Camera Theft : ರೀಲ್ಸ್ ಮಾಡೋಕೆ ಕಳ್ಳತ‌ನಕ್ಕಿಳಿದ ವಿದ್ಯಾರ್ಥಿ!

0 8

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸ್ಕೂಲ್, ​ಕಾಲೇಜುಗಳಿಗೆ ಆಕ್ಟೀವ್ ಆಗಿ ಹೋಗುವುದಕ್ಕಿಂತ ಹೆಚ್ಚು ಸೋಷಿಯಲ್ ಮೀಡಿಯಾದಲ್ಲೇ ಆಕ್ಟೀವ್ ಆಗಿ ಇರ್ತಾರೆ. ಇನ್ನೂ ಕೆಲವರಿಗೆ ರೀಲ್ಸ್ ಅಂಡ್​ ಶಾರ್ಟ್ಸ್ ಮಾಡೋದು ಒಂದು ಹವ್ಯಾಸನೇ ಆಗಿಬಿಟ್ಟಿದೆ. ಹಾಗೇ ಇಲ್ಲೊಬ್ಬ ವಿದ್ಯಾರ್ಥಿ ರೀಲ್ಸ್​ ಮಾಡೋ ಹುಚ್ಚಿಗೆ ಕಳ್ಳತನಕ್ಕೆ ಕೈ ಹಾಕಿದ್ದಾನೆ. ಡಿಗ್ರಿ ಓದುತ್ತಿರುವ ಈತ ರೀಲ್ಸ್ ಗಾಗಿ ಕ್ಯಾಮೆರಾ ಕದ್ದು ಸಿಕ್ಕಿಬಿದ್ದಿದ್ದಾನೆ. ಇದೀಗ ವಿದ್ಯಾರ್ಥಿಯನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಬೆಂಗಳೂರಿನ ಪ್ರಜ್ವಲ್, ಕಾಲೇಜೊಂದರಲ್ಲಿ ಡಿಗ್ರಿ ಓದುತ್ತಿದ್ದ. ಈತನಿಗೆ ತುಂಬಾನೇ ರೀಲ್ಸ್​ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಹವ್ಯಾಸವಿತ್ತು. ಇನ್‌ಸ್ಟಾಗ್ರಾಂ ಹಾಗೂ ಯೂಟ್ಯೂಬ್‌ ನಲ್ಲಿ ಪ್ರಜ್ವಲ್ ತನ್ನದೇ ಖಾತೆ ಹೊಂದಿದ್ದ. ಈತ ರೀಲ್ಸ್ ಹಾಗೂ ಶಾರ್ಟ್ಸ್ ವೀಡಿಯೋಗಳನ್ನು ಆರಂಭದಲ್ಲಿ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಅಪ್ಲೋಡ್ ಮಾಡುತ್ತಿದ್ದ. ಆದರೆ, ಆತನ ವೀಡಿಯೋ ನೋಡುತ್ತಿದ್ದ ಹಲವರು ವೀಡಿಯೋ ಗುಣಮಟ್ಟ ಚೆನ್ನಾಗಿಲ್ಲವೆಂದು ಕಾಮೆಂಟ್ ಮಾಡುತ್ತಿದ್ದರು. ಈ ಕಾರಣದಿಂದಾಗಿ ಆರೋಪಿ ಪ್ರಜ್ವಲ್ ಹೊಸ ಕ್ಯಾಮೆರಾವನ್ನು ಖರೀದಿಸಲು ಮುಂದಾಗಿದ್ದ.

ಆದರೆ ಕ್ಯಾಮೆರಾ ಖರೀದಿಗೆ ಬೇಕಾಗುವಷ್ಟು ಹಣ ಪ್ರಜ್ವಲ್​ ಬಳಿ ಇರಲಿಲ್ಲ. ಹಾಗಾಗಿ, ಕ್ಯಾಮೆರಾವನ್ನು ಎಗರಿಸಲು ಹಲವಾರು ಬಾರಿ ಪ್ಲಾನ್​ ಮಾಡಿದ್ದನಂತೆ. ಹಾಗೇ ಮದುವೆ ನಡೆಯುತ್ತಿದ್ದ ಮಂಟಪವೊಂದಕ್ಕೆ ಸಂಬಂಧಿಕರ ಸೋಗಿನಲ್ಲಿ ಹೋಗಿದ್ದ ಆರೋಪಿ, ಅಲ್ಲಿದ್ದ ಕ್ಯಾಮೆರಾಮ್ಯಾನ್ ಜೊತೆ ಚೆನ್ನಾಗಿ ಮಾತನಾಡಿ ಬಳಿಕ ಆತನಿಗೆ ಗೊತ್ತಿಲ್ಲದ ಹಾಗೆ ಕ್ಯಾಮೆರಾ ಕದ್ದು ಅಲ್ಲಿಂದ ಕಾಲ್ಕಿತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದು ಮದುವೆ ಮಂಟಪದಲ್ಲಿ ಮಾತ್ರವಲ್ಲ, ಒಮ್ಮೆ Flipkart ನಲ್ಲಿ ಆರೋಪಿ ಹೊಸ ಕ್ಯಾಮೆರಾವನ್ನು ಬುಕ್​ ಮಾಡಿದ್ದ. ಕ್ಯಾಮೆರಾ ನೀಡುವುದಕ್ಕಾಗಿ ಡೆಲಿವರಿ ಬಾಯ್ ನಿಗದಿತ ವಿಳಾಸಕ್ಕೆ ತೆರಳಿದ್ದರು. ಅವರನ್ನು ಭೇಟಿಯಾಗಿದ್ದ ಆರೋಪಿ, ಆತನಿಂದ ಕ್ಯಾಮೆರಾ ಬಾಕ್ಸ್ ಕಿತ್ತುಕೊಂಡು ಹಣ ನೀಡದೇ ಅಲ್ಲಿಂದ ಓಡಿಹೋಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಈ ಬಗ್ಗೆ ಡೆಲಿವರಿ ಬಾಯ್ ದೂರು ನೀಡಿದ್ದರು. ಹಾಗೇ ಸಿಸಿಟಿವಿ ಕ್ಯಾಮೆರಾ ದೃಶ್ಯವನ್ನಾಧರಿಸಿ ತನಿಖೆ ಕೈಗೊಂಡಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ಫ್ಲಿಪ್‌ಕಾರ್ಟ್ ಜಾಲತಾಣದ ಡೆಲಿವರಿ ಬಾಯ್ ನೀಡಿದ್ದ ದೂರನ್ನಾಧರಿಸಿ ಪ್ರಜ್ವಲ್‌ನನ್ನು ಬಂಧಿಸಲಾಗಿದೆ. ₹ 3.68 ಲಕ್ಷ ಮೌಲ್ಯದ 2 ಕ್ಯಾಮೆರಾ, ಲೆನ್ಸ್ ಹಾಗೂ ಆ್ಯಪಲ್ ಕಂಪನಿಯ ಎರಡು ಇಯರ್ ಪಾಡ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಷ್ಟೇ ಅಲ್ಲದೆ, ಪ್ರಜ್ವಲ್​ ಗುಣಮಟ್ಟದ ಕ್ಯಾಮೆರಾಗಾಗಿ ಕಾಯುತ್ತಿದ್ದ. ಕೆಲವು ದಿನಗಳ ನಂತರ ಬಸವನಗುಡಿ ಠಾಣೆ ವ್ಯಾಪ್ತಿಯ ಪ್ರದೇಶವೊಂದರಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಆ ಸ್ಥಳಕ್ಕೆ ಹೋಗಿದ್ದ ಆರೋಪಿ, ಚಿತ್ರೀಕರಣಕ್ಕೆ ಅಗತ್ಯವಿದ್ದ ಹಲವು ವಸ್ತುಗಳನ್ನು ಕದ್ದಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದರು. ಹೊಸದಾಗಿ, ಗುಣಮಟ್ಟದ ರೀಲ್ಸ್ ಹಾಗೂ ಶಾರ್ಟ್ಸ್ ವೀಡಿಯೋ ಮಾಡುವ ಉದ್ದೇಶಕ್ಕಾಗಿ ಕ್ಯಾಮೆರಾ ಕಳ್ಳತನ ಮಾಡಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ರೀಲ್ಸ್ ಹುಚ್ಚಿಗೆ ಬಿದ್ದು ಈತ ತನ್ನ ಜೀವನವನ್ನು ಹಾಳು ಮಾಡಿಕೊಂಡಿದ್ದಾನೆ. ಸೋಷಿಯಲ್ ಮೀಡಿಯಾದ ಮೋಹಕ್ಕೆ ಒಳಗಾಗಿ ತನ್ನ ಒಳ್ಳೆಯ ಬದುಕನ್ನು ತಾನೇ ನಾಶಮಾಡಿಕೊಂಡಿದ್ದಾನೆ.

Leave A Reply