ವರ್ಷದ ಬಳಿಕ  ಪುನರಾರಂಭಗೊಂಡ ಸೋಮವಾರದ ಪುತ್ತೂರು ಸಂತೆ

    

ಪುತ್ತೂರು ಸಂತೆ ಎಂದೇ ಪ್ರಸಿದ್ದವಗಿದ್ದ ಸೋಮವಾರದ ಸಂತೆ ಎ.12ರಿಂದ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಪುನರಾರಂಭಗೊಂಡಿದೆ.

ಕೋವಿಡ್ ಬಿಕ್ಕಟ್ಟಿನ ಹಿನ್ನಲೆಯಲ್ಲಿ ನಗರಸಭಾ ಸುಪರ್ದಿಯಲ್ಲಿ ನಡೆಯುತ್ತಿದ್ದ ಸೋಮವಾರದ ವಾರದ ಸಂತೆಗೆ ಕಳೆದ ಒಂದು ವರ್ಷಗಳಿಂದ ನಿರ್ಬಂಧಿಸಲಾಗಿತ್ತು. ಇದೀಗ ಸಂತೆ ಮರುಜೀವ ಪಡೆದುಕೊಂಡಿದೆ.

ತರಕಾರಿ, ಸೊಪ್ಪು, ಹಣ್ಣು ಹಂಪಲು, ವಿವಿಧ ಸರಕು ಸಾಮಾಗ್ರಿಗಳು ಸೇರಿದಂತೆ ಬಹುತೇಕ ಜನರಿಗೆ ಉಪಯೋಗವಾಗುವ ಎಲ್ಲಾ ದಿನಬಳಕೆಯ ಮತ್ತು ಇನ್ನಿತರ ಸಾಮಾಗ್ರಿಗಳು ಪುತ್ತೂರು ಸಂತೆಯಲ್ಲಿ ಜನರಿಗೆ ಕೈಗೆಟಕುವ ದರದಲ್ಲಿ ಸಿಗುತ್ತಿದ್ದು, ಇದಕ್ಕಾಗಿ ಹಲವು ಭಾಗಗಳಿಂದ ರೈತರು ಹಾಗೂ ಇತರ ಗ್ರಾಹಕರು ಪುತ್ತೂರಿನ ಸಂತೆಗೆ ಆಗಮಿಸುತ್ತಾರೆ. ಆದರೆ ಕಳೆದ ಒಂದು ವರ್ಷಗಳಲ್ಲಿ ಈ ಸಂತೆ ನಡೆದಿಲ್ಲ. ಇದರಿಂದಾಗಿ ಗ್ರಾಹಕರಿಗೆ ಸಾಕಷ್ಟು ತೊಂದರೆಯಾಗಿತ್ತು. ಇದೀಗ ಗ್ರಾಹಕರ ಮತ್ತು ವ್ಯಾಪಾರಿಗಳ ಮುಖದಲ್ಲಿ ಹರ್ಷ ಕಂಡಿದೆ. ಆದರೆ ಸಂತೆ ಆರಂಭಗೊಂಡಿರುವ ಬಗ್ಗೆ ಜನರಿಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣ ಇಂದಿನ ಸಂತೆಗೆ ಗ್ರಾಹಕರು ವಿರಳವಾಗಿದ್ದರು.

ಪುತ್ತೂರು ನಗರಸಭೆಯಿಂದ ಸಂತೆ ಮಾರುಕಟ್ಟೆ ಏಲಂ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ರೂ. 6 ಲಕ್ಷಕ್ಕೆ ಸಂತೆ ಏಲಂಗೊಂಡಿದೆ. ಕೋವಿಡ್‍ನ ನಡುವೆಯೂ ಏಲಂ ಪ್ರಕ್ರಿಯೆ ಪೂರ್ಣಗೊಂಡಿದೆ. ಏಲಂನಲ್ಲಿ ಪಡೆದುಕೊಂಡವರು ಸಂತೆಯನ್ನು ಪ್ರಾಯೋಗಿಕ ನೆಲೆಯಲ್ಲಿ ಪುನರಾರಂಬಿಸಲು ತೀರ್ಮಾನಿಸಿದ್ದಾರೆ. ಇದಕ್ಕೆ ನಗರಸಭೆಯಿಂದ ಇನ್ನಷ್ಟೇ ಅಧಿಕೃತ ಆದೇಶ ನೀಡಬೇಕಾಗಿದೆ.

ಕೋವಿಡ್ ನಿಯಮಾವಳಿ ಯಂತೆ ಸಂತೆಗೆ ಆಗಮಿಸುವ ಗ್ರಾಹಕರು ಮತ್ತು ವ್ಯಾಪಾರಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಹಾಗೂ ಅಂತರ ಪಾಲಿಸುವಂತೆ ಬೋರ್ಡ್ ಅಳವಡಿಸಲಾಗಿದೆ.

Leave A Reply

Your email address will not be published.