ಹುಳಿ ಬರುವ ಮೊದಲೇ ಗುರಿ ತಲುಪುವ ಇಡ್ಲಿ-ದೋಸೆ ಹಿಟ್ಟು ಟ್ಯಾಂಕರ್ | ‘ ಹೋಗ್ತ ಹೋಗ ಹುದುಗುವಿಕೆ ‘ ಕಾನ್ಸೆಪ್ಟ್ ನ ಈ ಉತ್ಪನ್ನ ಗೃಹಿಣಿಯರ ಮನ ಗೆಲ್ಲೋದು ಪಕ್ಕಾ !

ಮಹಿಳೆಯರೇ, ನಿಮ್ಮ ಸಹಾಯಕ್ಕೆ ಮತ್ತೊಂದು ಸಂಸ್ಥೆ ಮುಂದೆ ಬಂದಿದೆ. ಇನ್ಮುಂದೆ ಅಕ್ಕಿ ನೆನೆಸಿಟ್ಟು, ಉದ್ದು ಹಾಕಿಟ್ಟು, ಸಂಜೆಯ ಒಳಗೇ ರುಬ್ಬಿಟ್ಟು, ನಾಳೆ ಬೆಳಿಗ್ಗೆ ಮನೆಮಂದಿಗೆ ದೋಸೆ, ಇಡ್ಲಿ ಮಾಡಲು ತಯಾರಿ ನಡೆಸುವ ಅಗತ್ಯ ಇಲ್ಲ. ಬೆಳಿಗ್ಗೆ ಹೇಗೂ ಪೇಪರ್ ಹಾಲು ತರಲು ಅಥವಾ ವಾಕಿಂಗ್ ಮಾಡಲು ಯಜಮಾನರು ಅಂಗಡಿಗೆ ಹೋಗಿಯೇ ಹೋಗ್ತಾರೆ, ಅವರಲ್ಲಿ, ” ರೀ, ಮುಕ್ಕಾಲು ಕೆಜಿ ದೋಸ ಹಿಟ್ಟು ತಗೊಂಡ್ ಬಣ್ರಿ ” ಅಂತ ಸಣ್ಣದಾಗಿ ಆರ್ಡರ್ ಮಾಡಿದ್ರೆ ಸಾಕು. ಅಲ್ಲಿಂದ ಕೆಲವೇ ನಿಮಿಷಗಳಲ್ಲಿ ಮನೆಮಂದಿಯೆಲ್ಲ ಒಟ್ಟಿಗೆ ಕೂತು, ದೋಸಾ , ಇಡ್ಲಿ ಸವಿಯಬಹುದು !

ಹೌದು ಅಂತಹ ವಿನೂತನ ಪ್ರಯತ್ನ ಈಗ ಮಾರುಕಟ್ಟೆಗೆ ಬಂದಿದೆ. ಅನ್ವೇಷಣೆ ಮತ್ತು ಪ್ರಯೋಗಗಳು ಆಹಾರ ಕ್ಷೇತ್ರವನ್ನೂ ಬಿಟ್ಟಿಲ್ಲ. ಆಗಾಗ ಹೊಸ ಹೊಸ ಆವಿಷ್ಕಾರಗಳಾಗುತ್ತಿರುತ್ತವೆ. ಹೊಸ ಆಹಾರದ ತಯಾರಿಕೆಯಿಂದ ಹಿಡಿದು ಆಹಾರದ ಶೇಖರಣೆ, ಸರಬರಾಜು ಮುಂತಾದ ಕಡೆ ಅತ್ಯಾಧುನಿಕ ತಂತ್ರಜ್ಞಾನಗಳು ಬಂದು ಬಿಟ್ಟಿವೆ. ಇದೀಗ ದೋಸೆ ಹಿಟ್ಟು, ಇಡ್ಲಿ ಹಿಟ್ಟು ಸರಬರಾಜು ವಿಷಯದಲ್ಲೂ ಅಂಥದ್ದೇ ಒಂದು ಹೊಸ ತಂತ್ರಜ್ಞಾನ ಕಂಡುಕೊಳ್ಳಲಾಗಿದೆ.

ಕಳೆದ ಕೆಲ ದಿನಗಳ ಹೊಂದೆ ಇಡ್ಲಿಯನ್ನು ಎಟಿಎಂ ಮೂಲಕ ದಿನದ ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ ನೀಡುವಂಥ ಕೇಂದ್ರವೊಂದು ಬೆಂಗಳೂರಿನಲ್ಲಿ ಆರಂಭವಾಗಿರುವ ಸುದ್ದಿಯನ್ನು ನಾವು ನಿಮಗೆ ನೀಡಿದ್ದೆವು.
ಇದೀಗ ಇಡ್ಲಿ-ದೋಸೆ ಹಿಟ್ಟನ್ನು ಪೆಟ್ರೋಲ್ ಡೀಸೆಲ್ ಹಾಲು ಸಾಗಾಟದ ಥರದ ವಿಶೇಷ ಟ್ಯಾಂಕರ್‌ನಲ್ಲಿ ಸರಬರಾಜು ಮಾಡುವಂಥ ಯೋಜನೆಯೊಂದನ್ನು ಇಡ್ಲಿ-ದೋಸೆ ಹಿಟ್ಟು ಉತ್ಪಾದಿಸುವ ಸಂಸ್ಥೆಯೊಂದು ಮಾಡಿದೆ. ಅದಕ್ಕೆ ‘ ಹೋಗ್ತ ಹೋಗ ಹುದುಗುವಿಕೆ ‘ (ಫರ್ಮೆಂಟೇಷನ್ ಆನ್ ದ ಗೋ) ಎನ್ನುವ ಹೆಸರೂ ಇಟ್ಟಿದೆ.

‘ ಹೋಗ್ತ ಹೋಗ ಹುದುಗುವಿಕೆ ‘ ಎಂಬ ಕಾನ್ಸೆಪ್ಟ್ ನಲ್ಲಿ ಇಡ್ಲಿ-ದೋಸೆ ಹಿಟ್ಟು ಸರಬರಾಜು ಮಾಡುವ ಯೋಜನೆಯೊಂದನ್ನು ಬೆಂಗಳೂರು ಮೂಲದ ಐಡಿ ಪ್ರೆನ್‌ವುಡ್ ಕಂಪನಿ ಹಾಕಿಕೊಂಡಿದೆ. ಹುದುಗುವಿಕೆ, ಅಥವಾ ಹುಳಿ ಬರಿಸುವಿಕೆ ಎಂಬುದು ಒಂದು ನಿಯಂತ್ರಿತ ವಾತಾವರಣದೊಳಗೆ, ಇಂತಿಷ್ಟೇ ಉಷ್ಣತೆಯಲ್ಲಿ ಚೆನ್ನಾಗಿ ನಡೆಯುತ್ತದೆ. ಹೀಗೆ ಹುಳಿಬರಿಸಿ ನಂತರ ಅದನ್ನು ಬೇರೆ ಊರುಗಳಿಗೆ ಸಾಗಿಸಿದಾಗ ಅದು ಇನ್ನಷ್ಟು ಹುಳಿ ಬಂದು ಅಡಿಗೆಯ ರುಚಿ ಕೆಡಿಸುತ್ತದೆ. ಅದರಲ್ಲೂ ಒಂದು ದಿನ ತಡವಾಗಿ ತಲುಪುವುದರಿಂದ ಹಿಟ್ಟಿನ ಗುಣಮಟ್ಟದಲ್ಲಿ ದೊಡ್ಡ ಲೋಪ ಉಂಟಾಗಬಹುದು. ಹೀಗಾಗಿ ನಮ್ಮ ಗ್ರಾಹಕರು ಉತ್ತಮ ಇಡ್ಲಿ-ದೋಸೆ ಹಿಟ್ಟನ್ನೇ ಪಡೆಯುವಂತಾಗಬೇಕು ಎಂಬ ನಿಟ್ಟಿನಲ್ಲಿ ಈ ಐಡಿಯಾ ಕಂಡುಕೊಂಡಿದ್ದೇವೆ. ಈ ಮೂಲಕ ನಾವು ಇದೀಗ ಪ್ಯಾಕ್ ಮಾಡಲಾದ ಇಡ್ಲಿ-ದೋಸೆ ಹಿಟ್ಟನ್ನು ಹುದುಗುವಿಕೆ ನಡೆಯುವ ಮೊದಲೇ ದೂರದ ಸ್ಥಳಗಳಿಗೆ ಕಳಿಸುವ ಉಪಾಯ ಕಂಡುಕೊಂಡಿದ್ದೇವೆ ಎಂದಿದೆ ಈ ರೆಡಿ ಮಿಕ್ಸ್ ಇಡ್ಲಿ ತಂಡ.

ಅಗತ್ಯ ವಸ್ತುಗಳನ್ನು ರುಬ್ಬಿದ ನಂತರ ರೆಡಿ ಮಿಕ್ಸ್ ಕಾಂಕ್ರೀಟ್ ಮಾಡೆಲ್‌ನ ಚಿಲ್ಲರ್ ವಾಹನದಲ್ಲಿ, ಲೋಡ್ ಮಾಡಿ ಕಳಿಸಲಾಗುತ್ತದೆ. ದೂರದ ಊರಿಗೆ ಹೋಗ್ತ ಹೋಗ್ತ ಹುದುಗುವಿಕೆ ನಡೆದು ಹೋಗ್ತದೆ. ನಿಯಂತ್ರಿತ ವಾತಾವರಣದಲ್ಲಿ ನಡೆಯುವುದರಿಂದ, ಅದು ಗ್ರಾಹಕರನ್ನು ತಲುಪುವಶ್ಟರಲ್ಲಿ ತಾಜಾ ಇಡ್ಲಿ ದೋಸೆ ಮಾಡಲು ರೆಡಿ ಯಾಗಿರುತ್ತದೆ.

ಮಹಿಳೆಯರು ಹಿಟ್ಟು ರುಬ್ಬುವ, ನಾಳೆ ಹುಳಿಬರುತ್ತಾ ಇಲ್ಲವಾ ಅಂತ ಕಾಯುವ ಅಗತ್ಯ ಇಲ್ಲದೆ ಈ ಹಿಟ್ಟು ಗ್ರಾಹಕರಿಗೆ ತಲುಪುತ್ತದೆ. ಮನೆಯಲ್ಲಿ ಘಮ್ಮನೆ ದೋಸೆ ಪರಿಮಳ ಹರಡುತ್ತದೆ – ಹೀಗೆ ಈ ರೆಡಿ ಮಿಕ್ಸ್ ಗೃಹಿಣಿಯರ ಮತ್ತು ಇಡ್ಲಿ ದೋಸಾ ಪ್ರಿಯ ಬ್ಯಾಚುಲರ್ ಗಳ ಹೆಚ್ಚಿನ ಉತ್ಪನ್ನ ಆಗಲಿದೆ.

Leave A Reply

Your email address will not be published.