ಕಾರಿನ ಮೇಲೆ ಸುಮಾರು 1 ಲಕ್ಷ ರೂಪಾಯಿಯ ಪಟಾಕಿ ಅಲಂಕರಿಸಿ ಸಿಡಿಸಿದ ಯೂಟ್ಯೂಬರ್ – ವೀಡಿಯೋ ವೈರಲ್

ದೀಪಗಳ ಹಬ್ಬ ದೀಪಾವಳಿಯಂದು ಪ್ರತಿಯೊಂದು ಮನೆಯಲ್ಲೂ ಸಂಭ್ರಮಾಚರಣೆ ಮನೆ ಮಾಡಿರುತ್ತದೆ. ಅದ್ರಲ್ಲೂ ದೀಪಾವಳಿಗೆ ದೀಪಗಳಿಗಿಂತಲೂ ಪಟಾಕಿ ಅಬ್ಬರವೇ ಹೆಚ್ಚು. ಪಟಾಕಿ ಸಿಡಿಸುವ ಮೂಲಕ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಆಚರಿಸುತ್ತಾರೆ.

ಇಂದು ಸಾಮಾನ್ಯವಾಗಿ ನೋಡಿದ ಪ್ರಕಾರ, ಯಾವುದೇ ಹಬ್ಬ ಇರಲಿ ಆಚರಣೆ ಇರಲಿ ಸೋಶಿಯಲ್ ಮೀಡಿಯಾ ಮೂಲಕ ಹೆಚ್ಚಿನ ಜನ ಆಚರಣೆಯನ್ನು ಶೇರ್ ಮಾಡುತ್ತಾರೆ.  ಅದ್ರಲ್ಲೂ ಯೂಟ್ಯೂಬರ್ಸ್ ಗಳನ್ನು ಕೇಳುವುದೇ ಬೇಡ. ವಿಡಿಯೋ ಅಪ್ಲೋಡ್ ಮಾಡುವುದಕ್ಕಾಗಿ ಎಲ್ಲಾ ದೃಶ್ಯಗಳನ್ನು ಸೆರೆ ಹಿಡಿಯುತ್ತಾರೆ. ಆದ್ರೆ, ಇಲ್ಲೊಂದು ಕಡೆ ಯೂಟ್ಯೂಬರ್ ಮಾಡಿದ್ದು ಮಾತ್ರ ಎಂತಹ ಕೆಲಸ ಗೊತ್ತಾ?

ಹೌದು. ರಾಜಸ್ಥಾನದ ಪ್ರಸಿದ್ಧ ಯೂಟ್ಯೂಬರ್ ಒಬ್ಬ ತನ್ನ ಸ್ವಿಫ್ಟ್ ಕಾರಿನ ಮೇಲೆ ಸುಮಾರು 1 ಲಕ್ಷ ರೂಪಾಯಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾನೆ. ಯೂಟ್ಯೂಬರ್ ಆಗಿರುವ ಅಮಿತ್ ಶರ್ಮಾ ಅವರು ತಮ್ಮ ಚಾನಲ್‌ ನಲ್ಲಿ ವಿವಿಧ ರೀತಿಯ ವೀಡಿಯೊಗಳನ್ನು ಮಾಡುವ ಮೂಲಕ ಸಾಕಷ್ಟು ಪ್ರಸಿದ್ಧರಾಗಿದ್ದಾರೆ.

ತನ್ನ  ಕಾರಿನ ಮೇಲೆ ಪಟಾಕಿಗಳನ್ನು ಸೇರಿಸಿ, ಮುಂಭಾಗದ ಗಾಜು ಮತ್ತು ಹೆಡ್‌ಲೈಟ್‌ಗಳನ್ನು ಹಾಗೆಯೇ ಬಿಟ್ಟಿದ್ದಾನೆ. ವೀಡಿಯೋದಲ್ಲಿ ಪಟಾಕಿಗಳಿಂದ ಅಲಂಕೃತವಾಗಿರುವ ಕಾರನ್ನು ನೋಡಬಹುದು. ಕಾರಿನ ಮೇಲೆ ಪಟಾಕಿಗಳನ್ನು ಸಿಡಿಸಿದ ಬಳಿಕ ಕಾರು ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿದೆ. ಆದರೆ ಆ ಕಾರಿಗೆ ಯಾವುದೇ ರೀತಿ ತೊಂದರೆ ಆಗಿಲ್ಲ. ಇನ್ನೂ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇಲ್ಲಿ ನಾವು ನೋಡುತ್ತಿರುವ ಕಾರು ಮಾರುತಿ ಸುಜುಕಿ ಸ್ವಿಫ್ಟ್ ಎಂದು ಕಾಣುತ್ತಿದೆ. ಇಡೀ ದೃಶ್ಯ ಬಯಲು ಜಾಗದಲ್ಲಿ ನಡೆದಿದ್ದರಿಂದ ಸ್ಫೋಟಗೊಂಡರೂ ಯಾವುದೇ ಅನಾಹುತ ಸಂಭವಿಸುತ್ತಿರಲಿಲ್ಲ. ಒಟ್ಟಿನಲ್ಲಿ ಈ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ. ಸದ್ಯ ಕಾರಿನ ಮೇಲೆ ಪಟಾಕಿಗಳನ್ನಿಟ್ಟು ಸಿಡಿಸಿದ ವಿಡಿಯೋ ಸಖತ್ ವೈರಲ್ ಆಗಿದೆ. ಈ ವಿಡಿಯೋವನ್ನು ಸಿಕ್ಕಾಪಟ್ಟೆ ಷೇರ್ ಮಾಡಲಾಗುತ್ತಿದ್ದು, ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

Leave A Reply

Your email address will not be published.