Puttur: ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬ್ರಹ್ಮಕಲಶೋತ್ಸವ ತ್ಯಾಗ,ಸೇವೆಗೆ ಭಗವಂತನ ಅನುಗ್ರಹ- ಮಾಣಿಲ ಶ್ರೀ
ಪುತ್ತೂರು : ಧಾರ್ಮಿಕತೆಯಲ್ಲಿ ವಿಶ್ವಕ್ಕೆ ಗುರುವಾಗಿರುವ ಭಾರತ ಧರ್ಮಚಾವಡಿಯಾಗಿದೆ. ಧಾರ್ಮಿಕತೆ ಆರ್ಥಪೂರ್ಣ ಬದುಕನ್ನು ಕಲಿಸುವುದರ ಜೊತೆಗೆ ಮಾನವೀಯ ಮೌಲ್ಯದ ಬೆಸುಗೆಯನ್ನು ಹೆಚ್ಚಿಸುತ್ತದೆ. ಜೀವನದ ಪ್ರತಿಯೊಂದು ಭಾಗದಲ್ಲೂ ತ್ಯಾಗ,ಸೇವೆಗೆ ಭಗವಂತನ ಅನುಗ್ರಹ ಲಭಿಸುತ್ತದೆ ಎಂದು ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಮಂಗಳವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಆರ್ಶೀವಚನ ನೀಡಿದರು.
ಶ್ರದ್ದಾ ಕೇಂದ್ರಗಳು ಜಾತಿಗಿಂತ ನೀತಿಗೆ ಹೆಚ್ಚಿನ ಒತ್ತು ನೀಡಬೇಕು. ದೇವಸ್ಥಾನದಲ್ಲಿ ಭಕ್ತರಿಗೆ ತನ್ಮತೆಯ ವಾತವರಣ ಸೃಷ್ಟಿಯಾದಾಗ ಸಾನಿಧ್ಯ ಹೆಚ್ಚಾಗುತ್ತದೆ. ಹಿಂದೂಗಳ ಮಂಗಳ ಕಾರ್ಯಗಳಲ್ಲಿ ಆಚರಣೆಯ ಮಹತ್ವ ಕಳೆದಕೊಳ್ಳುತ್ತಿದೆ. ಶಿಷ್ಟಾಚಾರ ಪಾಲನೆಯಾಗುತ್ತಿಲ್ಲ ಈ ನಿಟ್ಟಿನಲ್ಲಿ ಹಿರಿಯರು ಮಾರ್ಗದರ್ಶನ ನೀಡಬೇಕು. ಮನೆಯಲ್ಲಿ ನಿರಂತರ ಭಜನೆ ನಡೆಸಬೇಕು. ದೇವಸ್ಥಾನಗಳಲ್ಲಿ ಧಾರ್ಮಿಕ ಶಿಕ್ಷಣ ನೀಡುವ ಮಹತ್ತರ ಕಾರ್ಯ ನಡೆಯಬೇಕು . ಜೀರ್ಣೋದ್ದಾರ ಕಾರ‍್ಯದಲ್ಲಿ ಭಾಗವಹಿಸಿ ನಿಸ್ವಾರ್ಥ ಸೇವೆ ಮಾಡಿದ್ದಲ್ಲಿ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಭಾರತ ಉಳಿಯಬೇಕಾದರೆ ಹಿಂದೂ ಸಮಾಜ ಗಟ್ಟಿಯಾಗಬೇಕು. ದೈವ, ದೇವಸ್ಥಾನದಲ್ಲಿನ ಜಾತ್ರೋತ್ಸವ , ಬ್ರಹ್ಮಕಲಶದಂತಹ ಕಾರ್ಯಕ್ರಮದಲ್ಲಿ ಎಲ್ಲಾ ಸಮುದಾಯದವರು ತನ್ನದೆ ರೀತಿಯ ಸೇವೆ ಸಲ್ಲಿಸಿದಾಗ ಕಾರ್ಯಕ್ರಮ ಪರಿಪೂರ್ಣವಾಗುವುದು. ಹಾಗಾಗಿ ಹಿಂದೂ ಸಮಾಜದಲ್ಲಿ ಕೋಮು ಭಾವನೆಯಿಲ್ಲ. ದೇಶದ ಆರ್ಥಿಕ ವ್ಯವಸ್ಥೆಗೆ ನಾಗಾರಾಧನೆ ಪ್ರಧಾನವಾದ ದ.ಕ ಜಿಲ್ಲೆಯಲ್ಲಿನ ಆರ್ಥಿಕ ಚೈತನ್ಯ ಬಹುಪಾಲಿದೆ. ದೇವಸ್ಥಾನಗಳಲ್ಲಿ ಧರ್ಮಾಧಾರಿತ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಮಹಾದ್ವಾರದ ದಾನಿ ಮಂಗಳೂರಿನ ಉದ್ಯಮಿ ಗಿರಿಧರ ಶೆಟ್ಟಿ ಮಾತನಾಡಿ, ನಳೀಲು ಶ್ರೀ ಸುಬ್ರಹ್ಮಣ್ಯ ದೇವರ ಮಹಿಮೆ ಅಪಾರ.ಕ್ಷೇತ್ರದ ಭಕ್ತನಾದ ನನಗೆ ಮಹಾದ್ವಾರ ನೀಡುವಂತ ಸೌಭಾಗ್ಯವನ್ನು ದೇವರು ಕರುಣಿಸಿದ್ದಾನೆ.ದೇವರ ಸೇವೆ ಜೀವನದ ಪರಮ ಭಾಗ್ಯ ಎಂದರು.
ಹನುಮಗಿರಿ ಪಂಚಮುಖಿ ಅಂಜನೇಯ ಕ್ಷೇತ್ರದ ಧರ್ಮದರ್ಶಿ ನನ್ಯ ಅಚ್ಯುತ ಮೂಡಿತ್ತಾಯ ಮಾತನಾಡಿ, ನಳೀಲು ಕ್ಷೇತ್ರಕ್ಕೆ ನಾನು 25 ವರ್ಷಗಳ ಹಿಂದಿನಿಂದಲೇ ಬರುತ್ತಿದ್ದೇನೆ.ಕ್ಷೇತ್ರದ ಬೆಳವಣಿಗೆ ವಿಸ್ಮಯ ಮೂಡಿಸಿದೆ.ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ಅವರ ನೇತೃತ್ವದಲ್ಲಿ ಅಭೂತಪೂರ್ವ ಅಭಿವೃದ್ಧಿಯಾಗಿದೆ ಎಂದರು.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಪ್ರಕೃತಿ ಆರಾಧನೆ ಮಾಡುವ ಹಿಂದೂ ಸಮಾಜದಲ್ಲಿ ನಾಗಾರಾಧನೆಗೆ ವಿಶೇಷ ಮಹತ್ವವಿದೆ.ನಳೀಲು ಕ್ಷೇತ್ರದಲ್ಲಿ ನಮ್ಮ ಮೂಲವಾಗಿರುವ ಮೃತ್ತಿಕಾ ವಲ್ಮಿಕದಲ್ಲಿ ಸುಬ್ರಹ್ಮಣ್ಯ ನೆಲೆಯಾಗಿರುವುದು ವಿಶೇಷ. ಇಲ್ಲಿ ನಿಜ ನಾಗರಾಜನ ದರ್ಶನವಾಗುತ್ತಿರುವುದು ಕಾರಣಿಕತೆಗೆ ಸಾಕ್ಷಿ ಎಂದರು.
ಧಾರ್ಮಿಕ ಮುಂದಾಳು ರಾಜರಾಮ ಶೆಟ್ಟಿ ಕೋಲ್ಪೆಗುತ್ತು ಮಾತನಾಡಿ ,ಸುಬ್ರಹ್ಮಣ್ಯ ದೇವರು ನಂಬಿದವರನ್ನು ಕೈ ಬಿಡುವುದಿಲ್ಲ.ಸುಬ್ರಹ್ಮಣ್ಯ ದೇವರು ಇಷ್ಟಾರ್ಥ ಈಡೇರಿಸುವ ಮಹಾಮಹಿಮ,ಸುಬ್ರಹ್ಮಣ್ಯನನ್ನು ಪೂಜಿಸಿದರೆ ಆತ ಜೀವನದಲ್ಲೂ ಯಶಸ್ವಿಯಾಗುತ್ತಾನೆ ಎಂದರು.
ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳಿಕೃಷ್ಣ ಹಸಂತ್ತಡ್ಕ , ಪುತ್ತೂರಿನ ವೈದ್ಯ ಡಾ.ಸುರೇಶ್ ಪುತ್ತೂರಾಯ, ಪುತ್ತೂರು ಶ್ರೀ ಮಾತಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ದಾಮೋದರ ಕುಲಾಲ್, ಕೊಳ್ತಿಗೆ ಸಿ.ಎ ಬ್ಯಾಂಕ್ ಮಾಜಿ ಅಧ್ಯಕ್ಷ ವಸಂತ್ ಕುಮಾರ್ ರೈ ಅವರು ಮಾತನಾಡಿದರು.
ಕೊಳ್ತಿಗೆ ಶ್ರೀ ಬಾಯಂಬಾಡಿ ಷಣ್ಮುಖದೇವ ದೇವಸ್ಥಾನದ ಅಧ್ಯಕ್ಷ ನೇಮಿರಾಜ ಪಾಂಬಾರು , ಸವಣೂರು ಗ್ರಾ.ಪಂ.ಸದಸ್ಯ ತಾರಾನಾಥ ಬೊಳಿಯಾಲ, ಕಾರ್ಯಾಲಯ ಸಮಿತಿ ಸಹಸಂಚಾಲಕ ಅಶಿತ್ ಶೆಟ್ಟಿ ಉಪಸ್ಥಿತರಿದ್ದರು.
ಸನ್ಮಾನ
ದೇವಸ್ಥಾನದ ಕಾರ್ಯಗಳಲ್ಲಿ ವಿವಿಧ ರೀತಿಯ ಸೇವೆ ಸಲ್ಲಿಸಿದ ಜತ್ತಪ್ಪ ಪೂಜಾರಿ ಪಾಲ್ತಾಡಿ, ಕೋಟಿ ಪರವ ಮಾಡಾವು, ನೇಮು ಪರವ ಪರವ ಮಾಡಾವು, ಶೇಷಪ್ಪ ಮಡಿವಾಳ ಚೆನ್ನಾವರ, ರಾಮಣ್ಣ ನಾಯ್ಕ ಕಾಪುತಮೂಲೆ, ಲೀಲಾ ಕಾಯರ್‌ಗುರಿ, ,ಸುಬ್ಬಿ ಕಾಯ್ ಗುರಿ, ಕೊರಪ್ಪೊಳು ಕಾಯರ್ ಗುರಿ, ಪ್ರೇಮಾ ಕಲ್ಲಕಟ್ಟ ಅವರುಗಳನ್ನು ಸನ್ಮಾನಿಸಿಸಲಾಯಿತು.
ಸತೀಶ್ ರೈ ನಳೀಲು ದಂಪತಿಗಳು ಸ್ವಾಮೀಜಿಯವರನ್ನು ಗೌರವಿಸಿದರು. ಅಮರ್‌ನಾಥ ರೈ ಬಾಕಿಜಾಲು,ಜಗನ್ನಾಥ ಗೌಡ ಪೂಜಾರಿಮನೆ ಅತಿಥಿಗಳನ್ನು ಗೌರವಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಸ್ವಾಗತಿಸಿದರು.ಸಮಿತಿ ಸದಸ್ಯ ಸುಬ್ರಾಯ ಗೌಡ ಪಾಲ್ತಾಡಿ ವಂದಿಸಿದರು.ಶಶಿಕುಮಾರ್ ಬಿ.ಎನ್. ನೆಲ್ಲಿಕುಮೇರು ನಿರೂಪಿಸಿದರು.