ಎಂ ಜಿ ರೋಡ್ ನ ‘ ಟಾನಿಕ್ ‘ ಮದ್ಯದಂಗಡಿ ಮುಂದೆ ತಲೆ ತಿರುಗಿ ಬಿದ್ದಳಾ ತರುಣಿ
ಬೆಂಗಳೂರು : ರಾಜ್ಯದ ಬಹುತೇಕ ಜಿಲ್ಲೆಯ ಬಾರ್‌ಗಳ ಮುಂದೆ ಜನ ಕ್ಯೂ ನಿಂತು ಮದ್ಯ ಖರೀದಿಗೆ ಮುಂದಾಗಿರುವುದು, ಮಹಿಳೆಯರು ಕೂಡ ಕ್ಯೂ ನಲ್ಲಿ ನಿಲ್ಲುವುದು, ಕುಡಿದವರು ಕೆಲವು ಜನ ತೂರಾಡುವುದು, ಒಬ್ಬಾತ ಮಟ ಮಟ ಮದ್ಯಾಹ್ನ ರಸ್ತೆ ಮಧ್ಯದಲ್ಲಿ ಫುಲ್ ಫ್ಲಾಟ್ ಆಗಿದ್ದಾನೆ !
ಇನ್ನು ಕೆಲವು ದಿನ ಮದ್ಯದ ಬಣ್ಣದಷ್ಟೇ ಬಣ್ಣ ಬಣ್ಣದ ಕಥೆಗಳು ಹುಟ್ಟಿಕೊಳ್ಳಲಿವೆ. ನಾವು ಕೂಡ ಉತ್ಸಾಹದಿಂದ ಕಥೆಗಳನ್ನು ನಿಮ್ಮ ಮುಂದೆ ತಂದು ಬಿಚ್ಚಿಡಲಿದ್ದೇವೆ. ಆ ಕಥೆಗೆ ಮತ್ತೊಂದಷ್ಟು ಬಣ್ಣದ ಮಾತುಗಳನ್ನು ಪೋಣಿಸಿ ನಿಮಗೆ ಕೊಡಲಿದ್ದೇವೆ.
ಇವತ್ತು ಬೆಂಗಳೂರಿನಲ್ಲಿಯೂ ಜನ ಮದ್ಯದ ಅಂಗಡಿಗಳ ಮುಂದೆ ಸಾಲಿನಲ್ಲಿ ನಿಂತಿದ್ದರು. ಆಗ ಎಂ ಜಿ ರೋಡ್‌ನಲ್ಲಿರುವ ಬಾರ್‌ವೊಂದರ ಮುಂದೆ ಯುವತಿಯೊಬ್ಬಳು ತಲೆತಿರುಗಿ ಬಿದ್ದಿದ್ದಾಳೆ. ಎಂ ಜಿ ರೋಡ್ ನ ‘ ಟಾನಿಕ್ ‘ ಎಂಬ ವೈನ್ ಶಾಪ್ ಮುಂದೆ ಈ ಘಟನೆ ನಡೆದಿದೆ.
ಸುತ್ತಮುತ್ತ ಇದ್ದವರು ಈ ಯುವತಿ ಬೆಳಿಗ್ಗೆನೇ ಕುಡಿದು ಬಿದ್ದಿದ್ದಾಳೆ ಎಂದು ಒಂದು ಕ್ಷಣ ಅಂದುಕೊಂಡರು. ನಂತರ ತಿಳಿಯಿತು: ಆಕೆ ತಿಂಡಿ ಕೂಡಾ ಮಾಡದೆ ಕ್ಯೂ ನಲ್ಲಿ ನಿಲ್ಲಲು ತನ್ನ ಗೆಳತಿಯ ಜತೆ ಬಂದಿದ್ದಾಳೆ. ಆದ್ದರಿಂದ ತಲೆ ತಿರುಗಿದೆ. ಒಂದಷ್ಟು ನೀರು ಕುಡಿಸಿ ಸಂತೈಸಿದ ನಂತರ ಆಕೆ ಟಾನಿಕ್ ಎತ್ತಿಕೊಂಡು ನಡೆದಿದ್ದಾಳೆ.