Crime News : ಪ್ರೀತಿಯಲ್ಲಿ ಮೋಸವಾಯಿತೇ ? ಕಾಲೇಜಿನಲ್ಲಿ ಪ್ರಿಯತಮೆಗೆ ಚಾಕು ಇರಿದ ಪಾಗಲ್ ಪ್ರೇಮಿ, ಪ್ರಿಯತಮೆ ಸಾವು
ಪ್ರೀತಿ ಕುರುಡು ಎಂಬ ಮಾತಿನಂತೆ.. ಜಾತಿಯ ಗಡಿರೇಖೆಯನ್ನು ದಾಟಿ, ಅದೆಷ್ಟೊ ಮಂದಿ ಪ್ರೀತಿಸಿ ಮದುವೆಯಾದ ಪ್ರಕರಣಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ. ಇತ್ತೀಚಿನ ದಿನಗಳಲ್ಲಿ ಪ್ರೀತಿಗೆ ಜಾತಿ ಎಂಬ ಚೌಕಟ್ಟು ಅಡ್ಡಿಯಾದ ನಿದರ್ಶನ ಕೂಡ ಇವೆ. ಪ್ರೀತಿ ಪ್ರೇಮ.. ಎಂದು ಪ್ರೇಮದ ಬಲೆಯಲ್ಲಿ ಬಿದ್ದು ಮನೆಯವರ ವಿರೋಧದ ನಡುವೆಯೆ ವಿವಾಹವಾಗಿ ಮನೆಯವರಿಂದಲೇ ಸಾವಿನ ಕದ ತಟ್ಟಿದ ಪ್ರಕರಣ ಕೂಡ ಇದೆ. ಇದೀಗ, ಪ್ರೀತಿಯ ಬಲೆಯಲ್ಲಿ ಸಿಲುಕಿ ಪ್ರಿಯತಮ ನಿಂದ ಸಾವಿನ ದವಡೆಗೆ ಸಿಲುಕಿದ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು ನಗರದ ರಾಜಾನುಕುಂಟೆ ಬಳಿಯಿರುವ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಿಯತಮ ವಿದ್ಯಾರ್ಥಿನಿಗೆ ಚಾಕು ಇರಿದಿದ್ದು, ಆಕೆ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಇನ್ನು ವಿದ್ಯಾರ್ಥಿನಿಗೆ ಚಾಕು ಇರಿದವನು ಬೇರೆ ಕಾಲೇಜಿನ ವಿದ್ಯಾರ್ಥಿ ಆಗಿದ್ದು, ತಾನು ಕೂಡ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಕೊಲೆಯಾದ ವಿದ್ಯಾರ್ಥಿನಿಯಲ್ಲಿ ಲಯಸ್ಮಿತ (19 ) ಎಂದು ಗುರುತಿಸಲಾಗಿದೆ. ಕೋಲಾರ ಮೂಲದ ಮೃತ ವಿದ್ಯಾರ್ಥಿನಿ ಬಿಟೆಕ್ ಅಭ್ಯಾಸ ಮಾಡುತ್ತಿದ್ದಳು. ಕಾಲೇಜಿಗೆ ತೆರಳಿದ ಪವನ್ ಕಲ್ಯಾಣ್ ಕ್ಲಾಸ್ ರೂಂ ಅಲ್ಲಿ ಇದ್ದ ಲಯಸ್ಮಿತಾ ಗೆ ಹೊರಗೆ ಬರಲು ಹೇಳಿದ್ದಾನೆ. ಬಳಿಕ 10 ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಹೊಸ ವರ್ಷದ ಆಚರಣೆ ಮುಗಿಸಿಕೊಂಡು ಇಂದು ಬೆಳಗ್ಗೆ ಕಾಲೇಜಿಗೆ ಆಗಮಿಸಿದ ವೇಳೆ ಈ ಘಟನೆ ನಡೆದಿದ್ದು, ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಬಳಿ ಹೋಗಿ ಚಾಕು ತೆಗೆದುಕೊಂಡು ಹೊಟ್ಟೆ ಮತ್ತು ಇತರೆ ಭಾಗಕ್ಕೆ ಯುವಕ ಇರಿದಿದ್ದಾನೆ. ಯುವತಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದು, ಬೇರೆ ವಿದ್ಯಾರ್ಥಿಗಳು ಕೂಡ ಹತ್ತಿರಕ್ಕೆ ಬರದಂತೆ ಚಾಕು ತೋರಿಸಿ ಹೆದರಿಸಿದ್ದಾನೆ ಎನ್ನಲಾಗಿದೆ.
ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಪವನ್ ಕಲ್ಯಾಣ್ ಕೂಡ ತನಗೆ ಚಾಕುವಿನಿಂದ ಇರಿದುಕೊಂಡಿದ್ದಾನೆ. ಇನ್ನು ಇಬ್ಬರೂ ಕೂಡ ಒಂದೇ ಊರಿನವರು ಎಂದು ತಿಳಿದುಬಂದಿದೆ. ಆದರೆ, ಪವನ್ ಕಲ್ಯಾಣ್ ಬೇರೆ ಕಾಲೇಜಿನಲ್ಲಿ ಬಿಸಿಎ ಓದುತ್ತಿದ್ದ ಎನ್ನಲಾಗಿದೆ. ಪ್ರೀತಿ ವಿಚಾರದಲ್ಲಿ ಗಲಾಟೆ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಅನುಮಾನ ವ್ಯಕ್ತ ಪಡಿಸಿದ್ದಾರೆ.
ಸರಿಯಾಗಿ ಮಧ್ಯಾಹ್ನ 12.58 ಗಂಟೆಗೆ ಘಟನೆ ನಡೆದಿದ್ದು, ತಕ್ಷಣ ಕಾಲೇಜು ಸೆಕ್ಯೂರಿಟಿ ಗಳು ಸಹಾಯಕ್ಕೆ ಮುಂದಾಗಿದ್ದಾರೆ. ಕಾಲೇಜಿನಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಟ್ಟು ಬಳಿಕ ಆಂಬುಲೆನ್ಸ್ ನಲ್ಲಿ ವಿದ್ಯಾರ್ಥಿನಿಯನ್ನು ಸಿಬ್ಬಂದಿ ಆಸ್ಪತ್ರೆಗೆ ಶಿಫ್ಟ್ ಮಾಡಲು ಕರೆದೊಯ್ದಾಗ ಮಾರ್ಗಮದ್ಯ ಯುವತಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಯುವಕ ಅದೇ ಚಾಕುವಿನಿಂದ ತನ್ನ ಹೊಟ್ಟೆಗೂ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದಾನೆ. ಗಂಭೀರ ಗಾಯಗೊಂಡು ಬಿದ್ದು ಒದ್ದಾಡುತ್ತಿದ್ದ ವಿದ್ಯಾರ್ಥಿಯನ್ನು ಅಲ್ಲಿನ ಸಿಬ್ಬಂದಿ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ರಾಜಾನುಕುಂಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.