Reliance Jio : ಗ್ರಾಹಕರ ಚಿತ್ತ ಜಿಯೋ, ಏರ್ಟೆಲ್ ನತ್ತ!
ಟೆಲಿಕಾಮ್ ದೈತ್ಯ ಕಂಪನಿಗಳಲ್ಲಿ ತನ್ನ ಪಾರುಪತ್ಯ ಕಾಯ್ದು ಕೊಂಡಿರುವ ಜಿಯೋ ಇದೀಗ ಭದ್ರವಾಗಿ ನೆಲೆಯೂರಿ ಮೊದಲಿನ ಶ್ರೇಯಾಂಕದಲ್ಲಿ ಮುನ್ನಡೆ ಸಾಧಿಸುವ ಸಾಧ್ಯತೆ ದಟ್ಟವಾಗಿದೆ.
ಹೌದು..ದೂರಸಂಪರ್ಕ ನಿಯಂತ್ರಕ ಟ್ರಾಯ್ (TRAI) ಅಂಕಿ-ಅಂಶಗಳ ಅನ್ವಯ, ಅತಿ ದೊಡ್ಡ ಟೆಲಿಕಾಂ ಆಪರೇಟರ್ ಜಿಯೋ (Jio) ಹಾಗೂ ಭಾರ್ತಿ ಏರ್ಟೆಲ್ (Airtel)ಬಳಕೆದಾರರ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ನಡುವೆ ವೊಡಾಫೋನ್ ಐಡಿಯಾದ (Vi) ಗ್ರಾಹಕರ ಸಂಖ್ಯೆಯು ಗಣನೀಯ ವಾಗಿ ಇಳಿಕೆಯಾಗಿದೆ. ಹಾಗಾಗಿ, ಭಾರತದಲ್ಲಿ ಒಟ್ಟು ಚಂದಾದಾರರ ನೆಲೆಯು ಸೆಪ್ಟೆಂಬರ್ ತಿಂಗಳಲ್ಲಿ 3.6 ಮಿಲಿಯನ್ 36 ಲಕ್ಷ ಕುಸಿತ ಕಂಡಿದ್ದು, ಮಾರುಕಟ್ಟೆಯಲ್ಲಿ ಸ್ಥಾನವನ್ನು ಕಳೆದುಕೊಳ್ಳುವ ಲಕ್ಷಣಗಳು ದಟ್ಟವಾಗಿದೆ.
ಇದಲ್ಲದೆ, ಜಿಯೋ ಮಾರುಕಟ್ಟೆಯಲ್ಲಿನ ತನ್ನ ಸ್ಥಾನವನ್ನು ಮತ್ತಷ್ಟು ಭದ್ರ ಮಾಡಿಕೊಂಡಿದ್ದು, ಸೆಪ್ಟೆಂಬರ್‌ನಲ್ಲಿ 7.2 ಲಕ್ಷ ವೈರ್‌ಲೆಸ್ ಚಂದಾದಾರರು ಸೇರ್ಪಡೆಯಾಗಿದ್ದು, ಅದೇ ರೀತಿ, ಭಾರ್ತಿ ಏರ್ಟೆಲ್ ತನ್ನ ಮೊಬೈಲ್ ಬಳಕೆದಾರರ ಸಂಖ್ಯೆಯನ್ನು 4.12 ಲಕ್ಷ ಏರಿಕೆ ಕಂಡಿದೆ.
ಆದರೆ, ಜಿಯೋ ನೇತೃತ್ವದಲ್ಲಿ ಉಳಿದ ಟೆಲಿಕಾಂ ಕಂಪನಿ ಚಂದಾದಾರನ್ನು ಸೇರ್ಪಡೆ ಮಾಡಿಕೊಂಡಿದ್ದರೂ ಕೂಡ ದೂರಸಂಪರ್ಕ ಕಂಪನಿಗಳ ನಿವ್ವಳ ಸೇರ್ಪಡೆಯು ಆಗಸ್ಟ್ ತಿಂಗಳಲ್ಲಿ ಗಳಿಸಿದ 32.81 ಲಕ್ಷ ಚಂದಾದಾರರಿಗಿಂತ ಕಡಿಮೆಯಾಗಿದೆ ಎನ್ನಲಾಗಿದೆ. ಆರ್ಥಿಕ ಸಮಸ್ಯೆ ಸೇರಿದಂತೆ ನಾನಾ ಸಂಕಷ್ಟಗಳನ್ನು ಎದುರಿಸುತ್ತಿರುವ ವೊಡಾಫೋನ್ ಐಡಿಯಾದ ಚಂದಾದಾರರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡಿದ್ದು, ಗ್ರಾಹಕ ನೆಲೆಯು 40 ಲಕ್ಷ ಕುಸಿದು, ಸೆಪ್ಟೆಂಬರ್‌ನಲ್ಲಿ 24.91 ಕೋಟಿಗೆ ತಲುಪಿದೆ.
ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್ ‘ಒಟ್ಟು ವೈರ್‌ಲೆಸ್ ಚಂದಾದಾರರು 2022ರ ಅಂತ್ಯದ ವೇಳೆಗೆ 1,149.11 ಮಿಲಿಯನ್‌ನಿಂದ 2022ರ ಸೆಪ್ಟೆಂಬರ್ ಅಂತ್ಯದ ವೇಳೆಗೆ 1,145.45 ಮಿಲಿಯನ್‌ಗೆ ಇಳಿದಿದ್ದು, ಇದರಿಂದಾಗಿ ಮಾಸಿಕ ಕುಸಿತದ ದರ ಶೇಕಡಾ 0.32ರಷ್ಟಿದೆ ಎಂಬ ಮಾಹಿತಿಯನ್ನು ಚಂದಾದಾರಿಕೆಯ ಸೆಪ್ಟೆಂಬರ್ ಡೇಟಾ ಬಿಡುಗಡೆಯಾದಾಗ ತಿಳಿದು ಬಂದಿದೆ.
2022ರ ಸೆಪ್ಟೆಂಬರ್ ಅಂತ್ಯದ ವೇಳೆಗೆ, ಟಾಪ್ ಐದು ಸೇವಾ ಪೂರೈಕೆದಾರ ಸಂಸ್ಥೆಗಳಲ್ಲಿ ಒಟ್ಟು ಬ್ರಾಡ್‌ಬ್ಯಾಂಡ್ ಚಂದಾದಾರರಲ್ಲಿ ಶೇ 98.36ರಷ್ಟು ಮಾರುಕಟ್ಟೆ ಪಾಲನ್ನು ಪಡೆದಿವೆ ಎನ್ನಲಾಗಿದೆ. ‘ಈ ಸೇವಾ ಪೂರೈಕೆದಾರರು ರಿಲಯನ್ಸ್ ಜಿಯೋ ಇನ್ಫೋಕಾಮ್ (426.80 ಮಿಲಿಯನ್), ಭಾರ್ತಿ ಏರ್ಟೆಲ್ (225.09 ಮಿಲಿಯನ್), ವೊಡಾಫೋನ್ ಐಡಿಯಾ (123.20 ಮಿಲಿಯನ್), ಬಿಎಸ್‌ಎನ್‌ಎಲ್ (25.62 ಮಿಲಿಯನ್) ಮತ್ತು ಆಟ್ರಿಯಾ ಕನ್ವರ್ಜೆನ್ಸ್ (2.14 ಮಿಲಿಯನ್),’ ಎಂದು ಟ್ರಾಯ್ ಮಾಹಿತಿ ನೀಡಿದೆ.
ಭಾರತದಲ್ಲಿ ಟೆಲಿಫೋನ್ ಚಂದಾದಾರರ ಸಂಖ್ಯೆ (ಮೊಬೈಲ್ ಮತ್ತು ಸ್ಥಿರ-ಲೈನ್ ಒಟ್ಟಿಗೆ) 2022ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸುಮಾರು 117.19 ಕೋಟಿ ಇಳಿಕೆ ಕಂಡಿದ್ದು, ಇದು ಮಾಸಿಕ ಕುಸಿತ ದರ ಶೇ 0.27 ಆಗಿದೆ. 2022ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಒಟ್ಟು ಬ್ರಾಡ್‌ಬ್ಯಾಂಡ್ ಚಂದಾದಾರರು 81.6 ಕೋಟಿಗೆ ಏರಿಕೆ ಕಂಡಿದ್ದು ಈ ಬಗ್ಗೆ ಟ್ರಾಯ್ (TRAI) ಮಾಹಿತಿ ನೀಡಿದ್ದು, ಮಾಸಿಕ ಬೆಳವಣಿಗೆ ದರ ಶೇ 0.28 ಆಗಿದೆ ಎನ್ನಲಾಗಿದೆ.