ಲಾಕ್ ಡೌನ್ ಪ್ರಯುಕ್ತ ಪೊಲೀಸರು ತಡೆದರು | ಎಎಸ್ ಐ ಕೈಯನ್ನು ಕತ್ತರಿಸಿ ಹಾಕಿದೆ ದುಷ್ಕರ್ಮಿಗಳ ಗುಂಪು
- ಚೈತ್ರ ಲಕ್ಷ್ಮಿ, ಬಾಯಾರು
ಚಂಡೀಗಢ : ಲಾಕ್ ಡೌನ್ ನ ಸಂದರ್ಭ ಎಎಸ್ ಐ ಕೈಯನ್ನು ಕತ್ತರಿಸಿ ಮತ್ತಿಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ದುಷ್ಕರ್ಮಿಗಳ ಗುಂಪು ಹಲ್ಲೆ ಮಾಡಿ ಅಟ್ಟಹಾಸ ಮಾಡಿದ್ದಾರೆ.
ಪಂಜಾಬ್ ನ ಪಟಿಯಾಲಾದಲ್ಲಿ ಭಾನುವಾರ ನಸುಕಿನ ಜಾವ ಶಸ್ತಾಸ್ತ್ರಗಳೊಂದಿಗೆ ನಿಹಂಗರು ಎಂದು ಕರೆಯಲ್ಪಡುವ ನಾಲ್ಕೈದು ಮಂದಿ ಸಿಖ್ ಧರ್ಮೀಯರು ವಾಹನವೊಂದರಲ್ಲಿ ಪ್ರಯಾಣ ಮಾಡುತ್ತಿದ್ದರು. ಅವರನ್ನು ಪಟಿಯಾಲಾದ ತರಕಾರಿ ಮಾರುಕಟ್ಟೆ ಬಳಿ ಪೊಲೀಸರು ತಡೆದರು. ಯಥಾಪ್ರಕಾರ ಎಲ್ಲರನ್ನೂ ಕೇಳುವಂತೆ ಪಾಸ್ ತೋರಿಸಿ ಎಂದು ಪೊಲೀಸರು ಕೇಳಿದಾಗ ಸಿಟ್ಟುಗೊಂಡ ಆ ತಂಡ ತಮ್ಮ ವಾಹನವನ್ನು ತರಕಾರಿ ಗೇಟಿಗೆ ನುಗ್ಗಿಸಿ ಒಡೆದು ಬ್ಯಾರಿಕೇಡ್ ಮುರಿದು ಹಾಕಿದರು. ಆ ನಂತರ ಹೋಗಿ ಕರ್ತವ್ಯದಲ್ಲಿದ್ದ ಸಹಾಯಕ ಸಬ್ ಇನ್ಸ್ ಪೆಕ್ಟರ್ ಒಬ್ಬರ ಕೈಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕತ್ತರಿಸಿ ಹಾಕಿದರು.
ಮತ್ತೊಬ್ಬ ಪಟಿಯಾಲಾ ಸ್ಟೇಷನ್ ಹೌಸ್ ಅಧಿಕಾರಿಯ ತೋಳುಗಳಿಗೆ ಗಾಯವಾಗಿದೆ. ಇನ್ನೊಬ್ಬ ಪೊಲೀಸ್ ನ ಕೈಗಳಿಗೆ ದಾಳಿ ಮಾಡಲಾಗಿದೆ ಎಂದು ಪಟಿಯಾಲಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ ಮಂದೀಪ್ ಸಿಂಗ್ ಸಿಧು ತಿಳಿಸಿದ್ದಾರೆ.