ಮಂಗಳೂರಿನ ಹೃದಯ ಭಾಗದಲ್ಲಿ ಹೆಜ್ಜೆ ಹಾಕಿದ ಕಾಡುಕೋಣ
ಮಂಗಳೂರು : ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬಂತೆ ಈಗ ಪ್ರಾಣಿಗಳಿಗೆ ಒಳ್ಳೆಯ ಕಾಲ. ಒಂದೆಡೆ ಕೊರೊನಾದಿಂದ ಕಂಗೆಟ್ಟ ಜನರು ಹೆದರಿ ಮನೆಯಲ್ಲಿಯೇ ಬಂಧಿಯಾಗಿದ್ದಾರೆ. ಇದರ ಅನುಕೂಲ ಪಡೆದ ಪ್ರಾಣಿಗಳು ಸಂತಸದಿಂದ ತಮ್ಮದೇ ಲೋಕದಲ್ಲಿ ವಿಹರಿಸುತ್ತಿವೆ. ಕೆಲ ಪ್ರಾಣಿ ಗಳು ಸೀದಾ ಪಟ್ಟಣಕ್ಕೆ ನುಗ್ಗಿ ಮನುಷ್ಯರು ಇದ್ದಾರಾ ಇಲ್ವಾ ಎಂಬ ರಿಯಾಲಿಟಿ ಚೆಕ್ ಗೆ ಇಳಿದಿವೆ.
ಇಂದು ಮಂಗಳೂರು ಮಹಾನಗರದಲ್ಲಿ ಕಾಡು ಕೋಣವೊಂದು ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದೆ. ಇಂದು ಬೆಳ್ಳಂಬೆಳಗ್ಗೆ ಇಲ್ಲಿನ ಹ್ಯಾಟ್ ಹಿಲ್ ಬಳಿ ಕಂಡ ಕಾಡುಕೋಣವು ನಂತರ ನಗರದ ರಥಬೀದಿಯಲ್ಲಿ ಕಾಣಿಸಿತು. ಇದಾದ ಬಳಿಕ ಗುಜರಾತಿ ಶಾಲೆಯ ಬಳಿ ಮಾರ್ಚ್ ಪಾಸ್ಟ್ ಮಾಡುತ್ತಿತ್ತು. ಲಾಲ್ ಭಾಗ್ ನ ಪಬ್ಬಾಸ್ ಪಕ್ಕ ಹೆಜ್ಜೆ ಹಾಕಿದೆ. ಏಕಾಏಕಿ ನಗರದ ಮಧ್ಯದಲ್ಲಿ ಕಾಡು ಕೋಣ ಕಂಡ ಸ್ಥಳೀಯರು ಗಾಬರಿಗೊಂಡು ಪೋಲಿಸ್ ಇಲಾಖೆಯ ಮೊರೆ ಹೋದರು. ಕಾಡುಕೋಣ ಕೂಡ ಗಿಡ ಮರ ಪೊದೆಗಳಿಲ್ಲದ ಪ್ರದೇಶವನ್ನು ಕಂಡು ಗಾಬರಿಗೊಂಡಿತ್ತು.
ಪೊಲೀಸರು ಅರಣ್ಯ ಇಲಾಖೆಯನ್ನು ತಕ್ಷಣ ಎಚ್ಚರಿಸಿದ್ದು ಇದೀಗ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಕಾಡು ಕೋಣ ಕಾರ್ಯಾಚರಣೆ ನಡೆಯುತ್ತಿದೆ. ಒಂಟಿ ಕಾಡು ಕೋಣ ಬಹು, ಕೆಲ ವರ್ಷಗಳ ಹಿಂದೆ ಬಜ್ಪೆ ವಿಮಾನ ನಿಲ್ದಾಣದ ಬಳಿ ಕಾಣ ಸಿಕ್ಕಿದ್ದವು. ಬಜ್ಪೆ, ಅದ್ಯಪಾಡಿ ವಿಮಾನ ನಿಲ್ದಾಣದ ಸುತ್ತ ಮುತ್ತಾ ಆನೇಕ ಕಾಡುಕೋಣಗಳಿವೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ದೂರದ ಕಾಡು ಪ್ರದೇಶದಿಂದ ಇಂತಹ ನಗರಕ್ಕೆ ಬಂದಿರುವುದು ಅಚ್ಚರಿ ಮತ್ತು ಆತಂಕ ಎರಡೂ ಉಂಟಾಗಿದೆ.
ಕಳೆದ 40 ದಿನಗಳಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನ – ವಾಹನಗಳ ಒಡಾಟವಿರದ ಕಾರಣ ಕಾಡು ಪ್ರಾಣಿಗಳು ಸಹಜವಾಗಿ ಭಯ ತೊರೆದು ನಾಡಿಗೆ ಇಳಿಯುತ್ತಿವೆ.