು ಕಂಡ ಅಲ್ಲಿನ ಗ್ರಾಮಸ್ಥರು ಅವಳ ನೆರವಿಗೆ ಧಾವಿಸಿದರು. ಅಷ್ಟರಲ್ಲಾಗಲೇ ಆಕೆಯ ತಾಯಿ ಮೃತಪಟ್ಟಿದ್ದಳು. ಗ್ರಾಮಸ್ಥರು ಬಂದು ನೋಡುವಷ್ಟರಲ್ಲಿ ಚಂದ್ರಕಲಾ ಪ್ರಾಣಪಕ್ಷಿ ಹೋಗಿ ತುಂಬಾ ಸಮಯವಾಗಿತ್ತು.

ನಂತರ ಈ ವಿಷಯವನ್ನು ಗ್ರಾಮಾಂತರ ಪೊಲೀಸರ ಗಮನಕ್ಕೆ ತಂದು ಗ್ರಾಮಸ್ಥರೆಲ್ಲ ಸೇರಿ ಚಂದ್ರಕಲಾಳ ಶವವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ವಾಹನಕ್ಕಾಗಿ ತಡಕಾಡಿದ್ದಾರೆ. ಆದರೆ ಯಾವುದೇ ವಾಹನ ಸಿಗದ ಕಾರಣ ಅಲ್ಲಿದ್ದ ಜೆಸಿಬಿಯಲ್ಲಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಅದೇ ಜೆಸಿಬಿಯಲ್ಲಿ ಶವವನ್ನು ವಾಪಾಸು ಕರೆದೊಯ್ದು ಅಂತ್ಯ ಸಂಸ್ಕಾರವನ್ನು ನೆರವೇರಿಸಿದರು.

Leave A Reply

Your email address will not be published.