2 ಲಕ್ಷ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಸ್ಥಾಪಿಸುವ ಗುರಿ -ಅಮಿತ್ ಶಾ

ಪುತ್ತೂರು:ಮುಂದಿನ 3 ವರ್ಷಗಳಲ್ಲಿ ದೇಶದಲ್ಲಿ 2 ಲಕ್ಷ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್‌ ಶಾ ಹೇಳಿದರು.

ಪುತ್ತೂರು ತೆಂಕಿಲದಲ್ಲಿ ಶನಿವಾರ ಕ್ಯಾಂಪ್ಕೊ ಸುವರ್ಣ ಮಹೋತ್ಸವ ಹಾಗೂ ಸಹಕಾರಿಗಳ ಸಮಾವೇಶ ಉದ್ಘಾಟಿಸಿ, ಪುತ್ತೂರಿನಲ್ಲಿ ಅಗ್ರಿಮಾಲ್‌ಗೆ ಶಿಲಾನ್ಯಾಸ, ದಾವಣಗೆರೆಯಲ್ಲಿನ ಗೋದಾಮು ಉದ್ಘಾಟನೆ ಹಾಗೂ ಕ್ಯಾಂಪ್ಕೊದ ತೆಂಗಿನೆಣ್ಣೆ ಕಲ್ಪ ಬಿಡುಗಡೆ ನೆರವೇರಿಸಿ ಅವರು ಮಾತನಾಡಿದರು.

ಕೃಷಿಕರಿಗೆ ಸಂಬಂಧಿಸಿದ ಎಲ್ಲಾ ರೀತಿಯ ಸಾಮಗ್ರಿಗಳೂ ಒಂದೇ ಸೂರಿನಡಿ ಸಿಗುವಂತಹ ಈ ಪರಿಕಲ್ಪನೆ ದೇಶದಲ್ಲೇ ಹೊಸದ್ದು. 3 ಸಾವಿರ ಸದಸ್ಯರಿಂದ ಆರಂಭಗೊಂಡ ಕ್ಯಾಂಪ್ಕೋ ಸಂಸ್ಥೆ ಇಂದು 1.38 ಲಕ್ಷ ಸದಸ್ಯರ ಸದೃಢ ಸಹಕಾರಿ ಸಂಸ್ಥೆ ಯಾಗಿ ಬೆಳೆದು ನಿಂತಿದೆ. ಈ ಸಾಧನೆಗಾಗಿ ಕ್ಯಾಂಪ್ಕೋ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಸಹಕಾರಿ ಸಂಸ್ಥೆಯೊಂದು ಅಗ್ರಿ ಮಾಲ್‌ ನಿರ್ಮಾಣಕ್ಕೆ ಮುಂದಾಗುತ್ತಿರುವುದು ದೇಶದ ಸಹಕಾರಿ ರಂಗದಲ್ಲೇ ಮೊದಲು. ಸಾರ್ಥಕ 50 ವರ್ಷಗಳನ್ನು ಪೂರ್ಣಗೊಳಿಸಿರುವ ಕ್ಯಾಂಪ್ಕೊ ಈ ಮೂಲಕ ಕೃಷಿಕರಿಂದ ಪ್ರಾಮಾಣಿಕತೆಯ ಪ್ರಮಾಣ ಪತ್ರವನ್ನು ಪಡೆದಂತಾಗಿದೆ ಎಂದು ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್‌ ಶಾ ಹೇಳಿದರು.

ಕರಾವಳಿಗರು ಬೆವರು ಸುರಿಸಿ ಬೆಳೆಯುವ ಸುಪಾರಿಯನ್ನು ನಾವು ಗುಜರಾತಿಗಳು ತಿಂದು ಬೆವರಿಳಿಸುತ್ತೇವೆ ಎಂದು ಹಾಸ್ಯ ಭರಿತವಾಗಿ ವಿವರಿಸಿದರು‌.

ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಸಚಿವರಾದ ಆರಗ ಜ್ಞಾನೇಂದ್ರ, ವಿ. ಸುನಿಲ್‌ ಕುಮಾರ್‌, ಎಸ್‌. ಅಂಗಾರ, ಎಸ್‌.ಟಿ. ಸೋಮಶೇಖರ್‌, ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಶಾಸಕರಾದ ಸಂಜೀವ ಮಠಂದೂರು, ಹರೀಶ್‌ ಪೂಂಜ, ರಾಜೇಶ್‌ ನಾೖಕ್‌ ಉಳೇಪಾಡಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ್‌ ಭಟ್‌, ಕ್ಯಾಂಪ್ಕೊ ನಿರ್ದೇಶಕರು ಹಾಜರಿದ್ದರು.

ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಪ್ರಸ್ತಾವನೆಗೈದರು. ವ್ಯವಸ್ಥಾಪಕ ನಿರ್ದೇಶಕ ಎಚ್‌.ಎಂ. ಕೃಷ್ಣಕುಮಾರ್‌ ಸ್ವಾಗತಿಸಿದರು. ಉಪಾಧ್ಯಕ್ಷ ಶಂಕರನಾರಾಯಣ ಭಟ್‌ ಖಂಡಿಗೆ ವಂದಿಸಿದರು

Leave A Reply

Your email address will not be published.