ರಾಷ್ಟ್ರೀಯ ಯುವಜನೋತ್ಸವ ಪ್ರಯುಕ್ತ ಹುಬ್ಬಳ್ಳಿ-ಧಾರವಾಡ ವಿಶೇಷ ರೈಲು ವ್ಯವಸ್ಥೆ | ಹೀಗಿವೆ ರೈಲು ವೇಳಾಪಟ್ಟಿ!!
ವಿದ್ಯಾಕಾಶಿ ಧಾರವಾಡದಲ್ಲಿ ಜ. 12 ರಿಂದ ಆರಂಭವಾಗಿ ಐದು ದಿನಗಳ ಕಾಲ ರಾಷ್ಟ್ರೀಯ ಯುವಜನೋತ್ಸವ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿ, ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಿದ್ದಾರೆ. ಇದೀಗ ಯುವ ಉತ್ಸವಕ್ಕಾಗಿ ಧಾರವಾಡ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಹಾಗೇ ಹುಬ್ಬಳ್ಳಿ-ಧಾರವಾಡ ಮಧ್ಯೆ ವಿಶೇಷ ರೈಲು ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ನೈಋತ್ಯ ರೈಲ್ವೆ ನಿರ್ಧರಿಸಿದೆ.
ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವ ನಡೆಯಲಿದ್ದು, ಈ ಪ್ರಯುಕ್ತ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ-ಧಾರವಾಡ ನಿಲ್ದಾಣಗಳ ನಡುವೆ ಸೀಟುಗಳನ್ನು ಕಾಯ್ದಿರಿಸದ ವಿಶೇಷ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಈ ವ್ಯವಸ್ಥೆಯಿಂದ ನಗರದಲ್ಲಿ ಖಾಸಗಿ ವಾಹನಗಳ ಸಂಚಾರದ ದಟ್ಟಣೆಯ ಸಾಧ್ಯತೆ ಕಡಿಮೆ ಇರುತ್ತದೆ. ಇದರಿಂದ ಯುವಜನೋತ್ಸವಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಅನುಕೂಲಕರ ದರದಲ್ಲಿ ಪ್ರಯಾಣದ ಸೌಲಭ್ಯ ಲಭ್ಯವಾಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಈ ವಿಶೇಷ ರೈಲುಗಳು ಸ್ಲೀಪರ್ ಬೋಗಿಗಳು, ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್-ವ್ಯಾನ್ಗಳು/ಅಂಗವಿಕಲ ಸ್ನೇಹಿ ಒಳಗೊಂಡಂತೆ ಒಟ್ಟು 18 ಬೋಗಿಗಳನ್ನು ಹೊಂದಿರುತ್ತದೆ. ಎಸ್ ಎಸ್ ಎಸ್ ಹುಬ್ಬಳ್ಳಿ ಮತ್ತು ಧಾರವಾಡ ನಡುವೆ ಸಂಚರಿಸುವ ಈ ರೈಲುಗಳು ತಡೆ ರಹಿತವಾಗಿವೆ. ಇನ್ನೂ, ಈ ರೈಲಿನ ವೇಳಾಪಟ್ಟಿ ಈ ಕೆಳಗಿನಂತಿದೆ.
ರೈಲುಗಳ ವೇಳಾಪಟ್ಟಿ ಹೀಗಿವೆ –
ರೈಲು ಸಂಖ್ಯೆ – 07369/07370, ಧಾರವಾಡ – ಎಸ್ ಎಸ್ ಎಸ್ ಹುಬ್ಬಳ್ಳಿ – ಧಾರವಾಡ (ಒಂದು ಟ್ರಿಪ್)
ಜನವರಿ 11 ರಂದು ಧಾರವಾಡ – ಎಸ್ ಎಸ್ ಎಸ್ ಹುಬ್ಬಳ್ಳಿ (07369 ) ರೈಲು ಮಧ್ಯಾಹ್ನ 12:30ಕ್ಕೆ ಧಾರವಾಡದಿಂದ ಹೊರಟು ಅಂದೇ ಎಸ್ ಎಸ್ ಎಸ್ ಹುಬ್ಬಳ್ಳಿಗೆ ತಲುಪಲಿದೆ. ಮತ್ತೆ ಸಂಜೆ 4:30 ರ ಹೊತ್ತಿಗೆ ರೈಲು ಸಂಖ್ಯೆ (07370) ರೈಲು ಮರಳಿ ಧಾರವಾಡ ತಲುಪಲಿದೆ.
ರೈಲು ಸಂಖ್ಯೆ 07371/07372 ಧಾರವಾಡ – ಎಸ್ ಎಸ್ ಎಸ್ ಹುಬ್ಬಳ್ಳಿ – ಧಾರವಾಡ (ಒಂದು ಟ್ರಿಪ್)
ಹಾಗೇ ಜನವರಿ 12 ರಂದು ಧಾರವಾಡ – ಎಸ್ಎಸ್ಎಸ್ ಹುಬ್ಬಳ್ಳಿ (07371) ರೈಲು ಮಧ್ಯಾಹ್ನ ಸುಮಾರು 12 ಗಂಟೆಗೆ ಧಾರವಾಡದಿಂದ ಹೊರಟು ಎಸ್ಎಸ್ಎಸ್ ಹುಬ್ಬಳ್ಳಿ ತಲುಪಲಿದೆ. ಮರಳಿ ರೈಲು ಸಂಖ್ಯೆ 07372 ರೈಲು ಸಂಜೆ 06:30 ಕ್ಕೆ ಧಾರವಾಡ ತಲುಪಲಿದೆ.
ರೈಲು ಸಂಖ್ಯೆ 07373/07374 ಧಾರವಾಡ – ಎಸ್ಎಸ್ಎಸ್ ಹುಬ್ಬಳ್ಳಿ – ಧಾರವಾಡ (ಒಂದು ಟ್ರಿಪ್)
ಅದೇ ಜನವರಿ 12 ರಂದು ಧಾರವಾಡ – ಎಸ್ ಎಸ್ಎಸ್ ಹುಬ್ಬಳ್ಳಿ (07373) ವಿಶೇಷ ರೈಲು ಮಧ್ಯಾಹ್ನ ಸುಮಾರು 12:30 ಕ್ಕೆ ಧಾರವಾಡದಿಂದ ಹೊರಟು ಅಂದೇ ಹುಬ್ಬಳ್ಳಿಗೆ ತಲುಪಲಿದೆ. ಹಾಗೇ ರೈಲು ಸಂಖ್ಯೆ (07374) ವಿಶೇಷ ರೈಲು ಅಲ್ಲಿಂದ ಸಂಜೆ 7 ಗಂಟೆಗೆ ಮತ್ತೆ ಧಾರವಾಡ ತಲುಪಲಿದೆ.
ರೈಲು ಸಂಖ್ಯೆ 07375/07376 ಧಾರವಾಡ – ಎಸ್.ಎಸ್.ಎಸ್ ಹುಬ್ಬಳ್ಳಿ – ಧಾರವಾಡ (ಒಂದು ಟ್ರಿಪ್)
ಜನವರಿ 12 ರಂದು ಧಾರವಾಡ – ಎಸ್ ಎಸ್ ಎಸ್ ಹುಬ್ಬಳ್ಳಿ (07375) ರೈಲು ಮಧ್ಯಾಹ್ನ 1 ಗಂಟೆಗೆ ಧಾರವಾಡದಿಂದ – ಹುಬ್ಬಳ್ಳಿ ತಲುಪಲಿದೆ. ವಾಪಾಸ್ಸು (07376) ರೈಲು ಹುಬ್ಬಳ್ಳಿಯಿಂದ ಸಂಜೆ 7:30 ಗಂಟೆಗೆ ಧಾರವಾಡ ತಲುಪಲಿದೆ. ಇನ್ನೂ, ಈ ರೈಲು ಸೇವೆಗಳ ಸದುಪಯೋಗ ಪಡಿಸಿಕೊಳ್ಳಿ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ತಿಳಿಸಿದ್ದಾರೆ.