ಶಸ್ತ್ರ ಚಿಕಿತ್ಸೆಯ ನೆಪದಲ್ಲಿ ಮಹಿಳೆಯ ಜೀವದೊಂದಿಗೆ ಚೆಲ್ಲಾಟ!? ಮೆಲ್ಕಾರ್ ನಲ್ಲಿರುವ ಆರ್.ಆರ್.ಆಸ್ಪತ್ರೆಯ ವೈದ್ಯಾಧಿಕಾರಿ ವಿರುದ್ಧ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು!!

ಬಂಟ್ವಾಳ: ಇಲ್ಲಿನ ವಿಟ್ಲಮುಡ್ನೂರು ನಿವಾಸಿ ಚಂದ್ರಶೇಖರ ಎಂಬವರ ಪತ್ನಿ ಗರ್ಭಕೋಶದ ಚಿಕಿತ್ಸೆಗೆಂದು ಮೆಲ್ಕಾರ್ ನ ಆರ್.ಆರ್. ಕಮರ್ಷಿಯಲ್ ಸೆಂಟರ್ ನಲ್ಲಿರುವ ಆರ್.ಆರ್.ಆಸ್ಪತ್ರೆಗೆ ತೆರಳಿದ್ದು,ಅಲ್ಲಿ ಪರೀಕ್ಷಿಸಿದ ವೈದ್ಯೆ, ಆಸ್ಪತ್ರೆಯ ಮಾಲಕಿ ಡಾ| ಕಾವ್ಯ ರಶ್ಮಿ ರಾವ್ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಬಳಿಕ ಸಲಹೆ ನೀಡಿದ ವೈದ್ಯೆ ನಮ್ಮ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿದ್ದು, ಹಣ ಹೊಂದಿಸಲು ಹೇಳಿದ್ದರಂತೆ. ಇದಕ್ಕೆ ಒಪ್ಪಿಕೊಂಡ ದಂಪತಿ ಶಸ್ತ್ರಚಿಕಿತ್ಸೆಗೆ 60,000 ಹಣ ಹೊಂದಿಸಿದ್ದರು. ಬಳಿಕ ಶಸ್ತ್ರಚಿಕಿತ್ಸೆ ನಡೆದಿದ್ದು,ವೈದ್ಯರು ಹೇಳಿದಂತೆಯೇ ಶಸ್ತ್ರ ಚಿಕಿತ್ಸೆಯೂ ನಡೆದಿದ್ದು, ಈ ವೇಳೆ ಮಲ ವಿಸರ್ಜನಾ ಭಾಗಕ್ಕೆ ತೊಂದರೆಯಾಗಿದ್ದು,ಬಳಿಕ ಪುತ್ತೂರಿನ ಧನ್ವಂತರಿ ಆಸ್ಪತ್ರೆಗೆ ಸಾಗಿಸಲು ಹೇಳಿದ್ದಾರೆ ಎನ್ನಲಾಗಿದೆ.

ಅಲ್ಲಿಂದ ಧನ್ವಂತರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು,ಆರೋಗ್ಯದಲ್ಲಿ ಸುಧಾರಣೆಯಾಗಿತ್ತು.ಸುಮಾರು 1,75 ಸಾವಿರ ಮೊತ್ತ ಆಸ್ಪತ್ರೆಯ ಬಿಲ್ ಪಾವತಿಸಿ ಮನೆಗೆ ಹಿಂದಿರುಗಿದ್ದರು.ಇದಾಗಿ ಕೆಲ ದಿನಗಳಲ್ಲೇ ಮತ್ತೊಮ್ಮೆ ಆರ್.ಆರ್ ಆಸ್ಪತ್ರೆಗೆ ತೆರಳಿದ್ದು, ಈ ವೇಳೆ ಇನ್ನೊಂದು ಶಸ್ತ್ರಚಿಕಿತ್ಸೆಗಾಗಿ ಪುನಃ ಪುತ್ತೂರಿನ ಧನ್ವಂತರಿ ಆಸ್ಪತ್ರೆಗೆ ಪತಿಯ ಅನುಮತಿ ಇಲ್ಲದೇ ಕಳುಹಿಸಿದ್ದಾರೆ ಎಂದು ದೂರಲಾಗಿದ್ದು, ಎರಡನೇ ಬಾರಿ 1,70000 ಬಿಲ್ ಮಾಡಿದ್ದಾರೆ ಎಂದು ಹೇಳಲಾಗಿದೆ.

ಸದ್ಯ ಈ ಬಗ್ಗೆ ಮಹಿಳೆಯ ಪತಿ ಆರ್ ಆರ್ ಆಸ್ಪತ್ರೆಯ ವೈದ್ಯೆ ಹಾಗೂ ಆಸ್ಪತ್ರೆಯ ವಿರುದ್ಧ ಜಿಲ್ಲಾ ಆರೋಗ್ಯ ಅಧಿಕಾರಿಗೆ ಲಿಖಿತ ದೂರನ್ನು ನೀಡಿದ್ದು, ಚಿಕಿತ್ಸೆಯ ನೆಪದಲ್ಲಿ ಚಿತ್ರಹಿಂಸೆ ನೀಡುವುದಲ್ಲದೇ, ರೋಗಿಗಳಿಂದ ಹೆಚ್ಚಿನ ಹಣ ಪಡೆಯುವ ಆಸ್ಪತ್ರೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸದ್ಯ ಈ ವಿಚಾರ ಪತ್ರಿಕಾಗೋಷ್ಠಿಯ ಮೂಲಕ ಬಹಿರಂಗವಾಗಿದ್ದು, ಮುಂದಿನ ಕ್ರಮಕ್ಕಾಗಿ ಕಾದುನೋಡಬೇಕಿದೆ.

Leave A Reply

Your email address will not be published.