Bengaluru: ಕರ್ತವ್ಯ ಮುಗಿಸಿ ಮನೆಗೆ ಹೋಗುವ ದಾರಿಯಲ್ಲಿ ಕೇಳಿತು ಆಕ್ರಂದನ; ಸಂಪಿಗೆ ಬಿದ್ದ ಮಗುವನ್ನು ರಕ್ಷಣೆ ಮಾಡಿದ ಎಸ್‌ಐ
Bengaluru: ಪೊಲೀಸರ ಮೇಲೆ ಹಲವು ಮಂದಿಗೆ ನಕಾರಾತ್ಮಕ ಭಾವನೆಯೇ ಹೆಚ್ಚು. ಆದರೆ ಎಲ್ಲಾ ಪೊಲೀಸರು ಈ ರೀತಿ ಇರುವುದಿಲ್ಲ, ಜನಸ್ನೇಹಿಗಳು ಕೂಡಾ ಆಗಿರುತ್ತಾರೆ. ಇದಕ್ಕೊಂದು ತಾಜಾ ಉದಾಹರಣೆಯೇ ಈ ಘಟನೆ. 10ಅಡಿ ಆಳದ ನೀರಿನ ಸಂಪಿನಲ್ಲಿ ಬಿದ್ದಿದ್ದ 2 ವರ್ಷ, 6 ತಿಂಗಳ ಮಗುವನ್ನು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಒಬ್ಬರು ರಕ್ಷಣೆ ಮಾಡಿರುವ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ.
ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ನಾಗರಾಜ್ ಅವರೇ ಮಗುವಿನ ರಕ್ಷಣೆ ಮಾಡಿದವರು. ಬಿಇಎಲ್ ಬಡಾವಣೆಯ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಕಾಲು ಜಾರಿ ಸಂಪಿನೊಳಗೆ ಬಿದ್ದು, ಪ್ರಜ್ಞೆ ತಪ್ಪಿದೆ. ಇದನ್ನು ನೋಡಿದ ಮನೆಯವರು ದಿಕ್ಕುತೋಚದೆ ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ತನ್ನ ಕರ್ತವ್ಯ ಮುಗಿಸಿ ಅದೇ ದಾರಿಯಲ್ಲಿ ಮನೆಗೆ ಹೋಗುತ್ತಿದ್ದ ಎಸ್‌ಐ ನಾಗರಾಜು ಅವರು ಮನೆಯವರು ಕೂಗುವುದನ್ನು ಕಂಡು, ತಕ್ಷಣ ಸ್ಥಳಕ್ಕೆ ಬಂದು, ಮನೆಯವರಿಗೆ ಧೈರ್ಯ ಹೇಳಿ, ಟ್ರಾಫಿಕ್ ಸಮವಸ್ತ್ರದಲ್ಲೇ ಸಂಪಿನ ಒಳಗೆ ಜಿಗಿದು ಮಗುವನ್ನು ಸುರಕ್ಷಿತವಾಗಿ ಹೊರಗೆ ತಂದರು.
ಮಗು ಆ ಸಮಯದಲ್ಲಿ ಪ್ರಜ್ಞೆ ತಪ್ಪಿತ್ತು. ದೇಹದೊಳಗೆ ನೀರು ಹೋಗಿರಬಹುದೆಂದು, ಕೂಡಲೇ ಶಾಸ್ವಕೋಶ ಪ್ರಚೋದರ ಸಿಪಿಆರ್ ನೀಡಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದರಿ. ಸೂಕ್ತ ಸಮಯದಲ್ಲಿ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಮಗು ಬದುಕುಳಿದಿದೆ. ಈ ಘಟನೆಯ ನಂತರ ಎಸ್‌ಐ ನಾಗರಾಜು ಅವರಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ವಿಜಯನಗರ ಕಾಂಗ್ರೆಸ್ ಶಾಸಕ ಎಂ.ಕೃಷ್ಣಪ್ಪ ಆಯುಕ್ತ ದಯಾನಂದ್ ಸೇರಿ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.