Love Affair: ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಪ್ರೇಯಸಿ !

ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿದ ಹಿನ್ನೆಲೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ವಿಶೇಷ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್‌ ಕಾನ್‌ಸ್ಟೇಬಲ್‌ನನ್ನು ಆತನ ಪ್ರೇಯಸಿಯೇ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಲೆಗೈದಿರುವ ಘಟನೆ ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹಾಸನ ಮೂಲದ ಸಂಜಯ್‌ (30)ಕೊಲೆಯಾದ ಕಾನ್‌ಸ್ಟೇಬಲ್‌. ಕೃತ್ಯವೆಸಗಿದ ಮಹಿಳಾ ಹೋಮ್‌ ಗಾರ್ಡ್‌, ಮಂಡ್ಯ ಮೂಲದ ರಾಣಿಯನ್ನು ಬಂಧಿಸಲಾಗಿದೆ.

ಡಿ.6 ರಂದು ಘಟನೆ ನಡೆದಿದ್ದು, ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಂಜಯ್‌ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಮೊದಲು ಸಂಜಯ್‌ ಹೇಳಿಕೆ ಆಧರಿಸಿ ಆಕಸ್ಮಿಕ ಘಟನೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಆದರೆ, 3 ದಿನಗಳ ಹಿಂದೆ ಸಂಜಯ್‌, ತನ್ನ ಹೇಳಿಕೆಯನ್ನು ಬದಲಾಯಿಸಿ ರಾಣಿ ವಿರುದ್ಧ ಕೊಲೆ ಯತ್ನ ಆರೋಪಿಸಿದ್ದರು. ಹೀಗಾಗಿ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆದರೆ, ಇದೀಗ ಸಂಜಯ್‌ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮೂರು ವರ್ಷಗಳ ಪರಿಚಯ: ಹಾಸನ ಮೂಲದ ಸಂಜಯ್‌ 2018ರಲ್ಲಿ ಪೊಲೀಸ್‌ ಇಲಾಖೆಗೆ ಸೇರ್ಪಡೆಗೊಂಡಿದ್ದು, ಬಸವನಗುಡಿ ಠಾಣೆಯಲ್ಲಿ ಕಾನ್‌ಸ್ಟೇಬಲ್‌ ಆಗಿ ಕೆಲಸ ಮಾಡುತ್ತಿದ್ದರು. ಅವಿವಾಹಿತರಾಗಿರುವ ಸಂಜಯ್‌ ತ್ಯಾಗರಾಜನಗರದಲ್ಲಿ ವಾಸವಾಗಿದ್ದರು. 3 ತಿಂಗಳಿಂದ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ವಿಶೇಷ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.

ಇದನ್ನು ಓದಿ: Punishment to kids: ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿಗಳಿಂದ ಕಪಾಳ ಮೋಕ್ಷ ಮಾಡಲು ಹೇಳಿದ ಶಿಕ್ಷಕಿ, ಸಿಕ್ಕದೇ ಛಾನ್ಸ್‌ ಎಂದು ಛಟಾರನೇ ಕೆನ್ನೆಗೆ ಬಾರಿಸಿದ ಹುಡುಗ್ರು, ಮುಂದೇನಾಯ್ತು?

ಇದೇ ಠಾಣೆಯಲ್ಲಿ 2020-21ನೇ ಸಾಲಿನಲ್ಲಿ ಮಂಡ್ಯ ಮೂಲದ ರಾಣಿ ಗೃಹ ರಕ್ಷಕ ದಳ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಇಬ್ಬರ ಪರಿಚಯವಾಗಿದ್ದು, ಅಕ್ರಮ ಸಂಬಂಧ ಹೊಂದಿದ್ದಾರೆ. ವಿವಾಹಿತೆಯಾಗಿರುವ ರಾಣಿ, ಪತಿ ಹಾಗೂ ಇಬ್ಬರು ಮಕ್ಕಳು ಜತೆ ಪುಟ್ಟೇನಹಳ್ಳಿಯ ಅಷ್ಟಲಕ್ಷ್ಮೀ ಲೇಔಟ್‌ನಲ್ಲಿ ವಾಸವಾಗಿದ್ದಳು. ಸದ್ಯ ಬಸವನಗುಡಿ ಠಾಣೆಯಲ್ಲಿ ಕೆಲಸ ತೊರೆದಿರುವ ರಾಣಿ, ಬೆಳ್ಳಂದೂರಿನ ಕಂಪನಿಯೊಂದರಲ್ಲಿ ಭದ್ರತಾ ಸಿಬ್ಬಂದಿ ಆಗಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸರು ಹೇಳಿದರು.

ಕೊಲೆಗೆ ಕಾರಣವಾದ ಮೊಬೈಲ್‌ ಕರೆ: ಡಿ.6ರಂದು ಕೆಲಸ ಮುಗಿಸಿ ಮನೆಗೆ ಹೋಗಿದ್ದ ಸಂಜಯ್‌ಗೆ ಸಂಜೆ 6 ಗಂಟೆಗೆ ಕರೆ ಮಾಡಿದ್ದ ರಾಣಿ, ತಮ್ಮ ಮನೆಗೆ ಬರುವಂತೆ ಹೇಳಿದ್ದಾಳೆ. ಮನೆಗೆ ಬಂದಿದ್ದ ಸಂಜಯ್‌ ಜತೆ ದೈಹಿಕ ಸಂಪರ್ಕ ಬೆಳೆಸಿದ್ದಳು. ಇದೇ ವೇಳೆ ಚೇತನ್‌ ಎಂಬಾತ ರಾಣಿಗೆ ಕರೆ ಮಾಡಿದ್ದಾನೆ. ಅದನ್ನು ಗಮನಿಸಿದ ಸಂಜಯ್‌, “ಕರೆ ಮಾಡಿದ್ದು ಯಾರು? ಎಂದು ಪ್ರಶ್ನಿಸಿದ್ದಾರೆ. ಬಳಿಕ ಆಕೆಯ ಮೊಬೈಲ್‌ ಕಸಿದುಕೊಂಡು ಪರಿಶೀಲಿಸಿದಾಗ ಚೇತನ್‌ ಹಾಗೂ ಚಂದನ್‌ ಎಂಬುವರ ಜತೆ ಸಲುಗೆಯಿಂದ ಮಾತನಾಡುತ್ತಿರುವ ಚಾಟಿಂಗ್‌ ಕಂಡಿದೆ. ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಆಗ ರಾಣಿ, ಈ ರೀತಿ ಪ್ರಶ್ನಿಸಿದರೆ, ಪೆಟ್ರೋಲ್‌ ಹಾಕಿ ಸುಡುತ್ತೇನೆ ಎಂದು ಬೆದರಿಸಿದ್ದಾಳೆ.

ಪೆಟ್ರೋಲ್‌ ತಂದು ಕೊಲೆಯಾದ ಸಂಜಯ್‌: ಪ್ರೇಯಸಿಯ ಮಾತಿನಿಂದ ಕೋಪಗೊಂಡ ಸಂಜಯ್‌, ಕೂಡಲೇ ಪೆಟ್ರೋಲ್‌ ಬಂಕ್‌ಗೆ ಹೋಗಿ ಒಂದು ಲೀಟರ್‌ ಪೆಟ್ರೋಲ್‌ ತಂದು ಪ್ರೇಯಸಿಗೆ ಕೊಟ್ಟು, “ಪೆಟ್ರೋಲ್‌ ಹಾಕುತ್ತಿಯಾ ಹಾಕು, ಕೊಲೆ ಮಾಡು ನೋಡೋಣ’ ಎಂದು ಸವಾಲೆಸಿದಿದ್ದಾರೆ. ಆಗ ರಾಣಿ, ಪೆಟ್ರೋಲ್‌ ಅನ್ನು ಸಂಜಯ್‌ನ ದೇಹದ ಮೇಲೆ ಸುರಿದು ಬೆಂಕಿ ಹಚ್ಚಿದ್ದಾಳೆ. ಕ್ಷಣಮಾತ್ರದಲ್ಲಿ ಸಂಜಯ್‌ ದೇಹಕ್ಕೆ ಬೆಂಕಿ ಹೊತ್ತಿಕೊಂಡು ಹೊಟ್ಟೆ ಮತ್ತು ಬೆನ್ನಿನ ಭಾಗ ಉರಿಯಲಾರಂಭಿಸಿತ್ತು. ಸಂಜಯ್‌ ಚೀರಾಡುತ್ತಿದ್ದರು. ಅದರಿಂದ ಹೆದರಿದ ರಾಣಿ, ನೀರು ಹಾಕಿ ಬೆಂಕಿ ನಂದಿಸಿ, ನಂತರ, ದ್ವಿಚಕ್ರ ವಾಹನದಲ್ಲಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸಂಜಯ್‌ರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು ಎಂದು ಪೊಲೀಸರು ಹೇಳಿದರು.

ಆಕಸ್ಮಿಕ ಘಟನೆ ಎಂದಿದ್ದ ಪೇದೆ

ಡಿ.7ರಂದು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದ ಪೊಲೀಸರಿಗೆ, ಪಕ್ಕದಲ್ಲಿದ್ದ ರಾಣಿ ಸೂಚನೆ ಮೇರೆಗೆ ಕಾನ್‌ಸ್ಟೇಬಲ್‌ ಸಂಜಯ್‌, ಇದೊಂದು ಆಕಸ್ಮಿಕ ಘಟನೆ ಎಂದು ಹೇಳಿಕೆ ನೀಡಿದ್ದರು. ಆದರೆ, ಡಿ.19ರಂದು ತನ್ನ ಹೇಳಿಕೆ ಬದಲಾಯಿಸಿದ್ದ ಸಂಜಯ್, ರಾಣಿ ಬೆದರಿಕೆ ಹಾಕಿದ್ದರಿಂದ, ಇದು ಆಕಸ್ಮಿಕ ಘಟನೆ ಎಂದು ಸುಳ್ಳು ಹೇಳಿದ್ದೆ. ಆದರೆ, ಆಕೆ ಜತೆ ಅಕ್ರಮ ಸಂಬಂಧ ಹೊಂದಿದ್ದು, ಘಟನೆ ನಡೆದ ದಿನ ವಾಗ್ವಾದ ನಡೆದ ವೇಳೆ ಆಕೆಯೇ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾಳೆ ಎಂದು ಹೇಳಿಕೆ ನೀಡಿದ್ದರು.

ಘಟನೆ ಸಂಬಂಧ ಮೊದಲಿಗೆ ಹನುಮಂತನಗರ ಠಾಣೆಯಲ್ಲಿ ಕೊಲೆ ಯತ್ನ ಆರೋಪದಡಿ ಎಫ್ಐಆರ್‌ ದಾಖಲಾಗಿತ್ತು. ಘಟನೆ ನಡೆದ ಸ್ಥಳದ ಆಧಾರದಲ್ಲಿ ಪ್ರಕರಣವನ್ನು ಪುಟ್ಟೇನಹಳ್ಳಿ ಠಾಣೆಗೆ ವರ್ಗಾಯಿಸಲಾಗಿದೆ.

1 Comment
  1. […] ಇದನ್ನು ಓದಿ: ಪ್ರೇಮ ಪ್ರಕರಣ : ಪೊಲೀಸ್ ಕಾನ್‌ಸ್ಟೇಬಲ್ ಮೇ… […]

Leave A Reply

Your email address will not be published.