Hubballi: ರತಿ -ಕಾಮಣ್ಣನಿಗೆ ಈದ್ಗಾ ಮೈದಾನಕ್ಕೆ ನೋ ಎಂಟ್ರಿ! ಮತ್ತೊಂದು ವಿವಾದಕ್ಕೆ ಸಾಕ್ಷಿಯಾಯ್ತು ಹುಬ್ಬಳ್ಳಿ ಈದ್ಗಾ ಮೈದಾನ!

Idgah Maidan : ಸದಾ ಒಂದಿಲ್ಲೊಂದು ಕಾರಣಗಳಿಂದ ರಾಜ್ಯದ್ಯಾಂತ ಸುದ್ದಿಯಾಗುವ ಈದ್ಗಾ ಮೈದಾನ ಇದೀಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಮೈದಾನದಲ್ಲಿ ಕಾಮಣ್ಣನ ಮೂರ್ತಿ ಸ್ಥಾಪಿಸುವ ವಿಚಾರ ಈ ವಿವಾದದ ಕಿಡಿ ಹೊತ್ತಲು ಕಾರಣವಾಗಿದ್ದು, ಹಿಂದೂ ಪರ ಸಂಘಟನೆ ಹಾಗೂ ಪಾಲಿಕೆ ನಡುವೆ ಸಂಘರ್ಷ ಶುರುವಾಗಿದೆ.

ಹೌದು, ಇಷ್ಟು ದಿನ ತಣ್ಣಗಾಗಿದ್ದ ಹುಬ್ಬಳಿ (Hubballi) ರಾಣಿ ಚೆನ್ನಮ್ಮ (Rani Chennamma) ಈದ್ಗಾ ಮೈದಾನದಲ್ಲಿ (Idgah Maidan) ಮತ್ತೆ ವಿವಾದದ ಕಿಡಿ ಹೊತ್ತಿಕೊಂಡಿದೆ. ಹೋಳಿ ಹಬ್ಬದ ಅಂಗವಾಗಿ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳದವರು ಕಾಮಣ್ಣ ಹಾಗೂ ರತಿಯರ ಮೂರ್ತಿಗಳನ್ನು ಸ್ಥಾಪಿಸುವುದಕ್ಕೆ ಅನುಮತಿ ಕೋರಿ ಪಾಲಿಕೆಗೆ ಮನವಿ ಸಲ್ಲಿಸಿದ್ದವು. ಅಂತೆಯೇ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ಇದಕ್ಕೆ ಅನುಮತಿ ನೀಡಿದ್ದರು. ಆದರೀಗ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅನುಮತಿ ನೀಡಲು ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ನಿರಾಕರಣೆ ಮಾಡಿದ್ದಾರೆ. ಆಯುಕ್ತರ ನಿರ್ಧಾರಕ್ಕೆ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತು ಮಾತನಾಡಿದ ಹು–ಧಾ ಮಹಾನಗರ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣರು ‘ಪ್ರಧಾನಿ ನರೇಂದ್ರ ಮೋದಿ ಅವರು ಐಐಟಿ ಉದ್ಘಾಟನೆಗೆ ಇದೇ 12ರಂದು ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಭದ್ರತೆ ಕಾರಣದಿಂದ ನಗರದ ಈದ್ಗಾ ಮೈದಾನದಲ್ಲಿ ಕಾಮಣ್ಣ–ರತಿ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶ ನೀಡಿಲ್ಲ. ಮಹಾಮಂಡಳದ ಸದಸ್ಯರೊಂದಿಗೆ ಸಭೆ ನಡೆಸಿ, ಈ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಯಾವುದೇ ರಾಜಕೀಯ ನಾಯಕರ ಒತ್ತಡದಿಂದ ಅನುಮತಿ ನಿರಾಕರಿಸಿಲ್ಲ’ ಎಂದು ತಿಳಿಸಿದರು.

ಇನ್ನು ಹು–ಧಾ ಪೊಲೀಸ್‌ ಕಮಿಷನರ್‌ ರಮನ್‌ ಗುಪ್ತಾ ಮಾತನಾಡಿ, ‘ಮಹಾಮಂಡಳದವರು ಮೊದಲೇ ಅರ್ಜಿ ಸಲ್ಲಿಸಿದ್ದರೆ ಭದ್ರತೆಗಾಗಿ ಎಷ್ಟು ಜನ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂಬುದನ್ನು ನೋಡಿಕೊಂಡು ಅನುಮತಿ ನೀಡಬಹುದಿತ್ತು. ಸಿದ್ಧತೆಗೆ ಕನಿಷ್ಠ ಹತ್ತು ದಿನಗಳು ಬೇಕು. ಅವಳಿ ನಗರದಲ್ಲಿ ಈಗಾಗಲೇ 472 ಕಾಮಣ್ಣನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಎಲ್ಲ ಕಡೆ ಭದ್ರತೆ ಕಲ್ಪಿಸಲಾಗಿದೆ. ಗುಪ್ತಚರ ಮಾಹಿತಿ ಆಧರಿಸಿ, ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ಮಾರ್ಚ್‌ 7ರ ನಂತರ ಯಾವುದೇ ಕಾಮಣ್ಣನ ಮೂರ್ತಿಗಳು ಪ್ರತಿಷ್ಠಾಪನೆ ಆಗಿಲ್ಲ’ ಎಂದು ತಿಳಿಸಿದರು.

ಇನ್ನು ಹಿಂದೂ ಪರ ಸಂಘಟನೆಗಳು, ಅನುಮತಿ ನೀಡಿದರೆ ಈದ್ಗಾ ಮೈದಾನದ ಆವರಣದೊಳಗೆ ಕಾಮಣ್ಣನ ಕೂರಿಸುತ್ತೇವೆ. ಇಲ್ಲದಿದ್ದರೆ ಮೈದಾನದ ಹೊರಗಡೆಯೇ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ. ಮೂರು ದಿನಗಳ ಕಾಲ ಹೋಳಿ (Holi) ಆಚರಣೆ ಮಾಡುತ್ತೇವೆ ಎಂದು ಮೈದಾನದ ಎದುರು ಪ್ರತಿಭಟಿಸಿ ಪಾಲಿಕೆಗೆ ಎಚ್ಚರಿಕೆ ನೀಡಿವೆ. ಪ್ರತಿಭಟನೆ ಬೆನ್ನಲ್ಲೇ ಮೈದಾನಕ್ಕೆ ಬಿಗಿ ಪೊಲೀಸ್ ಭದ್ರತೆ ಹಾಕಲಾಗಿದೆ. ಈ ಹಿಂದೆ ಗಣಪತಿ ಪ್ರತಿಷ್ಠಾಪನೆ (Ganesh Chaturthi) ವಿಚಾರದಲ್ಲಿ ಈದ್ಗಾ ಮೈದಾನ ಸುದ್ದಿಯಾಗಿತ್ತು.

Leave A Reply

Your email address will not be published.