ಹೇನಿನ ಹೆಸರು ಕೇಳ್ತಿದ್ದಂತೆ ತಲೆಯಲ್ಲಿ ತುರಿಕೆನೇ ಶುರುವಾಗಿ ಬಿಡುತ್ತೆ. ಹೇನಿನ ಸಹವಾಸನೇ ಬೇಡಪ್ಪಾ. ಒಮ್ಮೆ ತಲೆಗೆ ಬಂದ್ರೆ ಮುಗ್ದೋಯ್ತು, ಪರ ಪರ ಅಂತ ತುರಿಸಿಕೊಳೊದೊಂದೆ ನಮ್ಮ ಕೆಲ್ಸ ಆಗ್ಬಿಡುತ್ತೆ. ಎಷ್ಟು ಕೆರ್ಕೊಂಡ್ರು ಸಾಲೋದಿಲ್ಲ. ಶಾಲೆಗೆ ಹೋಗುವ ಮಕ್ಕಳಲ್ಲಿ ಹೇನಿನ ಸಮಸ್ಯೆ ಸಾಮಾನ್ಯ. ಮಕ್ಕಳು ಹೇನು ತೆಗೆಯೋಕೆ ಬಿಡೋದಿಲ್ಲ. ಮಕ್ಕಳಲ್ಲಿ ಮಾತ್ರವಲ್ಲ ದೊಡ್ಡವರಲ್ಲೂ ಕೂಡ ಹೇನಿನ ಸಮಸ್ಯೆ ಕಾಡುತ್ತದೆ.
ತಲೆಯಲ್ಲಿ ಹೇನಾದಾಗ ವಿಪರೀತ ತುರಿಕೆಯಾಗುತ್ತದೆ. ಕೂದಲಿನ ಮೇಲೆ ಬಿಳಿ ಸಿಗುರು ಕಾಣಿಸಿಕೊಳ್ಳುತ್ತದೆ. ಅಲ್ಲದೆ ಕಿರಿಕಿರಿ, ನೆತ್ತಿ ಉರಿ ಹಾಗೂ ತುರಿಕೆಯಾಗುತ್ತದೆ. ಹೇನನ್ನು ತೆಗೆಯಲು ಅನೇಕ ಸಾಬೂನು, ಕ್ರೀಮ್, ಶ್ಯಾಂಪೂಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇದಲ್ಲದೆ ವೈದ್ಯರು ಸೂಚಿಸುವ ಔಷಧಿಗಳನ್ನು ನೀವು ಖರೀದಿಸಿ ಬಳಸಬಹುದು. ನಾವೀಗ ನಿಮಗೆ ಅದ್ರಿಂದ ತಪ್ಪಿಸಿಕೊಳ್ಳಲು ಕೆಲ ಮನೆ ಮದ್ದನ್ನು ತಿಳಿಸಿಕೊಡುತ್ತೇವೆ.
ಮೊದಲು ನೀರಿನಿಂದ ಕೂದಲನ್ನು ಒದ್ದೆ ಮಾಡಿಕೊಳ್ಳಿ ನಂತರ ಕೂದಲನ್ನು ಕೆಳಮುಖವಾಗಿ ಮಾರುಕಟ್ಟೆಯಲ್ಲಿ ಸಿಗುವ ಹೇನಿನ ಬಾಚಣಿಕೆಯಿಂದ ಬಾಚಬೇಕು. ನೀವು ಹೀಗೆ ಬೇರಿನಿಂದ ಕೆಳಮುಖವಾಗಿ ಕೂದಲು ಬಾಚಿದ್ರೆ ಹೇನು ಕೆಳಗೆ ಬೀಳುತ್ತದೆ. ಇಲ್ಲವೆ ಬಾಚಣಿಕೆಗೆ ಅಂಟಿಕೊಳ್ಳುತ್ತದೆ. ನೀವು ದಿನಕ್ಕೆ ಮೂರ್ನಾಲ್ಕು ಬಾರಿ ಹೀಗೆ ಬಾಚಿ ಹೇನನ್ನು ತೆಗೆಯಬೇಕು.
ಬೇವಿನ ಎಲೆ: ಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದು ಅವುಗಳಿಂದ ಪೇಸ್ಟ್ ತಯಾರಿಸಿ ಕೂದಲಿನ ಬೇರುಗಳಿಗೆ ಚೆನ್ನಾಗಿ ಹಚ್ಚಿಕೊಳ್ಳಿ. ಪೇಸ್ಟ್ ಒಣಗಿದ ನಂತರ, ಅದನ್ನು ಚೆನ್ನಾಗಿ ತೊಳೆದು ನೆನೆಸಿದ ಕೂದಲನ್ನು ಬೇರಿನಿಂದ ತುದಿಯವರೆಗೆ ಬಾಚಿ. ಹೀಗೆ ಮಾಡಿದರೆ ತಲೆಯಲ್ಲಿರುವ ಹೇನು ಸಾಯುತ್ತದೆ.
ಟೀ ಟ್ರೀ ಎಣ್ಣೆ:- ರಾತ್ರಿ ಟೀ ಟ್ರೀ ಎಣ್ಣೆಯನ್ನು ಕೂದಲಿನ ಬೇರುಗಳಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ, ಬೆಳಿಗ್ಗೆ ಶಾಂಪೂವಿನಿಂದ ಸ್ನಾನ ಮಾಡಿದ ನಂತರ ಕೂದಲನ್ನು ಬಾಚಬೇಕು.
ಹೇನು ಒಬ್ಬರಿಂದ ಒಬ್ಬರಿಗೆ ಹರಡುವ ಕಾರಣ, ಹೇನಿರುವ ವ್ಯಕ್ತಿಯಿಂದ ದೂರ ಮಲಗುವುದು, ಅವರು ಬಳಸಿದ ಹಾಸಿಗೆ ಬಟ್ಟೆ ಮತ್ತು ಟವೆಲ್ ಗಳನ್ನು ಬಿಸಿ ನೀರಿನಲ್ಲಿ ತೊಳೆದು ಮರು ಬಳಕೆ ಮಾಡುವುದು ಒಳ್ಳೆಯದು.
ಈ ತಪ್ಪನ್ನು ಯಾವುದೇ ಕಾರಣಕ್ಕೂ ಮಾಡಬೇಡಿ
ಸೀಮೆ ಎಣ್ಣೆ ಹಾಗೂ ಗ್ಯಾಸೋಲಿನ್ ನಿಂದ ಹೇನು ಸಾಯುತ್ತದೆ ಎನ್ನುವವರಿದ್ದಾರೆ. ಆದ್ರೆ ಯಾವುದೇ ಕಾರಣಕ್ಕೂ ಇವುಗಳನ್ನು ಕೂದಲಿಗೆ ಹಚ್ಚಲೇಬೇಡಿ.ಇದರಿಂದ ಹೇನು ಸಾಯುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷಿಯಿಲ್ಲ. ಆಲಿವ್ ಎಣ್ಣೆ, ಬೆಣ್ಣೆ, ಪೆಟ್ರೋಲಿಯಂ ಜೆಲ್ಲಿಯನ್ನು ಕೂಡ ಕೂದಲಿಗೆ ಹಾಕಬೇಡಿ.
ಹೇನು ತಲೆಯಲ್ಲಿ ಕೂದಲ ನಡುವೆ ರಕ್ತ ಹೀರಿ ಬದುಕುವ ಜೀವಿ. ಹೇನು ಭಯಪಡುವಂತಹ ಹುಳುವಲ್ಲ. ಆದ್ರೆ ಹೇನಿನ ಸಂಖ್ಯೆ ಮಿತಿ ಮೀರಿದರೆ, ತಲೆ ತುಂಬಾ ಮೊಟ್ಟೆ ಇಟ್ಟಿದೆ ಎಂದಾದ್ರೆ ನೀವು ವೈದ್ಯರನ್ನು ಭೇಟಿಯಾಗುವುದು ಉತ್ತಮ.