Mushroom biryani : ರುಚಿಕರವಾದ ಮಶ್ರೂಮ್ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ ನೋಡಿ ; ಟೇಸ್ಟಿ ಬಿರಿಯಾನಿ ಚಪ್ಪರಿಸಿಕೊಂಡು ತಿನ್ನಿ!!

Mushroom biryani : ಬಿರಿಯಾನಿ (biryani) ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ. ಹೆಸರು ಹೇಳಿದ್ರೇನೇ ಬಾಯಲ್ಲಿ ನೀರು ಬರುತ್ತದೆ. ಮಾಂಸಾಹಾರದಲ್ಲಿ ಎಲ್ಲಾ ಖಾದ್ಯಗಳದ್ದೂ ಒಂದು ತೂಕವಾದರೆ, ಬಿರಿಯಾನಿಯದ್ದೇ ಒಂದು ತೂಕ. ಬಿರಿಯಾನಿ ಅಂದ್ರೆ ಬೇರೆ ಲೆವೆಲ್. ಕೆಲವರಿಗಂತೂ ಪ್ರತಿದಿನ ಬಿರಿಯಾನಿ ತಿನ್ನೋ ಹವ್ಯಾಸ. ಇನ್ನೂ ಕೆಲವರಿಗೆ ಬೇಸರ. ಯಾಕಂದ್ರೆ ಹೊರಗಡೆ ಹೋಟೆಲ್ ಗೆ ಹೋದಾಗ ಮಾತ್ರ ಬಿರಿಯಾನಿ ತಿಂದು ಬಾಯಿಚಪಲ ತೀರಿಸಬಹುದು. ಆದರೆ, ಪ್ರತಿಬಾರಿ ಹೋಟೆಲ್ ನಲ್ಲೇ ತಿನ್ನೋದಿಕ್ಕಾಗುತ್ತಾ? ಅದಕ್ಕೆ ಇಲ್ಲಿದೆ ನೋಡಿ ರುಚಿಕರವಾದ ‘ಮಶ್ರೂಮ್ ಬಿರಿಯಾನಿ’ (Mushroom biryani) ಮಾಡುವ ವಿಧಾನ. ನಿಮಗೆ ಬೇಕೆನಿಸಿದಾಗ ಮನೆಯಲ್ಲೇ ಮಾಡಿ ತಿನ್ನಬಹುದು. ಹೇಗೆ ಮಾಡೋದು? ಏನೆಲ್ಲಾ ಸಾಮಗ್ರಿಗಳು ಬೇಕು? ಇಲ್ಲಿದೆ ನೋಡಿ ಕಂಪ್ಲೀಟ್ ವಿವರ.

ಬೇಕಾಗುವ ಸಾಮಗ್ರಿಗಳು:

ಅಕ್ಕಿ – 1 ಕಪ್
ಈರುಳ್ಳಿ -1
ಟೋಮೆಟೊ -1
ಎಣ್ಣೆ -1 ಟೇಬಲ್ ಸ್ಪೂನ್
ತುಪ್ಪ – 1 ಟೇಬಲ್ ಸ್ಪೂನ್
ಚಕ್ಕೆ – 1 ತುಂಡು
ಏಲಕ್ಕಿ -2
ಲವಂಗ -2
ಹಸಿಮೆಣಸು – 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಪುದೀನಾ ಸೊಪ್ಪು -1 ಟೇಬಲ್ ಸ್ಪೂನ್
ಗರಂ ಮಸಾಲೆ – 1 ಟೀ ಸ್ಪೂನ್
ಅರಿಶಿನ -1/4 ಟೀ ಸ್ಪೂನ್
ಧನಿಯಾ ಪುಡಿ -1 ಚಮಚ
ಮಶ್ರೂಮ್ – 1 ಕಪ್
ಮೊಸರು- 1 ಟೇಬಲ್ ಸ್ಪೂನ್
ಲಿಂಬೆಹಣ್ಣಿನ ರಸ -1 ಚಮಚ
ಕೊತ್ತಂಬರಿ ಸೊಪ್ಪು -1 ಟೇಬಲ್ ಸ್ಪೂನ್
ಉಪ್ಪು- ರುಚಿಗೆ ತಕ್ಕಷ್ಟು
ಖಾರದ ಪುಡಿ -1 ಚಮಚ
ಸೋಂಪು – 1/2 ಟೀ ಸ್ಪೂನ್

ಮಶ್ರೂಮ್ ಬಿರಿಯಾನಿ ಮಾಡುವ ವಿಧಾನ :

ಅಕ್ಕಿಯನ್ನು ಚೆನ್ನಾಗಿ ತೊಳೆದು 1/2 ಗಂಟೆಗಳ ಕಾಲ ನೆನಸಿಡಿ. ನಂತರ ಈರುಳ್ಳಿ ಮತ್ತು ಟೊಮೆಟೊವನ್ನು ಕತ್ತರಿಸಿಕೊಳ್ಳಿ, ಗ್ಯಾಸ್ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ, ಮತ್ತು ತುಪ್ಪ ಹಾಕಿರಿ. ಅದು ಬಿಸಿಯಾಗುತ್ತಿದ್ದಂತೆ ಅದಕ್ಕೆ ಚಕ್ಕೆ, ಲವಂಗ, ಏಲಕ್ಕಿ ಹಾಕಿ. ಇಷ್ಟಾದ ಬಳಿಕ ಕತ್ತರಿಸಿಟ್ಟುಕೊಂಡಿದ್ದ ಈರುಳ್ಳಿಯನ್ನು ಸೇರಿಸಿ, ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಪುದೀನಾ ಸೇರಿಸಿ ಚೆನ್ನಾಗಿ ಪ್ರೈ ಮಾಡಿ. ಕತ್ತರಿಸಿಟ್ಟುಕೊಂಡಿದ್ದ ಟೊಮೆಟೊ ಹಾಕಿ ಪ್ರೈ ಮಾಡಿ. ಟೊಮೆಟೊ ಮೆತ್ತಗಾದ ನಂತರ ಇದಕ್ಕೆ ಧನಿಯಾ, ಅರಿಶಿನ, ಗರಂ ಮಸಾಲೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.

ಇದಕ್ಕೆ ಕತ್ತರಿಸಿದ ಮಶ್ರೂಮ್ ಹಾಕಿ ಪ್ರೈ ಮಾಡಿ, ಮಶ್ರೂಮ್ ನೀರು ಬಿಡುತ್ತಿದ್ದಂತೆ ಇದಕ್ಕೆ ಮೊಸರು ಸೇರಿಸಿ, 1 1/2 ಕಪ್ ನೀರು ಹಾಕಿ ಅದು ಕುದಿಯಲು ಆರಂಭವಾಗುತ್ತಿದ್ದಂತೆ ಅದಕ್ಕೆ ಅಕ್ಕಿ ಹಾಕಿ, ಲಿಂಬೆಹಣ್ಣಿನ ರಸ, ಕೊತ್ತಂಬರಿಸೊಪ್ಪು, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ‌. ಇಷ್ಟೇ ಆನಂತರ ಕುಕ್ಕರ್ 2 ವಿಷಲ್ ಕೂಗಿದರೆ, ಸವಿಯಲು ರುಚಿಕರವಾದ ಮಶ್ರೂಮ್ ಬಿರಿಯಾನಿ ರೆಡಿ. ಬಾಯಿ ಚಪ್ಪರಿಸಿಕೊಂಡು ಇಷ್ಟದ ತಿನಿಸು ಬಿರಿಯಾನಿ ಸವಿಯಬಹುದು.

ಇದನ್ನೂ ಓದಿ: Watermelon: ಕಲ್ಲಂಗಡಿ ಹಣ್ಣು ಖರೀದಿಸುವ ಮುನ್ನ ಈ ವಿಷಯಗಳು ತಿಳಿದಿರಲಿ!!

Leave A Reply

Your email address will not be published.