ವಿಚ್ಛೇದನದ ನಂತರ, ಮತ್ತೆ ದಾಂಪತ್ಯವನ್ನು ಬಲಪಡಿಸುತ್ತೆ ಈ ಡಿವೋರ್ಸ್! ಸದ್ಯ ಟ್ರೆಂಡ್ ಆಗ್ತಿರೋ ಈ ‘ಸ್ಲೀಪ್ ಡಿವೋರ್ಸ್’ ಬಗ್ಗೆ ನಿಮಗೆ ಗೊತ್ತಾ?

ವಿಚ್ಛೇದನ ಅಥವಾ ಡಿವೋರ್ಸ್ ಪರಿಕಲ್ಪನೆ ಏನು ಅಂತ ಎಲ್ರಿಗೂ ಗೊತ್ತಿದೆ. ಹೌದು, ಮದುವೆಯ ನಂತರ ದಂಪತಿಯ ಮಧ್ಯೆ ಹೊಂದಾಣಿಕೆಯಾಗದಿದ್ದಾಗ, ತಮ್ಮ ನಡುವೆ ಭಿನ್ನಾಭಿಪ್ರಾಯಗಳು ಉಂಟಾದಾಗ, ಅವರು ಡಿವೋರ್ಸ್ ಪಡೆದುಕೊಳ್ಳುವುದು ಸಾಮಾನ್ಯವಾಗಿದೆ. ಆದ್ರೆ ಇತ್ತೀಚಿಗೊಂದು ಭಿನ್ನ ರೀತಿಯ ಡಿವೋರ್ಸ್ ಒಂದು ಟ್ರೆಂಡ್ ಆಗ್ತಿದ್ದು, ಇದನ್ನು ಪಡೆದ ಬಳಿಕ ದಾಂಪತ್ಯ ಜೀವನ ಚೆನ್ನಗಾಗುತ್ತದೆಯಂತೆ. ಹಾಗಾದ್ರೆ ಆ ಡಿವೋರ್ಸ್ ಯಾವ್ದಪ್ಪಾ? ಡಿವೋರ್ಸ್ಗಳಲ್ಲೂ ಈ ತರ ವೆರೈಟಿ ಇದಿಯಾ ಅಂತ ಯೋಚಿಸ್ತಿದೀರಾ? ಹಾಗಾದ್ರೆ ಈ ಸ್ಟೋರಿ ನೋಡಿ.

ಹೌದು, ‘ಸ್ಲೀಪ್ ಡಿವೋರ್ಸ್’ ಎಂಬ ಹೆಸರಿನ ವಿಚ್ಛೇದನವೊಂದು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸೌಂಡ್ ಮಾಡ್ತಿದ್ದು, ಎಲ್ಲರಿಗೂ ತೀವ್ರ ಕುತೂಹಲ ಕೆರಳಿಸಿದೆ. ಆ ಕುತೂಹಲ ತಣಿಯಬೇಕಾದ್ರೆ ಮುಂದೆ ಓದಿ. ವಿವಾಹದ ನಂತರ ದಂಪತಿಗಳು ಹಾಸಿಗೆ ಹಂಚಿಕೊಳ್ಳುವುದು, ಒಂದೇ ಹಾಸಿಗೆಯಲ್ಲಿ ಮಲಗೋದು ಸರ್ವೇ ಸಾಮಾನ್ಯ. ಇದು ಅವರ ರೋಮ್ಯಾಂಟಿಕ್ ಕ್ಷಣಗಳಲ್ಲಿ ಒಂದಾಗಿದೆ. ಜೊತೆಗಿದು, ಇಬ್ಬರೂ ಪರಸ್ಪರ ಅರ್ಥಮಾಡಿಕೊಳ್ಳುವ ಅವಕಾಶವನ್ನು ನೀಡುತ್ತದೆ.
ಗಂಡ-ಹೆಂಡತಿ ಒಟ್ಟಿಗೆ ಮಲಗಿದರೆ ಆರೋಗ್ಯಕರ ದೈಹಿಕ ಸಂಬಂಧವನ್ನು ಬೆಳೆಸಲು ಸಾಧ್ಯವಾಗುತ್ತದೆ.

ಆದರೆ ಕೆಲವೊಮ್ಮೆ ಕೆಲವು ಸಂದರ್ಭಗಳಿಂದಾಗಿ ದಂಪತಿಗಳು ಪ್ರತ್ಯೇಕವಾಗಿ ಮಲಗಬೇಕಾಗುತ್ತದೆ. ನಿಮ್ಮ ಸಂಗಾತಿ ಜೋರಾಗಿ ಗೊರಕೆ ಹೊಡೆಯುತ್ತಾ ನಿದ್ರಿಸುತ್ತಿರುವಾಗ ಅಥವಾ ತುಂಬಾ ಹೊತ್ತು ಲೈಟ್ ಆನ್ ಆಗಿ ಎಚ್ಚರದಿಂದಿರುವಾಗ ಇನ್ನು ಕೆಲವೊಮ್ಮೆ ಇಬ್ಬರೂ ಏನಕ್ಕಾದರೂ ಕೋಪಿಸಿಕೊಂಡಾಗ ಇದು ಸಂಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದಂಪತಿಗಳು ಪ್ರತ್ಯೇಕವಾಗಿ ಮಲಗಲು ಬಯಸುತ್ತಾರೆ. ಈ ರೀತಿ ಗಂಡ ಹೆಂಡತಿ ಸಪರೇಟ್ ಆಗಿ ಮಲಗುವುದನ್ನೇ ಸ್ಲೀಪ್ ಡಿವೋರ್ಸ್ ಎನ್ನುತ್ತಾರೆ.

ಯಸ್, ದಂಪತಿಗಳು ಪ್ರತ್ಯೇಕವಾಗಿ ಮಲಗಿದರೆ, ಅದನ್ನು ನಿದ್ರೆ ವಿಚ್ಛೇದನ (Sleep divorce) ಎಂದು ಕರೆಯಲಾಗುತ್ತದೆ. ಹೀಗೆ ಮಾಡುವುದರಿಂದ ನಿದ್ರೆಯ ಸಮಸ್ಯೆ ದೂರವಾಗುತ್ತದೆ. ಜೊತೆಗೆ ಮಲಗುವ ವಿಷಯವಾಗಿಯೇ ತಮ್ಮ ಸಂಗಾತಿಯೊಂದಿಗೆ ವಾದ ಮಾಡುವ ಬದಲು ಪ್ರತ್ಯೇಕವಾಗಿ ಮಲಗುವುದರಿಂದ ನೆಮ್ಮದಿಯ ನಿದ್ದೆ ಬಂದು ರಾತ್ರಿ ನಡೆದ ಮುನಿಸುಗಳು ಕೂಡ ಮರೆತುಹೋಗಿರುತ್ತದೆ. ಬೆಳಿಗ್ಗೆ ಏಳುವಾಗ ಏನೋ ಒಂದು ಹೊಸತನ ನಮ್ಮದಾಗಿರುತ್ತದೆ. ಜೊತೆಗೆ ಒಂದು ತೆರನಾದ ತಾಜಾತನವನ್ನು ಅನುಭವಿಸಬಹುದು.

ಇನ್ನು ಇದರಿಂದಾಗುವ ಪ್ರಯೋಜನಗಳನ್ನು ನೋಡೋದಾದ್ರೆ, ನಿದ್ರೆಯ ಗುಣಮಟ್ಟವನ್ನು ಸುಧಾರಿಸುವಲ್ಲಿ ನಿದ್ರೆಯ ಸ್ಥಳದ ಬದಲಾವಣೆಗಳು ತುಂಬಾ ಸಹಕಾರಿಯಾಗಿದೆ. ಇದರಿಂದ ದಂಪತಿಗಳು ತಮ್ಮ ವೈಯಕ್ತಿಕ ಜಾಗವನ್ನು ಪಡೆಯುತ್ತಾರೆ. ಜೊತೆಗೆ ಪ್ರತ್ಯೇಕ ಹಾಸಿಗೆಗಳ ಮೇಲೆ ಮಲಗುವುದು ಉತ್ತಮ ನಿದ್ರೆಗೆ ಕಾರಣವಾಗುತ್ತದೆ. ಆರೋಗ್ಯಕರ ಸಂಬಂಧಕ್ಕೆ ಒಂದೇ ಹಾಸಿಗೆಯ ಮೇಲೆ ಮಲಗುವುದು ಅನಿವಾರ್ಯವಲ್ಲ. ದಂಪತಿಗಳು ಪರಸ್ಪರ ಜೊತೆಗೆ ಮಲಗದೆ ಅನ್ಯೋನ್ಯತೆಯನ್ನು ಸೃಷ್ಟಿಸಬಹುದು.

ನಿದ್ರೆಯ ವಿಚ್ಛೇದನವು ದೀರ್ಘಾವಧಿಯ ಅಥವಾ ತಾತ್ಕಾಲಿಕವಾಗಿರಬಹುದು. ಸ್ಲೀಪ್ ವಿಚ್ಛೇದನವು ನಿಮ್ಮ ಸಂಬಂಧದ (Relationship) ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಥವಲ್ಲ. ಹೀಗಿದ್ದೂ ಇದು ದಂಪತಿಗಳ ವೈಯಕ್ತಿಕ ಆಯ್ಕೆಯಾಗಿದೆ. ಒಬ್ಬರನ್ನೊಬ್ಬರು ನಿಜವಾಗಿಯೂ ಪ್ರೀತಿಸುವ ಇಬ್ಬರು ಇದನ್ನು ಖಂಡಿತವಾಗಿ ಅರ್ಥಮಾಡಿಕೊಳ್ಳುತ್ತಾರೆ. ನೆನಪಿನಲ್ಲಿಡಿ, ನಿದ್ರೆಯ ವಿಚ್ಛೇದನವು ನೀವು ಒಂದೇ ಹಾಸಿಗೆಯಲ್ಲಿ ಸ್ವಲ್ಪ ಸಮಯವನ್ನು ಒಟ್ಟಿಗೆ ಕಳೆಯಲು ಸಾಧ್ಯವಿಲ್ಲ ಎಂದು ಅರ್ಥವಲ್ಲ. ಯಾವುದೇ ಅಡಚಣೆಯಿಲ್ಲದೆ ನೀವು ಕೆಲವು ಗಂಟೆಗಳ ಉತ್ತಮ ನಿದ್ರೆಯನ್ನು ಪಡೆಯಲು ಬಯಸುವ ಸಮಯವನ್ನು ಒದಗಿಸುವುದಾಗಿದೆ. ಅಲ್ಲದೆ ನಿಮಗೆ ಪ್ರತ್ಯೇಕ ಕೊಠಡಿ ಇಲ್ಲದಿದ್ದರೆ, ನೀವು ವಾಸಿಸುವ ಪ್ರದೇಶದಲ್ಲಿ ತಾತ್ಕಾಲಿಕ ಹಾಸಿಗೆಯನ್ನು ಹೊಂದಿಸಿ ಮಲಗಬಹುದು.

Leave A Reply

Your email address will not be published.