21 ದಿನಗಳಿಂದ ಕಾರನ್ನೇ ಮನೆ ಮಾಡಿಕೊಂಡು ವಾಸಿಸುತ್ತಿರುವ ಪುತ್ತೂರಿನ ಯುವಕರು | ಗುಜ್ – ಮಹಾ ಗಡಿಯಲ್ಲಿ ಲಾಕ್ | ಪುತ್ತೂರಿನ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡದ ಯುವಕರು
ಲಾಕ್ ಡೌನ್ನಿಂದ ಗುಜರಾತ್ ಮಹಾರಾಷ್ಟ್ರ ಗಡಿಯಲ್ಲಿ ಪುತ್ತೂರು ಮೂಲದ ಇಬ್ಬರು ವ್ಯಕ್ತಿಗಳು ಕಳೆದ 21 ದಿನಗಳಿಂದ ಕಾರ್ನಲ್ಲೇ ವಾಸಿಸುತ್ತಿದ್ದಾರೆ.
ಪುತ್ತೂರು ತಾಲೂಕು ಸಾಮೆತ್ತಡ್ಕದ ಆಶಿಕ್ ಹುಸೈನ್ ಹಾಗೂ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಮೊಹಮ್ಮದ್ ತಾಕೀನ್ ಮರೀಲ್ ಅವರೇ ಈ ಇಬ್ಬರು ಯುವಕರು. ಇವರು ಲಾಕ್ಡೌನ್ನಿಂದ ಗುಜರಾತ್ -ಮಹಾರಾಷ್ಟ್ರ ಗಡಿಯ ವಲ್ಸಾಡ್ ಜಿಲ್ಲೆಯ ಬಿಲಾಡ್ ತಾಲೂಕಿನ ಅಂಬೆರ್ಗಾನ್ ಆರ್ಟಿಒ ಚೆಕ್ ಪೋಸ್ಟ್ನಲ್ಲಿ ಲಾಕ್ ಆಗಿದ್ದರು.
ಆಶಿಕ್ ಹುಸೈನ್ ಅವರು ಅಡಕೆ ವ್ಯಾಪಾರದ ಉದ್ದೇಶದಿಂದ ಗುಜರಾತ್ ನ ರಾಜ್ ಕೋಟಲ್ಲಿ ಹೊಸ ಅಂಗಡಿ ತೆರೆಯುವ ಸಲುವಾಗಿ ಕಳೆದ ತಿಂಗಳ ಹಿಂದೆ ಸ್ನೇಹಿತನ ಜೊತೆ ತೆರಳಿದ್ದರು. ಆದರೆ ಇದೇ ಸಂದರ್ಭ ಕೊರೋನಾ ವೈರಸ್ ನ ಅಟ್ಟಹಾಸ ತಲೆದೋರಿದ್ದು ಭಾರತದಾದ್ಯಂತ ಜನತಾ ಕರ್ಫ್ಯೂ ವಿಧಿಸಲಾಯಿತು. ಕರ್ಫ್ಯೂ ನಂತರ ಅವರಿಬ್ಬರು ತರಾತುರಿಯಲ್ಲಿ ಅಲ್ಲಿಂದ ಊರಿಗೆ ಹೊರಟಿದ್ದಾರೆ.
ಗುಜರಾತ್-ಮಹಾರಾಷ್ಟ್ರ ಗಡಿ ಪ್ರದೇಶವಾದ ಗುಜರಾತಿನ ವಾಲ್ಸಾಡ್ ಜಿಲ್ಲೆಯ ಅಂಬರ್’ಗಾವ್ ಭಿಲಾಡ್ ತಾಲೂಕಿನ ಆರ್.ಟಿ.ಓ. ಚೆಕ್ ಪೋಸ್ಟ್ ಬಳಿ ಬರುವಷ್ಟರಲ್ಲಿ ನರೇಂದ್ರ ಮೋದಿಯವರು ಮೈಕನ್ನು ಎತ್ತಿಕೊಂಡು ‘ದೇಶವಾಸಿಯೋ’ ಅಂತ ಶುರುಮಾಡಿ 21 ದಿನಗಳ ಲಾಕ್ ಡೌನ್ ಘೋಷಿಸಿಬಿಟ್ಟಿದ್ದರು.
ಈ ಯುವಕರು ಪುನಃ ರಾಜ್ ಕೋಟಿಗೆ ಹೋಗಲಾರದೇ ಇತ್ತ ಸ್ವಂತ ಊರು ಪುತ್ತೂರಿಗೂ ಬರಲಾರದೇ ಕಳೆದ 21 ದಿವಸದಲ್ಲಿ ದಾರಿ ಬದಿ ಗಾಡಿ ನಿಲ್ಲಿಸಿ ತ್ರಿಶಂಕು ಸ್ಥಿತಿಯಲ್ಲಿ ಬದುಕಬೇಕಾದ ನಿರ್ಮಾಣ ಆಗಿದೆ.
ಅಲ್ಲಿಂದ ಇಲ್ಲಿಯ ತನಕ ಕಾರಿನಲ್ಲೇ ವಾಸ ಮಾಡುತ್ತಿರುವ ಇಬ್ಬರು ಯುವಕರು ಊರಿಗೆ ಬರಲಾರದೆ ಪರದಾಟ ನಡೆಸುತ್ತಿದ್ದಾರೆ. ಸ್ನಾನ ಶೌಚಕ್ಕೆ ತಾವಿರುವ ಅಂಬರ್ ಹೋಟೆಲನ್ನು ಅವಲಂಬಿಸಿರುವ ಯುವಕರು ಆ ರೆಸ್ಟೋರೆಂಟಲ್ಲಿ ಸ್ಥಳ ಇಲ್ಲದ ಕಾರಣ ಕಾರಿನಲ್ಲೇ ಮಲಗುವ ಪರಿಸ್ಥಿತಿ ಎದುರಾಗಿದೆ.
ಈ ಇಬ್ಬರು ಅಲ್ಲಿ ಸಿಲುಕಿರುವ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಬಂದಿತ್ತು. ಈ ಹಿನ್ನೆಲೆಯಲ್ಲಿ ವಲ್ಸಾಡ್ನ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ದ.ಕ. ಜಿಲ್ಲಾಧಿಕಾರಿ, ಕಾರ್ನಲ್ಲೇ ಕಳೆದ 21 ದಿನಗಳಿಂದ ವಾಸಿಸುತ್ತಿರುವ ಇಬ್ಬರಿಗೂ ಆಹಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸುವಂತೆ ವಿನಂತಿಸಿದ್ದಾರೆ. ಯುವಕರು ರಶೀದ್ ವಿಟ್ಲ ಅವರ ಹೆಸರನ್ನು ಉಲ್ಲೇಖಿಸಿ ಸಹಾಯ ಕೋರಿದ್ದರು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಯುವಕರು ಪುತ್ತೂರು ತಾಲೂಕಿನವರಾಗಿದ್ದು, ಅವರಾಗಲಿ ಅವರ ಕುಟುಂಬಸ್ಥರಾಗಲಿ ಪುತ್ತೂರಿನ ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಸಂಪರ್ಕಿಸಿಲ್ಲ. ಅವರು ಪುತ್ತೂರಿನ ಶಾಸಕರನ್ನಾಗಲಿ ಅಥವಾ ಪುತ್ತೂರು ವಾರ್ ರೂಂ ಅನ್ನು ಸಂಪರ್ಕಿಸಿಲ್ಲ. ಈ ಬಗ್ಗೆ ವಾರ್ ರೂಂ ಅನ್ನು ಕೇಳಿದಾಗ ನಮಗೆ ಈವರೆಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.
ಹಾಗೆ ಮಾಹಿತಿ ನೀಡದ ಕಾರಣ ಅವರಿನ್ನೂ ಹಾಗೆ ರಸ್ತೆ ಬದಿಯಲ್ಲಿ ಕಾರಿನಲ್ಲಿ ಬದುಕುತ್ತಿದ್ದಾರೆ. ಯಾವ ಸಹಾಯವೂ ಅವರಿಗೆ ಇಲ್ಲಿಯತನಕ ಸಿಕ್ಕಿಲ್ಲ.
Comments are closed.