ಕೆಮ್ಮಿನ ಸಿರಪ್‌ ಕುಡಿದ ಮಗುವಿನ ಎದೆ ಬಡಿತ ನಿಂತೇ ಹೋಯ್ತು | ಆದರೆ ಅಲ್ಲೊಂದು ಪವಾಡ ನಡೆಯಿತು, ಆ 20 ನಿಮಿಷ ನಡೆದಿದ್ದೇನು ಗೊತ್ತಾ?

ಬದಲಾಗುತ್ತಿರುವ ಹವಾಮಾನದಿಂದ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುವುದಲ್ಲದೆ, ಶೀತ, ಕೆಮ್ಮು ಜ್ವರ ವಯಸ್ಸಿನ ಭೇದವಿಲ್ಲದೆ ಕಂಡುಬರುತ್ತಿದೆ. ಕೊರೋನ ಮಹಾಮಾರಿ ಕಾಣಿಸಿಕೊಂಡ ಬಳಿಕ, ಇತ್ತೀಚಿನ ದಿನಗಳಲ್ಲಿ ಸಣ್ಣ ಜ್ವರ ಬಂದರೂ ಕೂಡ ವೈದ್ಯರ ಬಳಿ ಹೋಗೋದು ಸಾಮಾನ್ಯ. ಆದರೆ, ಕೆಲವರು ಆರೋಗ್ಯದ ಬಗ್ಗೆ ಹೆಚ್ಚಿನ ನಿರ್ಲಕ್ಷ್ಯ ತೋರಿ ಕೆಮ್ಮು ಕಫ ಕಂಡು ಬಂದ ಕೂಡಲೇ ಕೆಮ್ಮಿನ ಸಿರಪ್ ಕುಡಿದು ಬಿಡುತ್ತಾರೆ. ಆದರೆ, ಹೀಗೆ ಕುಡಿಯುವ ಸಿರಪ್ ಅಪಾಯಕಾರಿ ಎಂಬ ಆತಂಕಕಾರಿ ಮಾಹಿತಿ ಹೊರ ಬಿದ್ದಿದೆ.

ಮುಂಬೈನಲ್ಲಿ ಆಘಾತಕಾರಿ ಪ್ರಕರಣವೊಂದು ಮುನ್ನಲೆಗೆ ಬಂದಿದ್ದು, ಕೆಮ್ಮಿನ ಸಿರಪ್ ಕುಡಿಯುತ್ತಿದ್ದಂತೆ ಎರಡೂವರೆ ವರ್ಷದ ಮಗುವಿನ ಹೃದಯ ಬಡಿತವೇ ನಿಂತು ಹೋದ ಹೃದಯ ವಿದ್ರಾವಕ ಘಟನೆ ಘಟನೆ ನಡೆದಿದೆ. ಔಷಧಿ ನೀಡಿದ ಸ್ವಲ್ಪ ಹೊತ್ತಿನಲ್ಲೇ ಮಗುವಿನ ಹೃದಯ ಬಡಿತ ನಿಂತು ಹೋಗಿದೆ.

ಮುಂಬೈ ಮೂಲದ ಪೇಯ್ನ್ ಮ್ಯಾನೇಜ್ಮೆಂಟ್ ಸ್ಪೆಷಲಿಸ್ಟ್ ಟಿಲು ಮಂಗೇಶ್ಕರ್ (ಡಾ. ಟಿಲು ಮಂಗೇಶಕರ್) ಅವರ ಎರಡೂವರೆ ವರ್ಷದ ಮೊಮ್ಮಗ ಡಿಸೆಂಬರ್ 15 ರಂದು ಕೆಮ್ಮು ಮತ್ತು ಶೀತದಿಂದ ಬಳಲುತ್ತಿದ್ದ ಎನ್ನಲಾಗಿದೆ. ಹೀಗಾಗಿ, ಮಗುವಿನ ತಾಯಿ ಮಗುವಿಗೆ ಕೆಮ್ಮಿನ ಸಿರಪ್ ನೀಡಿದ್ದು, ಆದರೆ ಔಷಧಿ ನೀಡಿದ 20 ನಿಮಿಷಗಳ ಬಳಿಕ ಇದ್ದಕ್ಕಿದ್ದಂತೆ ಮಗು ಕುಸಿದು ಬಿದ್ದಿದೆ.

ಆ ಸಂದರ್ಭ ಪುಟ್ಟ ಕಂದನ ಹೃದಯ ಬಡಿತವೇ ನಿಂತು ಹೋಗಿದೆ. ಹೃದಯ ಸ್ತಂಭನದ ನಂತರ ತಾಯಿ ತಕ್ಷಣವೇ ಮಗುವನ್ನು ಮುಂಬೈನ ಹಾಜಿ ಅಲಿ ಪ್ರದೇಶದಲ್ಲಿರುವ ಎಸ್ಆರ್ಸಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಈ ಬಳಿಕ, ಮಗುವಿಗೆ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (CPR) ನೀಡಲಾಗಿದೆ. ಸರಿ ಸುಮಾರು 20 ನಿಮಿಷಗಳ ಬಳಿಕ ಮಗು ಕಣ್ಣು ತೆರೆದಿದ್ದು, ಮಗುವಿನ ರಕ್ತದೊತ್ತಡ ಮತ್ತು ಹೃದಯ ಬಡಿತ ಶುರುವಾಗಿದೆ. ಈ ಘಟನೆಯ ಬಳಿಕ, ಮಗುವಿಗೆ ಅನೇಕ ಪರೀಕ್ಷೆಗಳನ್ನು ಮಾಡಲಾಗಿದ್ದು, ಆದರೆ ಕೆಮ್ಮಿನ ಔಷಧಿಯನ್ನು ಹೊರತುಪಡಿಸಿ ಬೇರೆ ಯಾವುದೇ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ ಎನ್ನಲಾಗಿದೆ.

ಇದರ ನಡುವೆ, ವೈದ್ಯರು ಮಗುವಿನ ಹೃದಯ ಬಡಿತ ನಿಂತಿದ್ದ ಕಾರಣಕ್ಕೂ ಕೆಮ್ಮಿನ ಸಿರಪ್ಗೂ ಸಂಬಂಧವಿದೆ ಎನ್ನುವುದನ್ನು ಸಾಬೀತು ಮಾಡುವುದು ಕಷ್ಟ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವೈದ್ಯರೇ ಹೇಳುವ ಪ್ರಕಾರ ಕೆಲವೊಂದು ಕೆಮ್ಮಿನ ಸಿರಪ್ಗಳ ಸೇವನೆಯಿಂದ ಹೃದಯದ ತೊಂದರೆ ಕಂಡು ಬರುವ ಸಾಧ್ಯತೆ ಇದೆ.

ವೈದ್ಯಕೀಯ ಪರೀಕ್ಷೆಯಲ್ಲಿ ಕ್ಲೋರ್ಫೆನಿರಮೈನ್ ಮತ್ತು ಡೆಕ್ಸ್ಟ್ರೋಮೆಥೋರ್ಫಾನ್ ಸಂಯುಕ್ತಗಳ ಸಂಯೋಜನೆ ಇರುವುದು ತಿಳಿದು ಬಂದಿದ್ದು, ನಿಯಮಗಳ ಅನುಸಾರ ಇದನ್ನು ನಾಲ್ಕು ವರ್ಷದೊಳಗಿನ ಮಕ್ಕಳಿಗೆ ನೀಡುವಂತಿಲ್ಲ ಎನ್ನಲಾಗಿದೆ. ಹೀಗಿದ್ದರೂ ಕೂಡ ಔಷಧದ ಮೇಲೆ ಅಂತಹ ಯಾವುದೇ ಲೇಬಲ್ ಇರಲಿಲ್ಲ ಜೊತೆಗೆ ವೈದ್ಯರು ಅದನ್ನು ಮಕ್ಕಳಿಗೆ ನೀಡುತ್ತಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.