ತನ್ನ ಮೊದಲ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳದ ಮುಸ್ಲಿಂ ವ್ಯಕ್ತಿ ಮರು ಮದುವೆಯಾಗುವಂತಿಲ್ಲ – ಹೈಕೋರ್ಟ್ ಮಹತ್ವದ ತೀರ್ಪು

ಓರ್ವ ಮುಸ್ಲಿಂ ಪುರುಷ ತನ್ನ ಹೆಂಡತಿ ಮತ್ತು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಾಗದಿದ್ದರೆ, ಕುರಾನ್ ನಿಯಮಗಳ ಪ್ರಕಾರ ಆತ ಎರಡನೇ ಮದುವೆಯಾಗಲು ಅವಕಾಶವಿಲ್ಲ ಅಲಹಾಬಾದ್ ಹೈಕೋರ್ಟ್ ( Allahabad Highcourt) ಮಹತ್ವದ ಹೇಳಿಕೆ ನೀಡಿದೆ. ಇದರ ಜೊತೆಗೆ ತನ್ನ ಮೊದಲ ಪತ್ನಿಯ ಇಚ್ಛೆಯನ್ನು ವಿರೋಧಿಸಿ, ಮತ್ತೊಂದು ವಿವಾಹವಾಗಿರುವ ವ್ಯಕ್ತಿ ಮೊದಲ ಪತ್ನಿ ಬಲವಂತವಾಗಿ ತನ್ನೊಂದಿಗೆ ಇರುಬೇಕೆಂದು ಒತ್ತಾಯಿಸುವಂತಿಲ್ಲ ಎಂದು ಹೇಳಿದೆ.

ಮುಸ್ಲಿಮ್ ಪುರುಷನು ತನ್ನ ಹೆಂಡತಿ ಮತ್ತು ಮಕ್ಕಳನ್ನು ಪೋಷಿಸುವ ಸಾಮರ್ಥ್ಯ ಆತನಿಗೆ ಇಲ್ಲದಿದ್ದರೆ, ಆತ ಇತರ ಮಹಿಳೆಯರನ್ನು ಮದುವೆಯಾಗುವ ಅರ್ಹತೆ ಇಲ್ಲ ಎಂಬುದಾಗಿ ಕುರಾನ್ ಹೇಳುತ್ತದೆ. ಹಾಗಾಗಿ ಈ ವಿಚಾರವಾಗಿ ನ್ಯಾಯಾಲಯದ ನಿರ್ಣಯವೂ ಅದೇ ಆಗಿರುತ್ತದೆ ಎಂದು ಕೋರ್ಟ್ ಹೇಳಿದೆ.

ಪ್ರಕರಣದ ಹಿನ್ನೆಲೆ : ಅಜೀಜುರಹ್ಮಾನ್ ಮತ್ತು ಹಮೀದುನ್ನಿಶಾ ಎಂಬುವವರಿಗೆ ಸಂಬಂಧಿಸದ ಪ್ರಕರಣದಲ್ಲಿ ಕೋರ್ಟ್ ಈ ಹೇಳಿಕೆ ನೀಡಿದೆ. ಈ ದಂಪತಿಗಳು ಮೇ 1999ರಲ್ಲಿ ವಿವಾಹವಾಗಿ ನಾಲ್ಕು ಮಕ್ಕಳನ್ನು ಪಡೆದಿದ್ದಾರೆ. ನಂತರ ಅಝೀಜುರಹ್ಮಾನ್ ಎರಡನೇ ಮದುವೆಯಾಗುತ್ತಾನೆ. ಜೊತೆಗೆ ಎರಡನೇ ಹೆಂಡತಿಯೊಂದಿಗೆ ಮಕ್ಕಳನ್ನು ಕೂಡಾ ಪಡೆಯುತ್ತಾನೆ. ಆದರೆ ಈತ ಈ ವಿಷಯವನ್ನು ತನ್ನ ಮೊದಲ ಹೆಂಡತಿ ಹಮೀದುನ್ನಿಶಾಳಿಂದ ಮುಚ್ಚಿಟ್ಟಿದ್ದ. ಆದರೆ ಈ ವಿಷಯ ತಿಳಿದ ಹಮೀದುನ್ನಿಶಾ ಬೇಸತ್ತು ತವರಿಗೆ ಬಂದಿದ್ದಾಳೆ.

ಅನಂತರ ಗಂಡ, ಕೌಟುಂಬಿಕ ನ್ಯಾಯಾಲಯದ ಮೂಲಕ, ಮೊದಲ ಹೆಂಡತಿ ತನ್ನೊಂದಿಗೆ ವಾಸಿಸುವಂತೆ ನಿರ್ದೇಶಿಸಲು ಕೋರಿದ್ದನು. ಆದರೆ ಈ ಕುರಿತು ಆಗಸ್ಟ್‌ನಲ್ಲಿ ನ್ಯಾಯಾಲಯವು ಅವರ ಮನವಿಯನ್ನು ತಿರಸ್ಕರಿಸಿತ್ತು. ನಂತರ ಅವರು ಅಲಹಾಬಾದ್ ಹೈಕೋರ್ಟ್‌ ನ ಮೊರೆ ಹೋಗುತ್ತಾನೆ. ಈ ಬಗ್ಗೆ ತೀರ್ಪಿತ್ತಿರುವ ನ್ಯಾಯಾಲಯವು ಮಹಿಳೆಯರ ಮೂಲಭೂತ ಹಕ್ಕುಗಳನ್ನು ಗೌರವಿಸುವಂತೆ ಒತ್ತಿಹೇಳಿದೆ. ‘ನ್ಯಾಯಾಲಯವು ಮದುವೆಯ ಪಾವಿತ್ರ್ಯವನ್ನು ಗೌರವಿಸುತ್ತದೆ, ಆದರೆ ಮೊದಲ ಹೆಂಡತಿಯ ಇಚ್ಛೆಗೆ ವಿರುದ್ಧವಾಗಿ, ಎರಡನೆಯವಳನ್ನು ವಿವಾಹವಾದ ಮುಸ್ಲಿಂ ಪುರುಷನು ತನ್ನೊಂದಿಗೆ ವಾಸಿಸಲು ಮೊದಲನೆಯ ಹೆಂಡತಿಯನ್ನು ಒತ್ತಾಯಿಸುವುದನ್ನು ನ್ಯಾಯಾಲಯವು ಒಪ್ಪುವುದಿಲ್ಲ. ಹಾಗೆ ಮಾಡಲು ಒತ್ತಾಯಿಸುವುದು ಅಸಮಾನತೆಯಾಗಿರುತ್ತದೆ” ಎಂದು ಹೇಳಿದೆ.

Leave A Reply

Your email address will not be published.