ಮದ್ಯ ಕುಡಿದು 24 ಆನೆಗಳು ಟೈಟ್ | ಇಹಲೋಕದ ಪರಿವೇ ಇಲ್ಲದೆ ಮಲಗಿದ ಆನೆಯನ್ನು ಎಚ್ಚರಗೊಳಿಸಿದ್ದು ಹೀಗೆ…

ಆನೆಗಳು ನೀರು ಕುಡಿಯುವುದು ಕೇಳಿದ್ದೇವೆ. ಆದರೆ ಒಡಿಶಾದ ಕಾಡಿನಲ್ಲಿ, ಒಂದಲ್ಲ, ಎರಡಲ್ಲ ಸುಮಾರು 24 ಆನೆಗಳು ಮದ್ಯ ಕುಡಿದು ಟೈಟ್ ಆಗಿ ಪ್ರಪಂಚದ ಪರಿವೇ ಇಲ್ಲದೆ ಗಾಢ ನಿದ್ರೆಗೆ ಜಾರಿರುವ ಘಟನೆ ನಡೆದಿದೆ. ಇನ್ನೂ ಈ ಆನೆಗಳು ಮದ್ಯ ಸೇವಿಸಿದ್ದಾದರೂ ಹೇಗೆ? ಮದ್ಯ ಎಲ್ಲಿಂದ? ಕೊನೆಗೆ ಆನೆಗಳನ್ನು ಎಚ್ಚರಗೊಳಿಸಿದ್ದಾದರೂ ಹೇಗೇ ಎಂಬ ಕುತೂಹಲವನ್ನು ಪರಿಹರಿಸಿಕೊಳ್ಳೋಣ.

ಒಡಿಶಾದ ಕಾಡಿನಲ್ಲಿ 24ಕ್ಕೂ ಹೆಚ್ಚು ಆನೆಗಳು ಮದ್ಯ ಸೇವಿಸಿ ಗಾಢ ನಿದ್ರೆಗೆ ಜಾರಿರುವ ಘಟನೆ ನಡೆದಿದೆ. ಕಾಡಿನ ಪಕ್ಕದ ಹಳ್ಳಿಯ ಜನರು ಕಾಡಿನಲ್ಲಿ ಮದ್ಯ ತಯಾರಿಸಿ ಇರಿಸಿದ್ದರು. ಆ ದಾರಿಯಾಗಿ ಬಂದ ಆನೆಗಳ ಹಿಂಡು ಅವರು ಮಾಡಿದ್ದ ಮದ್ಯವನ್ನು ಸೇವನೆ ಮಾಡಿದೆ. ಅಮಲೇರಿದ ಹೂವುಗಳಿಂದ ಮಾಡಲಾಗಿದ್ದ ಮಹುವಾ ಮದ್ಯವನ್ನು ಸೇವನೆ ಮಾಡಿದ ಆನೆಗಳು ಅಲ್ಲೇ ನಿದ್ರೆಗೆ ಜಾರಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಕಿಯೋಂಜಾರ್ ಜಿಲ್ಲೆಯ ಶಿಲಿಪಾಡಾ ಗೋಡಂಬಿ ಅರಣ್ಯದ ಬಳಿ ವಾಸಿಸುವ ಗ್ರಾಮಸ್ಥರು ಮದ್ಯಪಾನ ಮಾಡಲು ಮಹುವಾ ಹೂವುಗಳನ್ನು ಹುದುಗುವಿಕೆಗಾಗಿ ದೊಡ್ಡ ಮಡಿಕೆಯಲ್ಲಿ ಇಟ್ಟಿದ್ದರು. ಅವರು ಅಲ್ಲಿಂದ ತೆರಳಿದ ನಂತರ ಅಲ್ಲಿಗೆ ಬಂದ ಆನೆಗಳ‌ ದಂಡು ಅವುಗಳನ್ನು ನೋಡಿ ಸೇವನೆ ಮಾಡಿದೆ ಎನ್ನಲಾಗಿದೆ.

ಈ ಬಗ್ಗೆ ಹೇಳಿದ ನಾರಿಯಾ ಸೇಥಿ ಗ್ರಾಮಸ್ಥರೊಬ್ಬರು, ನಾವು ಮಹುವಾ ತಯಾರಿಸಲು ಬೆಳಿಗ್ಗೆ 6 ಗಂಟೆಗೆ ಕಾಡಿನೊಳಗೆ ಹೋಗಿದ್ದೇವೆ. ಆದರೆ ಅಲ್ಲಿಗೆ ಹೋಗಿ ನೋಡಿದಾಗ ನಮಗೆ ಆಶ್ಚರ್ಯ ಕಾದಿತ್ತು. ಯಾಕಂದ್ರೆ ನಾವು ಈ ಮೊದಲು ಮಹುವಾ ಹೂವು ಇರಿಸಲಾಗಿದ್ದ ಮಡಕೆಗಳು ಒಡೆದು ಹೋಗಿತ್ತು. ಮತ್ತು ಹುದುಗಿಸಿದ ನೀರು ಕಾಣೆಯಾಗಿತ್ತು. ಒಡೆದ ಮಡಕೆಯ ಪಕ್ಕದಲ್ಲೇ ಆನೆಗಳು ಮಲಗಿದ್ದವು. ಅವು ಹುದುಗಿಸಿದ ನೀರನ್ನು ಸೇವಿಸಿ ಅಮಿಲಿನಲ್ಲಿ ಮಲಗಿತ್ತು ಎಂದು ಪಿಟಿಐಗೆ ತಿಳಿಸಿದ್ದಾರೆ. ಆ ಮದ್ಯವನ್ನು ಸಂಸ್ಕರಿಸಲಾಗಿಲ್ಲ, ಆನೆಗಳನ್ನು ಎಷ್ಟು ಎಚ್ಚರಗೊಳಿಸಲು ಪ್ರಯತ್ನಿಸಿದರೂ ಅದು ಅಮಿಲಿನಿಂದ ಎಚ್ಚರಗೊಳಲಿಲ್ಲ. ಈ ವಿಚಾರ ನಂತರ ಅರಣ್ಯ ಇಲಾಖೆಗೆ ತಿಳಿಸಲಾಯಿತು ಎಂದು ಅವರು ಹೇಳಿದರು.

ಪಟನಾ ಅರಣ್ಯ ವ್ಯಾಪ್ತಿಯ ಕಾಡಿಗೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು, ಆನೆಗಳು ಏನೂ ಮಾಡಿದರೂ ಎಚ್ಚರಗೊಳ್ಳದಿದ್ದಾಗ ಆನೆಗಳನ್ನು ಎಬ್ಬಿಸಲು ಡೋಲು ಬಾರಿಸಬೇಕಾಯಿತು. ಡೋಲು ಬಾರಿಸಿದ ತಕ್ಷಣ ಅದರ ಸದ್ದಿಗೆ ಬೇಗನೆ ಆನೆಗಳು ಎದ್ದು ಕಾಡಿನೊಳಗೆ ಓಡಿ ಹೋದವು ಎಂದು ಅರಣ್ಯ ಸಂರಕ್ಷಣಾಧಿಕಾರಿ ಘಾಸಿರಾಮ್ ಪಾತ್ರ ತಿಳಿಸಿದ್ದಾರೆ.

ಆದರೆ ಆನೆಗಳು ಹುದುಗಿಸಿದ ಮಹುವಾ ಕುಡಿದಿದೆ ಎಂದು ಅರಣ್ಯಾಧಿಕಾರಿಗೆ ಖಚಿತ ಪಡಿಸಿಲ್ಲ. ಆನೆಗಳು ಪ್ರಯಾಣದ ಆಯಾಸ ನಿವಾರಿಸಲು ಅಲ್ಲಿ ವಿಶ್ರಾಂತಿ ಪಡೆಯುತ್ತಿತ್ತು ಎಂದು ಅವರು ಹೇಳಿದರು. ಆದರೆ ಗ್ರಾಮಸ್ಥರು ಆನೆಗಳು ನಾವು ಮಾಡಿದ್ದ ಮದ್ಯವನ್ನು ಸೇವನೆ ಮಾಡಿ ಮಲಗಿರುವುದು ಎಂದು ಹೇಳಿದ್ದಾರೆ.

Leave A Reply