Kantara : ರಿಷಬ್ ಶೆಟ್ಟಿಯ ‘ನೋ ಕಮೆಂಟ್ಸ್ ‘ ಬಗ್ಗೆ ಭಾರೀ ಚರ್ಚೆ !!!

ರಾಜ್ಯದಲ್ಲಿ ‘ಕಾಂತಾರ’ ಹವಾ ಹೆಚ್ಚಾಗಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಕರಾವಳಿ ಪರಿಸರದ ಜೀವಾಳವನ್ನೇ ತೆರೆ ಮೇಲೆ ತಂದ ಚಿತ್ರವೇ ‘ಕಾಂತಾರ’. ಈ ಮೂಲಕ ಕರಾವಳಿಯ ಸೊಗಡನ್ನು ಕಟ್ಟಿಕೊಟ್ಟಿರುವ ರಿಷಬ್ ಶೆಟ್ಟಿಯವರ ಸಿನಿಮಾವನ್ನು ಪ್ರೇಕ್ಷಕರು, ಮಾಧ್ಯಮಗಳು ಸಂಭ್ರಮಿಸುತ್ತಿವೆ.

ಈ ಸಿನಿಮಾ ಹಿಟ್ ಆಗುವುದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಎಂದಿನಂತೆ ಎಡ-ಬಲದ ಚರ್ಚೆಯೂ ಜೋರಾಗಿ ನಡೆಯುತ್ತಿದೆ. ‘ಕಾಂತಾರ’ ಸಿನಿಮಾ, ವೈದಿಕ ಆಚರಣೆಗಳ ವಿರುದ್ಧ ಪ್ರತಿಭಟನೆ ಎಂದು ಕೆಲವರು ವಾದಿಸಿದರೆ, ಇದು ಹಿಂದೂ ಧರ್ಮದ ಅನಾವರಣ ಎಂದು ಕೆಲವರು ಚರ್ಚೆ ಮಾಡುತ್ತಿದ್ದಾರೆ. ಈ ಚರ್ಚೆ ಹೀಗೆ ಸಾಗುತ್ತಿರುವಾಗಲೇ ರಿಷಬ್ ಶೆಟ್ಟಿಯವರು ಕೆಲವು ರಾಜಕೀಯ ನಾಯಕರುಗಳ ಬಗ್ಗೆ ಮಾಡಿರುವ ‘ಕಮೆಂಟ್, ನೋ ಕಮೆಂಟ್’ ಸಹ ಚರ್ಚೆ ಆಗುತ್ತಿದೆ.

‘ಕಾಂತಾರ’ ಸಿನಿಮಾದ ಯಶಸ್ಸನ್ನು ಕಾಣುತ್ತಿರುವುದರಿಂದ ರಿಷಬ್ ಶೆಟ್ಟಿ ವಿವಿಧ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದು, ಇದರ ಅಂಗವಾಗಿಯೇ ಕನ್ನಡದ ಖಾಸಗಿ ಚಾನೆಲ್‌ಗೆ ಭೇಟಿ ನೀಡಿ ಸಂದರ್ಶಕಿಯೊಂದಿಗೆ ಮಾತನಾಡುತ್ತಾ ಅವರು ಕೇಳಿದ ಪ್ರಶ್ನೆಗಳಿಗೆ ಚುಟುಕು ಉತ್ತರ ನೀಡಿದ್ದಾರೆ. ‘ರಕ್ಷಿತ್ ಶೆಟ್ಟಿ?’ ಎಂದು ಸಂದರ್ಶಕಿ ಕೇಳಿದರೆ ‘ಗೆಳೆಯ’ ಎಂದು ಚುಟುಕಾಗಿ ರಿಷಬ್ ಶೆಟ್ಟಿ ಉತ್ತರಿಸುತ್ತಿದ್ದರು. ಹೀಗೆ ಹಲವು ಸಿನಿಮಾ ಸಂಬಂಧಿ ವ್ಯಕ್ತಿಗಳ ಬಗ್ಗೆ ಸಂದರ್ಶಕಿ ಕೇಳಿದ ಪ್ರಶ್ನೆಗಳಿಗೆ ರಿಷಬ್ ಶೆಟ್ಟಿ ಉತ್ತರಿಸಿದ್ದಾರೆ.

ಅನಂತರ ಸಂಂದರ್ಶಕಿ ಮೋದಿ-ರಾಹುಲ್ ಗಾಂಧಿ ಬಗ್ಗೆ ಕೇಳಿದರು. ನರೇಂದ್ರ ಮೋದಿ? ಎಂದು ಸಂದರ್ಶಕಿ ಕೇಳಿದಾಗ ‘ಅದ್ಭುತ ನಾಯಕ’ ಎಂದರು ರಿಷಬ್ ಶೆಟ್ಟಿ. ರಾಹುಲ್ ಗಾಂಧಿ? ಎಂದು ಪ್ರಶ್ನೆ ಎಸೆದಾಗ ಅದೇ ನಗುಮುಖದಲ್ಲಿ ‘ನೋ ಕಮೆಂಟ್ಸ್’ ಎಂದಿದ್ದಾರೆ ರಿಷಬ್. ಆ ಬಳಿಕ ಸಂದರ್ಶಕಿ, ‘ನಿಮ್ಮ ಪ್ರಕಾರ ಬೆಸ್ಟ್ ಸಿಎಂ ಯಾರು? ಸಿದ್ದರಾಮಯ್ಯ, ಎಚ್‌ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ?’ ಎಂದು ಪ್ರಶ್ನೆ ಕೇಳುತ್ತಾರೆ, ಮತ್ತೆ ಅದಕ್ಕೆ ‘ನೋ ಕಮೆಂಟ್ಸ್’ ಎನ್ನುತ್ತಾರೆ ರಿಷಬ್ ಶೆಟ್ಟಿ.

ಇಲ್ಲಿ ಚರ್ಚೆ ಆಗುತ್ತಿರುವ ವಿಷಯವೇನೆಂದರೆ ಮೋದಿಯವರನ್ನು ‘ಅದ್ಭುತ ನಾಯಕ’ ಎಂದು ಹೊಗಳಿದ ರಿಷಬ್ ಶೆಟ್ಟಿಯವರು, ರಾಹುಲ್ ಗಾಂಧಿ ಬಗ್ಗೆ ಕೇಳಿದಾಗ ‘ನೋ ಕಮೆಂಟ್ಸ್’ ಎಂದಿರುವುದರ ಬಗ್ಗೆ. ಬಿಜೆಪಿ ಪರ ಕಾರ್ಯಕರ್ತರು ರಿಷಬ್ ಅವರನ್ನು ತಮ್ಮ ‘ಪಕ್ಷದ ನಾಯಕ’ ಎಂಬಂತೆ ಹೊಗಳಿ ಸಂಭ್ರಮಿಸುತ್ತಿದ್ದಾರೆ. ಆದರೆ ಬಿಜೆಪಿಯನ್ನು ವಿರೋಧಿಸುತ್ತಿರುವವರು ರಿಷಬ್ ಶೆಟ್ಟಿಯರ ಏಕ ವ್ಯಕ್ತಿ ಪ್ರೀತಿ ಬಗ್ಗೆ ತಕರಾರು ಎತ್ತಿದ್ದಾರೆ. ಒಂದು ವೇಳೆ ‘ನರೇಂದ್ರ ಮೋದಿ?’ ಎಂದು ಸಂದರ್ಶಕಿ ಕೇಳಿದ್ದಾಗ ‘ನೋ ಕಮೆಂಟ್ಸ್’ ಎಂದು ರಿಷಬ್ ಹೇಳಿದ್ದರೆ ಏನಾಗಿರುತ್ತಿತ್ತು ಎಂದು ಸಹ ಕೆಲವರು ಪ್ರಶ್ನಿಸಿದ್ದಾರೆ.

Leave A Reply

Your email address will not be published.