ಲಾಕ್ಡೌನ್ ನಿಯಮ ಉಲ್ಲಂಘನೆ | ಪುತ್ತೂರಿನ ಐವರ ವಿರುದ್ಧ ಪ್ರಕರಣ ದಾಖಲು
ಪುತ್ತೂರು: ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ಸಂಬಂಧ ಭಾರತ ದೇಶದಾದ್ಯಂತ ಲಾಕ್ ಡೌನ್ ಅದೇಶ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿದ ವಿಚಾರಕ್ಕೆ ಸಂಬಂಧಿಸಿ ಬನ್ನೂರಿನ 5 ಮಂದಿ ವಿರುದ್ಧ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬನ್ನೂರು ಕರ್ಮಲ ನಿವಾಸಿ ಅಬ್ಬಾಸ್ ಅಬ್ದುಲ್ಲಾ ಅವರ ಪುತ್ರ ಸೈಫುದ್ದೀನ್(30ವ), ಬನ್ನೂರು ಜೈನರಗುರಿ ದಿ.ಅಬ್ದುಲ್ ಕರೀಂ ಅವರ ಪುತ್ರ ಮೊಹಮ್ಮದ್ ಅತ್ತಾವುಲ್ಲಾ(26ವ), ಕರ್ಮಲ ನಿವಾಸಿ ಮೋಹನ್ ಅವರ ಪುತ್ರ ನಂದಕುಮಾರ್(20ವ), ಕರ್ಮಲ ನಿವಾಸಿ ಮೋಹನ್(53ವ), ಬನ್ನೂರು ಕರ್ಮಲ ಕುಮೇರಡ್ಕ ನಿವಾಸಿ ಗಣೇಶ್ ಅವರ ಪುತ್ರ ಧನಂಜಯ(23ವ) ಅವರ ವಿರುದ್ಧ ಲಾಕ್ಡೌನ್ ನಿಯಮ ಉಲ್ಲಂಘನೆ ಕುರಿತು ಪ್ರಕರಣ ದಾಖಲು ಮಾಡಲಾಗಿದೆ.
ಮಾ.22 ರಿಂದ ಲಾಕ್ಡೌನ್ ಜಾರಿಯಲ್ಲಿದ್ದು, ಸದ್ರಿ ಆದೇಶದಂತೆ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿಯೇ ಇದ್ದುಕೊಂಡು ಸಾಮಾಜಿಕ ಅಂತರವನ್ನು ಪಾಲಿಸಿಕೊಂಡು ಸೋಂಕು ಹರಡುವುದನ್ನು ತಡೆಗಟ್ಟಬೇಕು ಎಂಬ ಬಗ್ಗೆ ಕರ್ನಾಟಕ ರಾಜ್ಯ ಸರಕಾರ ಮತ್ತು ದ.ಕ. ಜಿಲ್ಲಾಡಳಿತದ ಮಾರ್ಗಸೂಚಿ ನಿಯಮಗಳಿದ್ದರೂ, ಪುತ್ತೂರು ನಗರ ಪೊಲೀಸ್ ಠಾಣಾ ಸರಹದ್ದಿನ ಪುತ್ತೂರು ಕಸಬಾ ಗ್ರಾಮದ ಕರ್ಮಲ ಪರಿಸರದ ಏ.19ರಂದು ರಾತ್ರಿ ಸುಮಾರು 7 ಗಂಟೆಗೆ ಕರ್ಮಲ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗುಂಪು ಸೇರಿ ಪರಸ್ಪರ ಗಲಾಟೆ ಮಾಡಿಕೊಂಡಿದ್ದು, ದೇಶಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ನಿಯಮವನ್ನು ಉಲ್ಲಂಘನೆ ಮಾಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕು ಹರಡುವ ಸಂಭವವಿರುವ ಸಾಧ್ಯತೆಯ ಬಗ್ಗೆ ತಿಳಿದಿದ್ದರೂ 5 ಮಂದಿ ಮನೆಯಿಂದ ಹೊರಬಂದು ಸಾರ್ವಜನಿಕ ಸ್ಥಳದಲ್ಲಿ ಗುಂಪು ಸೇರಿಕೊಂಡು ಲಾಕ್ ಡೌನ್ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.
ಈ ನಿಟ್ಟಿನಲ್ಲಿ ಅವರ ವಿರುದ್ಧ ಸೆಕ್ಷನ್ 269 ಮತ್ತು 270 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.