Kolkata: ನಿರ್ಮಾಣ ಹಂತದ ಕಟ್ಟಡ ಕುಸಿತ : 10 ಜನರ ರಕ್ಷಣೆ : ಒಳಗೆ ಸಿಲುಕಿರುವವರಿಗಾಗಿ ಹುಡುಕಾಟ
ಕೋಲ್ಕತ್ತಾದ ಗಾರ್ಡನ್ ರೀಚ್ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಐದು ಅಂತಸ್ತಿನ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿದಿದೆ, ಈ ವಿಷಯ ತಿಳಿದ ತಕ್ಷಣ ಪೊಲೀಸರು ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿ 10 ಜನರನ್ನು ರಕ್ಷಣೆ ಮಾಡಿದ್ದಾರೆ. ಇನ್ನು ಯಾರಾದರೂ ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಸಾಧ್ಯತೆ ಇದ್ದು ಶೋಧ ಮುಂದುವರಿದಿದೆ .
ಮಧ್ಯರಾತ್ರಿಯ ನಂತರ ಈ ಘಟನೆ ಸಂಭವಿಸಿದ್ದು, ಆರಂಭದಲ್ಲಿ , ನಿರ್ಮಾಣ ಹಂತದಲ್ಲಿರುವ ಕಟ್ಟಡದಿಂದ ಕಾಂಕ್ರೀಟ್ ತುಂಡುಗಳು ಬೀಳಲು ಪ್ರಾರಂಭಿಸಿದವು ಎಂದು ಸ್ಥಳೀಯರು ಹೇಳಿದ್ದಾರೆ. ನಂತರ, ಇಡೀ ಕಟ್ಟಡವು ಕುಸಿದು ಅದರ ಕೆಲವು ಭಾಗಗಳು ಜನನಿಬಿಡ ಪ್ರದೇಶದ ನೆರೆಹೊರೆಯ ನಿವಾಸಗಳ ಮೇಲೆ ಬಿದ್ದಿವೆ.
ಇದನ್ನೂ ಓದಿ: Deadly Accident: ಬೆಳ್ಳಂಬೆಳಗ್ಗೆ ಭೀಕರ ಅಪಘಾತ; ಟ್ರ್ಯಾಕ್ಟರ್- ಕಾರು ಡಿಕ್ಕಿ- 7 ಮಂದಿ ಸ್ಥಳದಲ್ಲೇ ಸಾವು
ಕೋಲ್ಕತ್ತಾ ಪೊಲೀಸ್ ಆಯುಕ್ತ ವಿನೀತ್ ಗೋಯಲ್ ಮತ್ತು ಹಿರಿಯ ಅಧಿಕಾರಿಗಳು , ವಿಪತ್ತು ನಿರ್ವಹಣಾ ತಂಡಗಳು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕಾರ್ಯಚರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Karnataka Weather: ಕರ್ನಾಟಕದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ
“ಅವಶೇಷಗಳಡಿಯಲ್ಲಿ ಸಿಲುಕಿದ್ದ ಕೆಲವರನ್ನು ನಾವು ರಕ್ಷಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ . ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಮತ್ತು ಅವಶೇಷಗಳಲ್ಲಿ ಸಿಲುಕಿರುವವರನ್ನು ನಾವು ಹುಡುಕುತ್ತಿದ್ದೇವೆ. ಇಲ್ಲಿಯವರೆಗೆ , ಸಾವಿನ ಬಗ್ಗೆ ಯಾವುದೇ ವರದಿಗಳಿಲ್ಲ. ಇದು ಜನನಿಬಿಡ ಪ್ರದೇಶವಾಗಿದ್ದ , ಈ ಪ್ರದೇಶದಲ್ಲಿ ಶೋಧ ನಡೆಸುವಾಗ ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ .
ಸ್ಥಳೀಯರ ಪ್ರಕಾರ , ಈ ಕಟ್ಟಡವು ಕಳೆದ ಆರು ತಿಂಗಳಿನಿಂದ ನಿರ್ಮಾಣ ಹಂತದಲ್ಲಿತ್ತು, ಕಟ್ಟಡ ನಿರ್ಮಾಣಕ್ಕೆ ಕೋಲ್ಕತ್ತಾ ಮಹಾನಗರ ಪಾಲಿಕೆ ಮತ್ತು ಪೊಲೀಸರಿಂದ ಅನುಮತಿ ಪಡೆದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.