ಗಗನದ ಮೇಲೆ ನಿಂತಿದೆ ದಿನಸಿ |ಜನಸಾಮಾನ್ಯರಿಗೆ ತಟ್ಟಿದೆ ಬೆಲೆಯೇರಿಕೆಯ ಬಿಸಿ | 20 -30 % Extra !
ದಕ್ಷಿಣ ಕನ್ನಡ, ಮಾ. 29 : ಲಾಕ್ ಡೌನ್ ನ ಬಿಸಿ ನಿಧಾನವಾಗಿ ಜನಸಾಮಾನ್ಯರಿಗೆ ತಟ್ಟಲು ಆರಂಭವಾಗಿದೆ. ದೈನಂದಿನ ಮನೆಯ ಅಗತ್ಯ ಸಾಮಾನುಗಳಾದ ದಿನಸಿ, ತರಕಾರಿಗಳು, ಹಣ್ಣುಗಳು ಮುಂತಾದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈಗಾಗಲೇ ತರಕಾರಿಗಳ ಬೆಲೆಯಲ್ಲಿ 20 ರಿಂದ 40 ಪರ್ಸೆಂಟ್ ಏರಿಕೆಯಾಗಿದ್ದು ಈ ಬೆಲೆ ಏರಿಕೆ ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಕಾರಣದಿಂದಲಾ ಅಥವಾ ತರಕಾರಿ ಅಂಗಡಿಯವರು ಏಕಾಏಕಿ ಬೆಲೆ ಏರಿಸುತ್ತಿದ್ದಾರೆಯೆ ಎಂಬುದು ಇನ್ನೂ ಸ್ಪಷ್ಟವಿಲ್ಲ. ಬಹುಶ: ಎರಡೂ ಕಾರಣ ಇರಬಹುದು. ಈಗ ತರಕಾರಿ ಬೆಳೆದ ರೈತರಿಗೂ ಅದನ್ನು ಸುಲಭದಲ್ಲಿ ಪೇಟೆಗೆ ಹಾಕಲಾಗುತ್ತಿಲ್ಲ.
ದಿನಸಿ ಸಾಮಾನುಗಳ ಬೆಲೆಯಲ್ಲಿ ಹತ್ತರಿಂದ ಹದಿನೈದು ಪರ್ಸೆಂಟ್ ಏರಿಕೆಯಾಗಿದೆ. ಪ್ರಾಥಮಿಕ ಅಗತ್ಯವಾದ ಅಕ್ಕಿಯ ಬೆಲೆಯನ್ನೂ ಏರಿಕೆ ಮಾಡಿ ವ್ಯಾಪಾರಸ್ಥರು ಮಾರುತ್ತಿದ್ದಾರೆ. ಕೋರೋನಾ ವೈರಸ್ ನಿಂದ ಲಾಭವನ್ನು ಈ ವ್ಯಾಪಾರಸ್ಥರು ಮಾಡಿಕೊಳ್ಳುತ್ತಿದ್ದಾರೆ. ಪೇಟೆಯಲ್ಲಿ ಲಾಕ್ಡೌನ್ ಕರ್ಫ್ಯೂ ಜಾರಿಯಲ್ಲಿರುವುದರಿಂದ, ಜನರು ಒಂದು ಅಂಗಡಿಯಲ್ಲಿ ಜಾಸ್ತಿ ಬೆಲೆ ಇದ್ದರೆ ಮತ್ತೊಂದು ಅಂಗಡಿಗೆ ಈ ಹಿಂದೆ ಹೋಗುತ್ತಿದ್ದರು. ಆದರೆ ಬಂದ್ ನ ಕಾರಣದಿಂದ ಮತ್ತು ಕೊರೋನಾ ಹರಡುವ ಭಯದಿಂದ ಈಗ ಅಂಗಡಿ ಅಂಗಡಿ ಸುತ್ತಲು ಆಗುತ್ತಿಲ್ಲ. ಪೇಟೆಗೆ ಅರ್ಧಗಂಟೆಯಲ್ಲಿ ಹೋಗಿಬರಬೇಕೆಂದು ಹೊರಡುವ ಜನರು ತರಾತುರಿಯಲ್ಲಿ ಅಂಗಡಿಯವರು ಹೇಳಿದ ಬೆಲೆಗೆ ಸಾಮಾನು ಖರೀದಿಸಿ ಬರುತ್ತಿದ್ದಾರೆ. ಪ್ಯಾಕೆಟ್ ರಿಫೈನ್ಡ್ ಎಣ್ಣೆಯ ಬೆಲೆ ಲೀಟರಿಗೆ 95 ಇತ್ತು. ಈಗ ಕೆಲವೆಡೆ 105 ರುಪಾಯಿಗೆ ಮಾರುತ್ತಿದ್ದಾರೆ. 120 ರೂಪಾಯಿಗೂ ಮಾರಿದ ಸುದ್ದಿಯೂ ಬಂದಿದೆ.
ಇನ್ನೊಂದೆಡೆ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಬರುವ ದ.ಕ, ಉಡುಪಿ ಜಿಲ್ಲೆಗಳ ಹಾಲಿನ ಡಿಪೋಗಳಲ್ಲಿ ಹಾಲು ಖರೀದಿಯನ್ನು ನಿಲ್ಲಿಸಲಾಗಿದೆ. ಇದರಿಂದ ಹಾಲು ಉತ್ಪಾದಿಸುವ ರೈತರ ಹಾಲಿಗೆ ಗ್ರಾಹಕರಿಲ್ಲದೇ ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗುತ್ತಿದೆ. ಬೆಳಬೆಳಿಗ್ಗೆ ಎದ್ದು ಹಾಲು ಕರೆದು ಡಿಪೋಗೆ ಹಾಕಿದರೆ, ಒಂದಷ್ಟು ದುಡ್ಡು ರೈತರ ಅಕೌಂಟಿಗೆ ಬರುತ್ತಿತ್ತು. ಈಗ ಆ ದುಡ್ಡು ಕೂಡ ಸಿಗಲ್ಲ. ಜತೆಗೆ ದಿನನಿತ್ಯದ ಸಾಮಾನುಗಳ ಬೆಲೆಗಳು ಅಂತರಿಕ್ಷದಲ್ಲಿವೆ.
ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಪುತ್ತೂರು, ಉಪ್ಪಿನಂಗಡಿ, ಕಡಬ, ಸುಳ್ಯ, ಸುಬ್ರಹ್ಮಣ್ಯ, ಮಡಂತ್ಯಾರು, ಪುಂಜಾಲಕಟ್ಟೆ, ಬಿ ಸಿ. ರೋಡು, ಮಂಗಳೂರು, ಉಡುಪಿ, ಮಣಿಪಾಲ ಮುಂತಾದ ಕಡೆಗಳಿಂದ ಗ್ರಾಹಕರಿಂದ ದೂರು ಬಂದಿದ್ದು, ಇನ್ನೆಷ್ಟೋ ಸಣ್ಣ ಪುಟ್ಟ ಪೇಟೆಗಳಲ್ಲೂ ಸನ್ನಿವೇಶ ಭಿನ್ನವಾಗಿಲ್ಲ. ಇದ್ದುದರಲ್ಲಿ ಸಣ್ಣ ಗ್ರಾಮಗಳಲ್ಲೇ ವಾಸಿ. ಜನರು ಬೆಲೆ ಹೆಚ್ಚಿದ್ದರೆ ಪ್ರಶ್ನಿಸುತ್ತಿದ್ದಾರೆ. ಪೇಟೆಗಳಲ್ಲಿ ಅಂಗಡಿಯವರು ಹೇಳಿದ್ದೆ ರೇಟು. ಈ ಬಗ್ಗೆ ಸರಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ.