ರಷ್ಯಾದ ಸ್ಪುಟ್ಟಿಕ್ ವಿ ಲಸಿಕೆ ತುರ್ತು ಬಳಕೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿ

ಭಾರತದಲ್ಲಿ ಸ್ವದೇಶಿ ಕೊರೊನಾ ಲಸಿಕೆಗಳಾದ
ಕೋವಿಶೀಲ್ಡ್, ಕೋವಾಕ್ಸಿನ್ ತುರ್ತು ಬಳಕೆಗೆ ಅನುಮೋದನೆ ನೀಡಿದ ಬಳಿಕ ಇದೀಗ ರಷ್ಯಾದ ಸ್ಪುಟ್ಟಿಕ್ ವಿ ಲಸಿಕೆ ತುರ್ತು ಬಳಕೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿ ನೀಡಿದೆ.

ರಷ್ಯಾದ ಮಾಸ್ಕೋದಲ್ಲಿರುವ ಸೆಚನೋವ್ ವಿವಿಯ ಗಮಾಲಿಯಾ ಸಂಶೋಧನಾ ಕೇಂದ್ರ ಮತ್ತು ರಷ್ಯಾ ರಕ್ಷಣಾ ಸಚಿವಾಲಯ ಅಭಿವೃದ್ದಿ ಪಡಿಸಿದ, ವಿಶ್ವದ ಮೊದಲ ಕೊರೊನಾ ವಾಕ್ಸಿನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ಪುಟ್ಟಿಕ್ ವಿ ಲಸಿಕೆಯನ್ನು ರಷ್ಯಾ 2020ರ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿತ್ತು. ಭಾರತದಲ್ಲಿ ಜನರ ಮೇಲೆ ಇದರ ಪ್ರಯೋಗವನ್ನು ಹೈದರಾಬಾದಿನ ಡಾ| ರೆಡ್ಡೀಸ್  ಕಂಪನಿ ನಡೆಸುತ್ತಿದ್ದು ತುರ್ತು ಬಳಕೆಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಇದೀಗ ಡಿಸಿಜಿಐ ಈ ಲಸಿಕೆ ತುರ್ತು ಬಳಕೆಗೆ, ಉಳಿದ ಲಸಿಕೆ ಗಳಿಗೆ ಅನುಮತಿ ನೀಡಿದಂತೆ ಇದಕ್ಕೂ ಅನುಮೋದನೆ ನೀಡಿದೆ.

ಭಾರತದಲ್ಲಿ ಕೋವಿಶೀಲ್ ಮತ್ತು ಕೋವಾಕ್ಸಿನ್ ಲಸಿಕೆಯನ್ನು ಪ್ರಸ್ತುತ 45 ವರ್ಷ ಮೇಲ್ಪಟ್ಟ ಜನರಿಗೆ ನೀಡಲಾಗುತ್ತಿದೆ. ಆದರೆ ಪ್ರಸ್ತುತ ಈ ಲಸಿಕೆಗಳ ಕೊರತೆ ಕಾಣಿಸಿಕೊಂಡಿದೆ. ಮೊನ್ನೆ ಪ್ರಧಾನಮಂತ್ರಿಗಳು ಮುಖ್ಯಮಂತ್ರಿಗಳ ಸಂವಾದದಲ್ಲಿ ಸ್ಪುಟ್ನಿಕ್ ಲಸಿಕೆಯನ್ನು ಆದಷ್ಟು ಬೇಗ ಜನತೆಗೆ ಲಭ್ಯವಾಗುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಇದೀಗ ಈ ಸ್ಪುಟ್ಟಿಕ್ ಲಸಿಕೆ ಭಾರತದಲ್ಲಿ ಅನುಮತಿ ದೊರೆತಿರುವುದು ಲಸಿಕೆ ಅಭಿಯಾನಕ್ಕೆ ಹುಮ್ಮಸ್ಸು ತುಂಬಿದೆ.

ಇನ್ನು ಹೈದರಾಬಾದ್‌ನ ಡಾ| ರೆಡ್ಡಿ ಲ್ಯಾಬೋರೇಟರಿ, ಹೆಟೆರೊ ಬಯೋಫಾರ್ಮಾ, ಗ್ಲಾಂಡ್ ಫಾರ್ಮಾ, ಸ್ಟೆಲಿಸ್ ಬಯೋಫಾರ್ಮಾ ಹಾಗೂ ವಿಕ್ರೋ ಬಯೋಟೆಕ್ ಮುಂತಾದ ತಯಾರಿಕಾ ಕಂಪನಿಗಳಲ್ಲಿ ಈಗಾಗಲೇ ಸ್ಪುಟ್ಟಿಕ್ ಲಸಿಕೆಯನ್ನು ತಯಾರಿಸಲಾಗುತ್ತಿದ್ದು ವರ್ಷಕ್ಕೆ 85 ಕೋಟಿ ಸ್ಪುಟ್ಟಿಕ್ ಲಸಿಕೆಯನ್ನು ತಯಾರಿಸುವ ಸಾಮರ್ಥ್ಯ ಭಾರತದ ವಿವಿಧ ಘಟಕಗಳಿಗಿದೆ ಎಂದು ತಿಳಿದುಬಂದಿದೆ
ಈ ಎಲ್ಲಾ ಲಸಿಕೆಗಳು ಸಮೃದ್ಧವಾಗಿ ಪ್ರತಿಕಾಯಗಳ ಉತ್ಪತ್ತಿಗೆ ಸಹಾಯ ಮಾಡಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಧಿಕಗೊಳಿಸಿ ಸೋಂಕು ನಿಯಂತ್ರಣಕ್ಕೆ ತರಲು ಸಹಕಾರಿಯಾಗುತ್ತದೆ ಎಂದು ವರದಿಯಾಗಿದೆ. ಹಾಗೆಯೇ ಸರ್ಕಾರ ಇನ್ನು ಜಾನ್ಸನ್ ಅಂಡ್ ಜಾನ್ಸನ್, ನೋವಾವಾಕ್ಸ್, ಜೈಡಸ್ ಕ್ಯಾಡಿಲಾ ಹಾಗೂ ಇಂಟ್ರಾನೇಸಲ್ (ಮೂಗಿನ ಮೂಲಕ ತೆಗೆದುಕೊಳ್ಳುವ) ಲಸಿಕೆಗೂ ಅನುಮತಿ ನೀಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

Leave A Reply

Your email address will not be published.