Sania Mirza: ಟೆನಿಸ್ ಲೋಕಕ್ಕೆ ‘ಸಾನಿಯಾ’ ವಿದಾಯ! ಕೊನೆಯ ಪಂದ್ಯಕ್ಕೆ ಸೋಲಿನ ಮೂಲಕ ಅಂತ್ಯ ಹಾಡಿದ ಟೆನಿಸ್ ತಾರೆ!

Sania Mirza: WTA ದುಬೈ ಡ್ಯೂಟಿ ಫ್ರೀ ಚಾಂಪಿಯನ್ ಶಿಪ್’ನಲ್ಲಿ ಮೊದಲ ಸುತ್ತಿನಲ್ಲೇ ಸೋಲನ್ನುಂಡ ಭಾರತದ ಟೆನಿಸ್(Tennis) ತಾರೆ ತಮ್ಮ ಅದ್ಭುತ ವೃತ್ತಿಜೀವನವನಕ್ಕೆ ವಿದಾಯವನ್ನು ಹೇಳಿದರು. ಹೌದು, ಭಾರತದಲ್ಲಿ ಟೆನಿಸ್‌ಗೆ ಹೊಸ ಯುಗವನ್ನು ಪ್ರಾರಂಭಿಸಿದ ಸಾನಿಯಾ ಮಿರ್ಜಾ(Sania Mirza) ಇದೀಗ ತಮ್ಮ ವೃತ್ತಿಜೀವನದಿಂದ ನಿವೃತ್ತರಾಗಿದ್ದಾರೆ.

ಮಂಗಳವಾರ ದುಬೈನಲ್ಲಿ(Dubai) ಅಮೆರಿಕದ ಪಾಲುದಾರ ಮ್ಯಾಡಿಸನ್ ಕೀಸ್ ಅವರೊಂದಿಗೆ ನೇರ ಸೆಟ್’ಗಳಲ್ಲಿ ಅವರು ಮಣಿಯಬೇಕಾಯಿತು. ಮಹಿಳೆಯರ ಡಬಲ್ಸ್‌ನಲ್ಲಿ ಸಾನಿಯಾ ಮತ್ತು ಅಮೆರಿಕದ ಜೊತೆಗಾರ್ತಿ ಮ್ಯಾಡಿಸನ್ ಕೀಸ್ ಅವರು ತಮ್ಮ ಮೊದಲ ಪಂದ್ಯದಲ್ಲಿ ರಷ್ಯಾದ ವೆರೋನಿಕಾ ಕುಡೆರ್ಮೆಟೋವಾ ಮತ್ತು ಲ್ಯುಡ್ಮಿಲಾ ಸ್ಯಾಮ್ಸೊನೊವಾ ವಿರುದ್ಧ 4-6, 0-6 ಅಂತರದಲ್ಲಿ ಸೋಲನ್ನಪ್ಪಿದರು.

ಮಹಿಳಾ ಡಬಲ್ಸ್‌ನಲ್ಲಿ ಮೂರು ಪ್ರಶಸ್ತಿಗಳು ಸೇರಿದಂತೆ ಆರು ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಗಳನ್ನು ಸಾನಿಯಾ ಈವರೆಗೆ ಗೆದ್ದಿದ್ದಾರೆ. ಅಲ್ಲದೇ ಸಾನಿಯಾ ಮಿರ್ಜಾ ಮೂರು ದಶಕಗಳ ಕಾಲ ಟೆನಿಸ್ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ಗ್ರ್ಯಾಂಡ್ ಸ್ಲಾಮ್ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್ ತಲುಪಿದ ಮೊದಲ ಭಾರತೀಯ ಆಟಗಾರ್ತಿಯಾದವರು ಸಾನಿಯಾ. ಈ ಟೆನಿಸ್ ತಾರೆ 1999 ರಲ್ಲಿ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದ್ದರು.

ಬಳಿಕ 2003 ರಲ್ಲಿ, ಅವರು ವಿಂಬಲ್ಡನ್ ಜೂನಿಯರ್ ಗ್ರ್ಯಾಂಡ್ ಸ್ಲ್ಯಾಮ್ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು. ವಿಂಬಲ್ಡನ್‌ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಅವರು 2005 ರ ಆಸ್ಟ್ರೇಲಿಯನ್ ಓಪನ್ ಟೆನಿಸ್‌ನ ಮೂರನೇ ಸುತ್ತನ್ನು ತಲುಪಿದ ಸಾಧನೆ ಮಾಡಿದ್ದಾರೆ. 36 ವರ್ಷದ ಸಾನಿಯಾ ಮಿರ್ಜಾ ಮೊಣಕೈ ಗಾಯದಿಂದಾಗಿ ಕಳೆದ ವರ್ಷ ಟೆನಿಸ್​ ಲೋಕದಿಂದ ಹೊರಗುಳಿದಿದ್ದರು. ಇದೇ ಕಾರಣಕ್ಕೆ ಯುಎಸ್ ಓಪನ್ ನಿಂದ ದೂರ ಉಳಿದಿದ್ದಾರೆ. ಆಗಸ್ಟ್ 2022ರಲ್ಲಿ ಆಡಿದ ಪಂದ್ಯದ ನಂತರ ಅವರು ಟೆನಿಸ್ ಕ್ಷೇತ್ರಕ್ಕೆ ಮತ್ತೆ ಪ್ರವೇಶಿಸಿರಲಿಲ್ಲ.

ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಮಹಿಳೆ ಸಾನಿಯಾ. ಡಬಲ್ಸ್‌ನಲ್ಲಿ ವಿಶ್ವದ ಮೊದಲ ಶ್ರೇಯಾಂಕ ಪಡೆದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2005 ರಲ್ಲಿ WTA ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹಿರಿಮೆಯೂ ಇವರದಾಗಿದೆ. ಪದ್ಮಶ್ರೀ ಪ್ರಶಸ್ತಿ, ಅರ್ಜುನ ಪ್ರಶಸ್ತಿ ಮತ್ತು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಸೇರಿದಂತೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾನಿಯಾ ಅನೇಕ ಗೌರವಗಳನ್ನು ಪಡೆದಿದ್ದಾರೆ.

Leave A Reply

Your email address will not be published.